ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ: ಬಾಲಚಂದ್ರ ಜಾರಕಿಹೊಳಿ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ (ಏ.01): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 10 ಕ್ಷೇತ್ರದಲ್ಲಿ ಬಿಜೆಪಿ, 8 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆಪರೇಷನ್ ಕಮಲ ಮೂಲಕ ಮೂರು ಜನ ಶಾಸಕರು ಬಿಜೆಪಿ ಬಂದಿದ್ದಾರೆ. ಈ ಚುನಾವಣೆಯಲ್ಲಿ 13 ಸ್ಥಾನ ಉಳಿಸಿಕೊಳ್ಳುವ ಯತ್ನ ನಡೆದಿದೆ ಎಂದರು.
ಕ್ಷೇತ್ರವಾರು ಮತದಾನ ಮಾಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿರುವುದು ಒಳ್ಳೆಯ ವ್ಯವಸ್ಥೆಯಾಗಿದೆ ಎಂದು ನಾವು ಭಾವಿಸಿದ್ದೇವೆ. ಕ್ಷೇತ್ರದಲ್ಲಿರುವ ಭಿನ್ನಾಭಿಪ್ರಾಯ ಗೊತ್ತಾಗಲಿದೆ. ಕ್ಷೇತ್ರದಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಶಾಸಕರು ಕಾರ್ಯಕರ್ತರ ಜೊತೆಗೆ ಸರಿಯಾಗಿ ಇದ್ದಾರೋ ಇಲ್ಲವೋ ಗೊತ್ತಾಗುತ್ತದೆ. ಸರ್ವೇಬೇಸ್ ಇಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡುತ್ತಾರೆ ಎಂದರು. ಎಲ್ಲ ಪಕ್ಷಗಳಲ್ಲಿ ಆಕಾಂಕ್ಷಿಗಳು ಬಹಳ ಜನ ಇದ್ದಾರೆ. ಟಿಕೆಟ್ ಫೈನಲ್ ಆದ ಬಳಿಕ ಅಸಮಾಧಾನ ಸಹಜ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೆ ಅದನ್ನು ಎಲ್ಲರೂ ಕೇಳಬೇಕು.
ಬಿಜೆಪಿ ಸರ್ಕಾರ ಪತನಗೊಳಿಸಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ: ಸತೀಶ್ ಜಾರಕಿಹೊಳಿ
ಲಕ್ಷ್ಮಣ ಸವದಿ ಮತ್ತು ರಮೇಶ ಜಾರಕಿಹೊಳಿ ಜೊತೆಗೆ ಹೈಕಮಾಂಡ್ ಮಾತುಕತೆ ನಡೆಸಿರಬೇಕು. ಸರ್ವೆ ಆಧಾರದ ಮೇಲೆ 18 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಆಗಲಿದೆ. ಹೈಕಮಾಂಡ್ ಘೋಷಣೆ ಮಾಡಿದ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನಿಸಲಾಗುವುದು ಎಂದರು. ಕೆಲ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಫೈನಲ್ ಮಾಡಲಿದೆ. ಶಾಂತಿ, ಸಮಾಧಾನದಿಂದ ಚುನಾವಣೆ ಆಗಬೇಕು ಎನ್ನುವ ಭಯಕೆ ನಮ್ಮದು. ಬಣ ರಾಜಕೀಯ, ಭಿನ್ನಾಭಿಪ್ರಾಯ ಎಲ್ಲ ಪಕ್ಷದಲ್ಲಿ ಇರುತ್ತದೆ. ಎಲ್ಲವನ್ನೂ ವರಿಷ್ಠರು ಸರಿ ಮಾಡುತ್ತಾರೆ. ಮಾಧ್ಯಮಗಳಲ್ಲಿ ಬಣ ರಾಜಕೀಯದ ಬಗ್ಗೆ ನೋಡಿದ್ದೇನೆ.
ಯಾರು ಯಾರನ್ನು ಸೋಲಿಸಲು ಆಗಲ್ಲ, ಗೆಲ್ಲಿಸಲು ಸಹ ಆಗಲ್ಲ, ಅವರ ಕ್ಷೇತ್ರದಲ್ಲಿ ಅವರು ಗಟ್ಟಿಯಾಗಿ ಇರುತ್ತಾರೆ. ಸೋಲು ಅನ್ನುವುದು ನಮ್ಮ ಕಡೆ ಇಲ್ಲ. ಕ್ಷೇತ್ರದ ಜನರಿಂದಲೇ ಮಾತ್ರ ಸೋಲಿಸಲು, ಗೆಲ್ಲಿಸಲು ಸಾಧ್ಯ. ಹೊರಗಿನವರು ಬಂದು ಸೋಲಿಸಲು ಆಗಲ್ಲ. ಪಕ್ಷದ ಹಿತದೃಷ್ಟಿಯಿಂದ ಪ್ರತಿಷ್ಠೆ ಆಗಬಾರದು ಎಂದು ತಿಳಿಸಿದರು. ಬಿಜೆಪಿ ಸರ್ಕಾರ ಎಲ್ಲ ಸಮಾಜಕ್ಕೆ ಸರಿಯಾದ ಮೀಸಲಾತಿ ನೀಡಿದೆ. ಎಲ್ಲ ಸಮುದಾಯದವರು ಬಿಜೆಪಿ ಜೊತೆಗೆ ಇದ್ದಾರೆ ಎಂದ ಅವರು, ಶಾಸಕ ಗೋಪಾಲಕೃಷ್ಣ ರಾಜೀನಾಮೆ ನೀಡಿದ್ದಾರೆ. ಅವರು ಕಾಂಗ್ರೆಸ್‌ನಿಂದ ಬಂದಿದ್ದರು, ವಾಪಸ್ ಹೋಗಿದ್ದಾರೆ.
ಇನ್ನು ಯಾರು ಪಕ್ಷ ಬಿಟ್ಟು ಹೋಗುವುದಿಲ್ಲ. ಗೆಲ್ಲುವ ಪಕ್ಷ ಬಿಟ್ಟು ಹೋಗಲು ಯಾರು ಇಚ್ಛಿಸುವುದಿಲ್ಲ. ಅಭ್ಯರ್ಥಿಗಳ ಘೋಷಣೆ ಬಳಿಕ ಕ್ಲಿಯರ್ ಪಿಕ್ಚರ್ ಸಿಗಲಿದೆ. ಏಪ್ರಿಲ್ 25 ರಂದು ಎಲ್ಲವೂ ಸ್ಪಷ್ಟವಾಗಲಿದೆ. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಸೈಡ್‌ಲೈನ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ: ಸಿಎಂ ಬೊಮ್ಮಾಯಿ ವಿಶ್ವಾಸ
ಇನ್ನೊಂದು ಬಾರಿ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ ಹಾಗೂ ಶಶಿಕಲಾ ಜೊಲ್ಲೆ ಅವರಿಗೆ ವಿನಂತಿ ಮಾಡುತ್ತೇವೆ. ಬೆಂಗಳೂರಿನಲ್ಲಿ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಮನವಿ ಮಾಡುತ್ತೇವೆ. ಚುನಾವಣೆಗೆ ಇನ್ನು 40 ದಿನ ಮಾತ್ರ ಉಳಿದಿದೆ. ಎಲ್ಲ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕು. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು. ಯಾರು ಜಗಳ ಆಡಬಾರದು ಎಂಬುವುದು ಎಲ್ಲರ ಇಚ್ಛೆ ಆಗಿದೆ. ಮೂರ್ನಾಲ್ಕು ಜನ ನಾಯಕರಿಗೆ ನಾವು ಮನವಿ ಮಾಡುತ್ತೇವೆ. ಎಲ್ಲರನ್ನೂ ಹೇಗಾದರೂ ಮಾಡಿ ಒಂದು ಮಾಡೋಣ.
-ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕರು.