ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಶತಸಿದ್ಧ: ಜಗದೀಶ್ ಶೆಟ್ಟರ್
ಬರುವ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗಳಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ. ಕಾಂಗ್ರೆಸ್ ಪಕ್ಷ ಸದ್ಯ ಐಸಿಯುನಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಶಹಾಪುರ (ಮಾ.09): ಬರುವ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗಳಿಸಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ. ಕಾಂಗ್ರೆಸ್ ಪಕ್ಷ ಸದ್ಯ ಐಸಿಯುನಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ನಗರದಲ್ಲಿ ನಡೆದ ಬೃಹತ್ ರೋಡ್ ಶೋ ವೇಳೆ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಆಟ ಕೊನೆಯಾಗಿದೆ. ರಾಜಕೀಯ ಡೊಂಬರಾಟ ಬಿಟ್ಟುಬಿಡಲಿ. ನರೇಂದ್ರ ಮೋದಿ ಅವರ ಟೀಕೆ ಮಾಡುವುದು ಬಿಟ್ಟು ನಿಮ್ಮ ಪರಿಸ್ಥಿತಿ ಏನಾಗಿದೆ ಎಂದು ಒಮ್ಮೆ ನೋಡಿಕೊಳ್ಳಬೇಕೆಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಮುಳುಗಿದ ಹಡಗಿನಂತಾಗಿದೆ. ಅವರಿಗೆ ನೆಲೆ ಇಲ್ಲದಿರುವಾಗ ಜನರನ್ನು ಹೇಗೆ ಉದ್ಧಾರ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಸದಾ ದೇಶದ ಜನರ ಅಭಿವೃದ್ಧಿ ಬಗ್ಗೆ ವಿಚಾರ ಮಾಡುವ ಬಿಜೆಪಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗಳಿಸುತ್ತದೆ. ಯಾಕೆಂದರೆ ಬಿಜೆಪಿ ಸರ್ಕಾರ ದೇಶದ ಸಮಗ್ರ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ. ಇದಕ್ಕೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ. ಶಹಾಪುರದಲ್ಲಿ ಕಮಲವನ್ನು ಅರಳಿಸಬೇಕೆಂದು ಜನರಲ್ಲಿ ಮನವಿ ಮಾಡಿದರು.
ಲೋಕಾಯುಕ್ತ ವಿಚಾರಣೆಗೆ ಮಾಡಾಳು ಅಸಹಕಾರ: ಸಮರ್ಪಕ ಉತ್ತರ ನೀಡದ ಶಾಸಕ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ. ಪ್ರಧಾನಿಯವರ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಹೇಳಿಕೆ ಕಾರ್ಯಗತವಾಗಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕೊಂಚ ಉಸಿರಾಡುತ್ತಿದೆ. ಕಾಂಗ್ರೆಸ್‌ಗೆ ಉಳಿಗಾಲ ಇಲ್ಲ. ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗಳಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಕೆಲಸ ಮಾಡುವ ಮೂಲಕ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು. ಸಾರಿಗೆ ಸಚಿವ ಶ್ರೀರಾಮಲು ಮಾತನಾಡಿ, ರಾಜ್ಯಾದ್ಯಂತ ನಿರೀಕ್ಷೆಗೂ ಮೀರಿ ಬಿಜೆಪಿಗೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ದುರಾಡಳಿತಕ್ಕೆ ಜನತೆ ಬೇಸತ್ತಿದ್ದಾರೆ ಎನ್ನುವುದಕ್ಕೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸೇರಿದ ಜನಸಮೂಹವೇ ಸಾಕ್ಷಿ. ದಿನದಿಂದ ದಿನಕ್ಕೆ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಕಾಂಗ್ರೆಸ್ ಪಕ್ಷದಲ್ಲಿದ್ದವರಿಗೆ ನಾವು ದಡ ಸೇರುತ್ತೇವೆ ಎನ್ನುವ ಭರವಸೆ ಇಲ್ಲದಂತಾಗಿದೆ ಎಂದರು.
ಕೇಂದ್ರ ಸಚಿವ ಡಾ. ಮಾನ್ಸುಖ್ ಮಾಂಡವಿಯ, ಸುರಪುರ ಶಾಸಕ ರಾಜೂಗೌಡ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕ ದೊಡ್ಡಪ್ಪಗೌಡ ನರಬೋಳಿ, ಯುವ ಮುಖಂಡ ಅಮೀನ್‌ರೆಡ್ಡಿ ಯಾಳಗಿ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಮಾಲಿಕಯ್ಯ ಗುತ್ತೇದಾರ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ, ಡಾ. ಚಂದ್ರಶೇಖರ್ ಸುಬೇದಾರ, ಪ್ರಧಾನ ಕಾರ್ಯದರ್ಶಿ ಗುರುಕಾಮಾ, ಮಾಜಿ ಎಂಎಲ್ಸಿ ಅಮಾತೆಪ್ಪ ಸಾಹು ಕಂದುಕೂರ, ಅಮರನಾಥ್ ಪಾಟೀಲ್, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ರಾಜುಗೌಡ ಉಕ್ಕಿನಾಳ, ನಗರ ಮಂಡಲ ಅಧ್ಯಕ್ಷ ದೇವೇಂದ್ರ ಕೊನೇರ ಇತರರಿದ್ದರು.
ವಿಜಯ ಸಂಕಲ್ಪ ಯಾತ್ರೆ ರೋಡ್ ಶೋ: ಶಹಾಪುರ ನಗರದ ವಾಲ್ಮೀಕಿ ವೃತ್ತದಿಂದ ಆರಂಭವಾದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ರೋಡ್ ಶೋ ಬಸವೇಶ್ವರ ವೃತ್ತದ ಮೂಲಕ ಸಿಬಿ ಕಮಾನ್ ತಲುಪಿತು. ಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ತೆರಳಿದರು. ವಾದ್ಯಮೇಳಗಳು ಕಳೆ ತಂದವು. ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಾಯಿತು. ನಗರವೆಲ್ಲ ಕೇಸರಿಮಯವಾಗಿತ್ತು. ಸ್ವಾಗತದ ಬ್ಯಾನರ್ ಆರ್ಭಟ ಜೋರಾಗಿತ್ತು. ಬಿಜೆಪಿ ಬಾವುಟ, ಟೊಪ್ಪಿಗೆ ತೊಟ್ಟು ಮೆರವಣಿಗೆ ಮುಂದೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಲಂಬಾಣಿ ಮಹಿಳಾ ತಂಡದ ಲಂಬಾಣಿ ಕುಣಿತ ಆಕರ್ಷಣಿಯವಾಗಿತ್ತು.
ಗುಜರಾತ್ ಇವಿಎಂ ರಾಜ್ಯಕ್ಕೆ ಬೇಡ: ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ನಿಂದ ಮನವಿ
ಟ್ರಾಫಿಕ್ ಸಮಸ್ಯೆ, ವಾಹನ ಸವಾರರು ಪರದಾಟ: ಶಹಾಪುರ ನಗರದ ಮುಖ್ಯರಸ್ತೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಕೆಲಕಾಲ ವಾಹನ ಸವಾರರು ಸಂಚರಿಸಲು ಪರದಾಡಿದರು. ಪೊಲೀಸರು ಟ್ರಾಫಿಕ್ ಸಮಸ್ಯೆ ಬಗೆಹರಿಸಿದರು.