Asianet Suvarna News Asianet Suvarna News

ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್‌ ನೀಡುವಂತೆ ಎನ್‌ಡಿಎ ಕೂಟಕ್ಕೆ ಬಿಜೆಪಿ ಸೂಚನೆ?

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳಲ್ಲಿ ಯಾವುದೇ ಒಡಕು ಉಂಟಾಗದಂತೆ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಮೈತ್ರಿ ಪಕ್ಷಗಳು ಟಿಕೆಟ್‌ ನೀಡುವಂತೆ ಖುದ್ದು ತಾನೇ ‘ಮಧ್ಯಸ್ಥಿಕೆ’ ನಡೆಸಲು ಬಿಜೆಪಿ ಮುಂದಾಗಿದೆ.

BJP intervention in the candidate selection of NDA parties too asked to issue tickets only to winning candidates akb
Author
First Published Aug 14, 2023, 7:31 AM IST

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳಲ್ಲಿ ಯಾವುದೇ ಒಡಕು ಉಂಟಾಗದಂತೆ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಮೈತ್ರಿ ಪಕ್ಷಗಳು ಟಿಕೆಟ್‌ ನೀಡುವಂತೆ ಖುದ್ದು ತಾನೇ ‘ಮಧ್ಯಸ್ಥಿಕೆ’ ನಡೆಸಲು ಬಿಜೆಪಿ ಮುಂದಾಗಿದೆ. ವಿಪಕ್ಷಗಳು ‘ಇಂಡಿಯಾ’ ಮೈತ್ರಿಕೂಟ ಮಾಡಿಕೊಂಡು ತನ್ನ ವಿರುದ್ಧ ಸೆಣಸಲು ಸಿದ್ಧವಾಗುತ್ತಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಆ ಹಿನ್ನೆಲೆಯಲ್ಲಿ ಎನ್‌ಡಿಎಯ 39 ಅಂಗಪಕ್ಷಗಳು ಒಗ್ಗಟ್ಟಾಗಿರುವಂತೆ ನೋಡಿಕೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲಿ (Lok sabha Election)ಬಿಜೆಪಿಯಿಂದ ಕಣಕ್ಕಿಳಿಸಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಎಂದಿನಂತೆ ರಾಜ್ಯಗಳಿಂದ ವರದಿ ಪಡೆಯುವ ಹಾಗೂ ಸಮೀಕ್ಷೆಗಳನ್ನು ನಡೆಸುವ ಕಾರ್ಯವನ್ನು ಈ ಬಾರಿಯೂ ಪಕ್ಷ ಮಾಡಲಿದೆ. ಅದರ ಜೊತೆಗೆ, ಎನ್‌ಡಿಎ ಮೈತ್ರಿ ಪಕ್ಷಗಳು ಕಣಕ್ಕಿಳಿಸಲು ನಿರ್ಧರಿಸಿರುವ ಅಭ್ಯರ್ಥಿಗಳ ಬಗ್ಗೆಯೂ ವರದಿ ತರಿಸಿಕೊಳ್ಳುವ ಹಾಗೂ ಅವರಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲೂ ಸಮೀಕ್ಷೆಗಳನ್ನು ನಡೆಸುವ ಕಾರ್ಯತಂತ್ರಕ್ಕೆ ಮುಂದಾಗಿದೆ ಎನ್ನಲಾಗಿದೆ.

9 ವರ್ಷದಲ್ಲಿ 2 ಅವಿಶ್ವಾಸ ಗೆದ್ದ ಮೋದಿ: ಮಣಿಪುರಕ್ಕೆ ಕಿಚ್ಚು ಹಚ್ಚಿದವರ ಇತಿಹಾಸ ಹೇಳಿದ ಪ್ರಧಾನಿ!

ಈ ಹಿನ್ನೆಲೆಯಲ್ಲಿ ಎಲ್ಲಾ 543 ಲೋಕಸಭಾ ಕ್ಷೇತ್ರಗಳಿಂದಲೂ ಬಿಜೆಪಿ ವರಿಷ್ಠರು (BJP leader) ವರದಿ ತರಿಸಿಕೊಳ್ಳುತ್ತಿದ್ದಾರೆ. ಅಗತ್ಯಬಿದ್ದರೆ ಅದರ ಮಾಹಿತಿಯನ್ನು ಮೈತ್ರಿ ಪಕ್ಷಗಳ ಜೊತೆಗೂ ಹಂಚಿಕೊಳ್ಳಲಿದ್ದಾರೆ. ಎನ್‌ಡಿಎ ಕೋಟಾದಲ್ಲಿ ನಿರ್ದಿಷ್ಟ ಕ್ಷೇತ್ರದ ಟಿಕೆಟ್‌ ಅನ್ನು ಮೈತ್ರಿ ಪಕ್ಷಕ್ಕೆ ನೀಡುವುದಾದರೆ ಆ ಪಕ್ಷವು ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬುದನ್ನು ಬಿಜೆಪಿ ಮೊದಲೇ ಕೇಳಿ ತಿಳಿದುಕೊಂಡು, ಅಂತಿಮ ನಿರ್ಧಾರವನ್ನು ತಾನೇ ತೆಗೆದುಕೊಳ್ಳಲು ಬಯಸಿದೆ ಎಂದು ಹೇಳಲಾಗಿದೆ.

ಮೈತ್ರಿ ಪಕ್ಷಗಳ ಜಗಳಕ್ಕೆ ಬಿಜೆಪಿ ಸಂಧಾನ:

ಯಾವುದಾದರೂ ರಾಜ್ಯದಲ್ಲಿ ಎನ್‌ಡಿಎ ಅಂಗ ಪಕ್ಷಗಳ ನಡುವೆ ಭಿನ್ನಮತ ಬಂದರೆ ತಾನೇ ಮಧ್ಯಸ್ಥಿಕೆ ವಹಿಸುವುದಕ್ಕೂ ಬಿಜೆಪಿ ನಿರ್ಧರಿಸಿದೆ. ಬಿಹಾರದಲ್ಲಿ ಪಶುಪತಿ ಪಾರಸ್‌ ಹಾಗೂ ಚಿರಾಗ್‌ ಪಾಸ್ವಾನ್‌ ನಡುವೆ ಹಾಜಿಪುರ ಕ್ಷೇತ್ರದ ಬಗ್ಗೆ ಭಿನ್ನಮತ ಬರಬಹುದು. ಮಹಾರಾಷ್ಟ್ರದಲ್ಲಿ ಶಿವಸೇನೆಯ ಶಿಂಧೆ ಬಣ ಹಾಗೂ ಎನ್‌ಸಿಪಿಯ (NCP) ಅಜಿತ್‌ ಪವಾರ್‌ (Ajit Pawar) ಬಣದ ನಡುವೆ ವಿವಿಧ ಸೀಟುಗಳ ವಿಷಯದಲ್ಲಿ ಹಗ್ಗಜಗ್ಗಾಟ ನಡೆಯಬಹುದು. ಅಂತಹ ಸಂದರ್ಭದಲ್ಲಿ ಎರಡೂ ಪಕ್ಷಗಳ ಜೊತೆ ಸಭೆ ನಡೆಸಿ, ಯಾವ ಪಕ್ಷದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಗಮನಿಸಿ, ಅಂತಿಮ ನಿರ್ಧಾರವನ್ನು ಬಿಜೆಪಿ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಎನ್‌ಡಿಎಯ ಎಲ್ಲಾ ಮೈತ್ರಿ ಪಕ್ಷಗಳಿಂದಲೂ ಅವು ಕಣಕ್ಕಿಳಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಮೊದಲೇ ತರಿಸಿಕೊಂಡು, ಅಂತಹ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಯಿದ್ದರೆ ಮಾತ್ರ ಅವರಿಗೆ ಟಿಕೆಟ್‌ ನೀಡಲು ಬಿಜೆಪಿ ಒಪ್ಪಬಹುದು ಎಂದು ಮೂಲಗಳು ತಿಳಿಸಿವೆ.

ಭಾರತ ಮಾತೆಯನ್ನು 3 ಭಾಗ ಮಾಡಿದ್ದೇ ಕಾಂಗ್ರೆಸ್‌: ಮೋದಿ ಭಾಷಣದ ಹೈಲೈಟ್ಸ್

ಮೈತ್ರಿ ಪಕ್ಷಗಳಿಗೆ ಕಡಿಮೆ ಟಿಕೆಟ್‌:

2019ರ ಲೋಕಸಭೆ ಚುನಾವಣೆಯಲ್ಲಿ 543 ಲೋಕಸಭಾ ಸೀಟುಗಳ ಪೈಕಿ 436 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿ, ಇನ್ನುಳಿದ ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳಿಗೆ ನೀಡಿತ್ತು. 2024ರಲ್ಲೂ 425-450 ಕ್ಷೇತ್ರಗಳಲ್ಲಿ ಬಿಜೆಪಿಯೇ ಸ್ಪರ್ಧಿಸುವ ಯೋಚನೆಯಲ್ಲಿದೆ. ಆಗ 39 ಮೈತ್ರಿ ಪಕ್ಷಗಳ ಪೈಕಿ 10-12 ಪಕ್ಷಗಳಿಗೆ ಮಾತ್ರ ಲೋಕಸಭೆಗೆ ಎನ್‌ಡಿಎಯಿಂದ ಸ್ಪರ್ಧಿಸಲು ಬಿಜೆಪಿ ಒಪ್ಪಿಗೆ ನೀಡಬಹುದು. ಇನ್ನುಳಿದವರಿಗೆ ಎಂಎಲ್‌ಎ ಅಥವಾ ಎಂಎಲ್‌ಸಿ ಸೀಟು ನೀಡುವ ಭರವಸೆ ನೀಡಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಮಾತ್ರವಲ್ಲ, ಎನ್‌ಡಿಎ ಅಭ್ಯರ್ಥಿಗಳು ಕೂಡ ಟಿಕೆಟ್‌ ಪಡೆಯುವುದಕ್ಕೆ ಬಿಜೆಪಿಯ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಪಾಸಾಗಬೇಕು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios