ಮೋದಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಈ ಬಾರಿಯೂ ಬಿಜೆಪಿಯದೇ ಅಧಿಕಾರ: ಪ್ರಲ್ಹಾದ್ ಜೋಶಿ
ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ. ಕಳೆದ 4 ವರ್ಷಗಳ ಅವಧಿಯ ಡಬಲ್ ಎಂಜಿನ್ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಅಭಿವೃದ್ಧಿಯನ್ನು ಕಂಡಿದೆ.
ನವದೆಹಲಿ (ಮಾ.30): ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ. ಕಳೆದ 4 ವರ್ಷಗಳ ಅವಧಿಯ ಡಬಲ್ ಎಂಜಿನ್ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಅಭಿವೃದ್ಧಿಯನ್ನು ಕಂಡಿದೆ. ಹೀಗಾಗಿ, ಮೋದಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ವಿಧಾನಸಭೆಯ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.
ಚುನಾವಣೆ ಎದುರಿಸಲು ಬಿಜೆಪಿ ಸಜ್ಜಾಗಿದೆ. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿ, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದಾರೆ. ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಕೇಂದ್ರದ 13 ಸಚಿವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಬಾರಿ ಕಳೆದ ಬಾರಿಯಂತೆ ಅತಂತ್ರ ಪರಿಸ್ಥಿತಿ ಬರುವುದಿಲ್ಲ. ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ಕಾಂಗ್ರೆಸ್, ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಕಾಂಗ್ರೆಸ್, ಜನರಿಂದ ತಿರಸ್ಕಾರಗೊಂಡ ಪಕ್ಷವಾಗಿದೆ.
ಬಿಜೆಪಿ ಅಭ್ಯರ್ಥಿ ಪಟ್ಟಿ ಶೀಘ್ರವೇ ಘೋಷಣೆ: ನಳಿನ್ ಕುಮಾರ್ ಕಟೀಲ್
ಈಶಾನ್ಯ ಭಾರತದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಅತ್ಯಂತ ದುರ್ಬಲವಾದ ನಾಯಕತ್ವ ಹೊಂದಿದ ಪಕ್ಷವಾಗಿದೆ. ‘ಘೋಷಣೆ ಉಚಿತ, ಭ್ರಷ್ಟಾಚಾರ ಖಚಿತ’ ಎಂಬುದು ಕಾಂಗ್ರೆಸ್‌ನ ಕಥೆಯಾಗಿದೆ ಎಂದರು. ಇನ್ನು, ಕುಮಾರಸ್ವಾಮಿಯವರು ಸಿಎಂ ಆಗುವುದು ತಿರುಕನ ಕನಸು ಇದ್ದಂತೆ. ಜೆಡಿಎಸ್ ಪಕ್ಷ ಕಾಂಗ್ರೆಸ್‌ನ ಸಹೋದರ ಪಕ್ಷ ಎಂದು ಟೀಕಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕಾಂಗ್ರೆಸ್ ಅಧಿಕಾರಕ್ಕೂ ಬರಲ್ಲ: ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಮೀಸಲಾತಿಯಲ್ಲಿ ಬದಲಾವಣೆ ತರಲಾಗಿದ್ದು, ಲಿಂಗಾಯಿತರಿಗೆ, ಒಕ್ಕಲಿಗರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೂ ಬರಲ್ಲ, ಮೀಸಲಾತಿ ಬದಲಾಯಿಸುವುದಕ್ಕೂ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟಾಂಗ್ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬಹು ವರ್ಷಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿಯನ್ನು ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಕಾಲದಲ್ಲೇ ಆಯೋಗ ರಚಿಸಲಾಗಿತ್ತು. ಆದರೆ, ಅವರ ಅಧಿಕಾರದಲ್ಲಿ ಜಾರಿಗೆ ತರಲಿಲ್ಲ.
ಈಗ ನಾವು ತಂದಿರುವುದಕ್ಕೆ ಅವರಿಗೆ ಹೊಟ್ಟೆಕಿಚ್ಚು ಆಗುತ್ತಿದೆ. ಅದಕ್ಕೆ ತಾವು ಅಧಿಕಾರಕ್ಕೆ ಬಂದರೆ ಬಿಜೆಪಿ ನೀಡಿರುವ ಮೀಸಲಾತಿಯನ್ನು ರದ್ದು ಮಾಡ್ತೇವೆ ಎನ್ನುತ್ತಿದ್ದಾರೆ. ಒಕ್ಕಲಿಗರು, ಲಿಂಗಾಯಿತರಿಗೆ ಮೀಸಲಾತಿ ನೀಡಿರುವುದಕ್ಕೆ ಕಾಂಗ್ರೆಸ್ ಸಹಮತ ಇಲ್ಲ ಎನ್ನುವುದು ಇದರಲ್ಲಿಯೇ ತಿಳಿಯುತ್ತದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ರೀಗಳಿಗೆ ಧಮ್ಕಿ ಹಾಕಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರ ಆರೋಪ ಬಾಲಿಶನತನದಿಂದ ಕೂಡಿದೆ. ಭಾರತೀಯ ಹಿಂದೂ ಸಂಸ್ಕೃತಿಯನ್ನು ಬಿಜೆಪಿ ಪಾಲಿಸಿಕೊಂಡು ಬಂದಿದೆ.
ನನ್ನ ರಾಜಕೀಯ ಜೀವನ ಉತ್ತುಂಗಕ್ಕೆ ಏರಿದ್ದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ: ಸಚಿವ ಸಿ.ಸಿ.ಪಾಟೀಲ್
ಕಾಂಗ್ರೆಸ್‌ನವರು ಮಾಡುತ್ತಿರುವ ಆರೋಪ ಶ್ರೀಗಳಿಗೆ ಮಾಡುತ್ತಿರುವ ಅಪಮಾನವಾಗಿದೆ. ಧಮ್ಕಿ ಹಾಕುವುದು ಡಿ.ಕೆ. ಶಿವಕುಮಾರ ಹಾಗೂ ಹೊಡೆಯುವುದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಂಸ್ಕೃತಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಶಾಸಕರು ಸೇರಿ ಹೋರಾಟ ಮಾಡಿದ್ದರು. ಪಂಚಮಸಾಲಿ ಸಮುದಾಯದ ಹೋರಾಟ ಮುಂದುವರಿಸುವ ಯೋಚನೆ ಕಾಂಗ್ರೆಸ್‌ನವರದಾಗಿತ್ತು. ಆದರೆ, ಬಿಜೆಪಿ ಸರ್ಕಾರ ಎಲ್ಲ ಮೀಸಲಾತಿ ಸಮಸ್ಯೆ ಪರಿಹರಿಸಿ ತಾರ್ಕಿಕ ಅಂತ್ಯ ಹಾಡಿದೆ ಎಂದರು.