ಬಿಜೆಪಿ ಎಷ್ಟೇ ಅಕ್ರಮ ದಾರಿ ಹಿಡಿದರೂ ಈ ಬಾರಿ ಸೋಲಿಸಲು ಜನರು ನಿರ್ಧರಿಸಿದ್ದಾರೆ. ಈವರೆಗೆ ಕಾಂಗ್ರೆಸ್‌ 136 ಸ್ಥಾನ ಗಳಿಸುವುದಾಗಿ ಇದ್ದ ಸಮೀಕ್ಷೆ ಇದೀಗ 140 ಸ್ಥಾನಕ್ಕೆ ಹೋಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್‌ 

ಬೆಂಗಳೂರು(ಮಾ.08): ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು 50 ದಿನ ಮಾತ್ರ ಬಾಕಿ ಉಳಿದಿದೆ. ಆದರೆ, ತರಾತುರಿಯಲ್ಲಿ ಅಲ್ಪಾವಧಿ ಟೆಂಡರ್‌ ಮೂಲಕ ಅಕ್ರಮವಾಗಿ ಹಣ ಲೂಟಿ ಹೊಡೆಯಲು ಉದ್ದೇಶಪೂರ್ವಕವಾಗಿ ಚುನಾವಣೆ ದಿನಾಂಕ ಮುಂದೂಡುತ್ತಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಕೂಡಲೇ ದಿನಾಂಕ ನಿಗದಿ ಮಾಡಿ ರಾಜ್ಯ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ತಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಮಾ.28 ಕೊನೆಯ ಕೆಲಸದ ದಿನ ಎಂದು ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಗುಜರಾತ್‌ ಚುನಾವಣೆ ನಂತರ ರಾಜ್ಯದಲ್ಲಿ ಬಹಳ ತರಾತುರಿಯಲ್ಲಿ ಚುನಾವಣೆ ನಡೆಸಲು ಸಭೆ ನಡೆಸಿ ದಿನಾಂಕ ನಿಗದಿ ಮಾಡಿದ್ದರು. ಈಗ ಎಷ್ಟು ಅವಕಾಶ ಸಿಗುತ್ತೋ ಅಷ್ಟೂ ಲೂಟಿ ಹೊಡೆಯಲು ದಿನಾಂಕ ಮುಂದಕ್ಕೆ ಹಾಕುತ್ತಿದ್ದಾರೆ. ಬಿಜೆಪಿ ಎಷ್ಟೇ ಅಕ್ರಮ ದಾರಿ ಹಿಡಿದರೂ ಈ ಬಾರಿ ಸೋಲಿಸಲು ಜನರು ನಿರ್ಧರಿಸಿದ್ದಾರೆ. ಈವರೆಗೆ ಕಾಂಗ್ರೆಸ್‌ 136 ಸ್ಥಾನ ಗಳಿಸುವುದಾಗಿ ಇದ್ದ ಸಮೀಕ್ಷೆ ಇದೀಗ 140 ಸ್ಥಾನಕ್ಕೆ ಹೋಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಕ್ಕರ್‌ ಬಾಂಬ್‌ ಬಗ್ಗೆ ಈಗ ಡಿಕೆಶಿ ಏನೆನ್ನುತ್ತಾರೆ?: ಸಿಎಂ ಬೊಮ್ಮಾಯಿ ತಿರುಗೇಟು

ದಿನನಿತ್ಯ ಬಿಜೆಪಿಗೆ ಆಘಾತಕಾರಿ ಸುದ್ದಿ ಬರುತ್ತಿದೆ. ಹೊರಗಿನಿಂದ ಮಾತ್ರವಲ್ಲ ಬಿಜೆಪಿ ಪಕ್ಷದಲ್ಲೇ ಆಂತರಿಕವಾಗಿ ಆಘಾತಗಳು ಆಗುತ್ತಿವೆ. ರಾಷ್ಟ್ರೀಯ ನಾಯಕರು ನೆರೆ, ಕೋವಿಡ್‌ ಸಮಯದಲ್ಲಿ ರಾಜ್ಯಕ್ಕೆ ಬರಲಿಲ್ಲ. ಇದೀಗ ಕೇವಲ ಮತ ಕೇಳಲು ಬರುತ್ತಿದ್ದಾರೆ. ಜನರ ಕಷ್ಟ, ಅಭಿವೃದ್ಧಿ ಅವರಿಗೆ ಆದ್ಯತೆಯಾಗಿಲ್ಲ. ಚುನಾವಣೆಯಲ್ಲಿ ಮತ ಗಳಿಸುವುದಷ್ಟೇ ಅವರ ಆದ್ಯತೆಯಾಗಿದೆ. ಇದು ಜನರಿಗೆ ಅರ್ಥವಾಗಿದ್ದು, ಅವರೇ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರದ ಗೃಹಮಂತ್ರಿ ಅಮಿತ್‌ ಶಾ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬದಲಾವಣೆಯ ಪರ್ವ ರಾಜ್ಯದಲ್ಲಿ ಆರಂಭವಾಗಿದೆ. ನಮ್ಮ ನಾಯಕರ ರಾಜ್ಯ ಪ್ರವಾಸದ ಕಾರ್ಯಕ್ರಮದಲ್ಲಿ ಜನ ಪ್ರವಾಹದಂತೆ ಹರಿದು ಬರುತ್ತಿರುವುದೇ ಇದಕ್ಕೆ ಸಾಕ್ಷಿ. ಖಂಡಿತ ನಾವು 140 ಸ್ಥಾನಗಳಿಂದ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.