ಕಾಂಗ್ರೆಸ್ ಶಾಸಕರ ಲಿಸ್ಟ್ ರೆಡಿ ಇದೆ ಎಂದು ಹೇಳಿರುವವರನ್ನು ಕರೆದುಕೊಂಡು ಹೋಗಿ ಮೆಂಟಲ್ ಆಸ್ಪತ್ರೆಗೆ ಸೇರಿಸಿ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಯಾವುದೇ ಪಟ್ಟಿ ಇಲ್ಲ. ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುವವರ ಲಿಸ್ಟ್ ಇದೆ.

ಹಾಸನ (ಜು.15): ಕಾಂಗ್ರೆಸ್ ಶಾಸಕರ ಲಿಸ್ಟ್ ರೆಡಿ ಇದೆ ಎಂದು ಹೇಳಿರುವವರನ್ನು ಕರೆದುಕೊಂಡು ಹೋಗಿ ಮೆಂಟಲ್ ಆಸ್ಪತ್ರೆಗೆ ಸೇರಿಸಿ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಯಾವುದೇ ಪಟ್ಟಿ ಇಲ್ಲ. ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುವವರ ಲಿಸ್ಟ್ ಇದೆ. ಆದರೆ ಈಗಲೇ ಕೊಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುವವರ ಲಿಸ್ಟ್ ಎಂ.ಬಿ.ಪಾಟೀಲ್‌ಗೆ ಕೊಟ್ಟಿದ್ದಾರೆ. ಆ ಲಿಸ್ಟ್ ಕೊಡ್ಲಾ! ಲಿಸ್ಟ್ ಇದೆ. ಈಗಲೇ ಕೊಡಲ್ಲ. ಅವರೆಲ್ಲಾ ಕಾಂಗ್ರೆಸ್‌ಗೆ ಬಂದ ಮೇಲೆ ಹೇಳ್ತಿನಿ ಎಂದು ಗೊಂದಲವಾಗಿ ಹೇಳಿಕೆ ನೀಡಿದರು. ಸೆಪ್ಟೆಂಬರ್‌ನಲ್ಲಿ ಕ್ರಾಂತಿ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಸೆಪ್ಟೆಂಬರ್ ಕ್ರಾಂತಿ ಈವಾಗಲೇ ಹೇಳಲ್ಲ ಎಂದು ಹೇಳಿದರು.

ಕಾರ್ಮಿಕರ ಮಕ್ಕಳಿಗಾಗಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ: ರಾಜ್ಯದಲ್ಲಿ ಮೊರಾರ್ಜಿ ವಸತಿ ಶಾಲೆಯಂತೆ ಕಾರ್ಮಿಕ ಇಲಾಖೆ ವತಿಯಿಂದಲೂ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ದೃಷ್ಟಿಯಿಂದ ವಸತಿ ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್. ರಾಜಣ್ಣ ಹೇಳಿದರು. ಹೋಬಳಿಯ ಗೂಳಿ ಹೊನ್ನೇನಹಳ್ಳಿ ಗ್ರಾಮದ ಸಮೀಪದ ಸೋಮವಾರ ಸಂತೆ ಬಳಿ ಸುಮಾರು 13.50 ಕೋಟಿ ರು. ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಘದ ವತಿಯಿಂದ ನಿರ್ಮಾಣಗೊಂಡಿದ್ದ ಹೋಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಪ್ರತಿ ಮಕ್ಕಳಿಗೂ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲೆಂದು ಶಿಕ್ಷಣ ಇಲಾಖೆಯ ಮೂಲಕ ರಾಜ್ಯ ಸರ್ಕಾರ ವಿದ್ಯಾರ್ಥಿ ಸ್ನೇಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಗುಣಮಟ್ಟದ ಫಲಿತಾಂಶಕ್ಕಾಗಿ ಹಲವು ಹೊಸ ಮಾರ್ಗಸೂಚಿ ಜಾರಿಗೆ ತರುವ ಮೂಲಕ ಉತ್ತಮ ಫಲಿತಾಂಶ ಬರಲು ಕಾರಣವಾಗಿದೆ. ಇದೇ ಮೊದಲ ಬಾರಿಗೆ ವಸತಿ ಶಾಲೆಗಳನ್ನು ಪ್ರಾರಂಭಿಸಲು ಇತ್ತೀಚೆಗೆ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ, ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿದ್ದು, ಇದರಿಂದ ರಾಜ್ಯದಲ್ಲಿರುವ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ವಸತಿ ಸಿಗಲಿದೆ ಎಂದರು.

ಕಳೆದ 2018ರಲ್ಲಿ ಹೋಬಳಿಯ ಮೊರಾರ್ಜಿ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತ್ತಿತ್ತು, ಅನೇಕ ಸಮಸ್ಯೆಗಳಿಂದ ವಿಳಂಬವಾದರೂ ಕಟ್ಟಡವನ್ನು ಗುಣಮಟ್ಟದಿಂದ ಕಟ್ಟಲಾಗಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಯ ದೃಷ್ಟಿಯಿಂದ ಉತ್ತಮ ವಾತಾವರಣದಲ್ಲಿ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ವಸತಿ ಶಾಲೆಯಲ್ಲಿ ಆಡಿಟೋರಿಯಂ, ಕ್ರೀಡಾಂಗಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ವತಿಯಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲೆಯ ಉಸ್ತುವಾರಿ ಸಚಿವರು ಕೆ. ಎನ್. ರಾಜಣ್ಣನವರು ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದಾರೆ, ತಾಲೂಕಿನ ಅಭಿವೃದ್ಧಿಗೂ ಸಹಕಾರ ನೀಡಿದ್ದಾರೆ. ತಾಲೂಕಿನಲ್ಲಿ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಬಾಗೂರು ಹಾಗೂ ಹಿರೀಸಾವೆ ಹೋಬಳಿಗಳಲ್ಲಿ ನೂತನ ಮೊರಾರ್ಜಿ ವಸತಿ ಶಾಲೆಗಳನ್ನು ಮಂಜೂರು ಮಾಡುವಂತೆ ಜೊತೆಗೆ ನುಗ್ಗೇಹಳ್ಳಿ ನೂತನ ಮೊರಾರ್ಜಿ ವಸತಿ ಶಾಲೆಯಲ್ಲಿ ಆಡಿಟೋರಿಯಂ ಮತ್ತು ಕ್ರೀಡಾಂಗಣ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 2 ಕೋಟಿ ಅನುದಾನ ನೀಡುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.