Asianet Suvarna News Asianet Suvarna News

ಬಿ.ಎಲ್‌. ಸಂತೋಷ, ಜೋಶಿ, ಬೊಮ್ಮಾಯಿ ಹಿಡಿತದಲ್ಲಿ ಬಿಜೆಪಿ: ಶೆಟ್ಟರ್‌

ಇತ್ತೀಚಿಗೆ ಕೆಲವರು ಇಡೀ ಪಕ್ಷವನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ. ತಮಗೆ ಬೇಕಾದಂತಹ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಹೈಕಮಾಂಡ್‌ ಗಮನಕ್ಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ಡಿಸ್ಟರ್ಬ್‌ ಮಾಡಿ ಬಿಜೆಪಿ ತಳಪಾಯವೇ ಹಾಳಾಗುವಂತೆ ಮಾಡಿದ್ದಾರೆ. ಶೆಟ್ಟರ್‌ ಪಕ್ಷ ಬಿಟ್ಟಿರುವುದರಿಂದ ಏನಾಗುತ್ತೆ ಎನ್ನುವವರಿಗೆ ಚುನಾವಣಾ ಫಲಿತಾಂಶ ಬರಲಿ ಎಲ್ಲವೂ ಗೊತ್ತಾಗಲಿದೆ ಎಂದ ಜಗದೀಶ್‌ ಶೆಟ್ಟರ್‌. 

BJP in Control of BL Santosh Pralhad Joshi Basavaraj Bommai Says Jagadish Shettar grg
Author
First Published Apr 26, 2023, 10:22 AM IST

ಹುಬ್ಬಳ್ಳಿ(ಏ.26): ರಾಜ್ಯ ಬಿಜೆಪಿ ಬಿ.ಎಲ್‌.ಸಂತೋಷ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಪಿಮುಷ್ಠಿಯಲ್ಲಿದೆ. ಇವರೇ ಎಲ್ಲ ನಿರ್ಧಾರ ಮಾಡಿ ರಾಷ್ಟ್ರೀಯ ನಾಯಕರ ಬಾಯಿಯಿಂದ ಹೇಳಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ನೇರವಾಗಿ ಆರೋಪಿಸಿದ್ದಾರೆ.

ಮಂಗಳವಾರ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೆಟ್ಟರ್‌ ಸಿಎಂ ಆಗಿದ್ದಾಗ ಪಕ್ಷ ಯಾರ ಮುಷ್ಠಿಯಲ್ಲಿತ್ತು ಎಂಬ ಅಮಿತ್‌ ಶಾ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇತ್ತು. ಎಲ್ಲ ನಾಯಕರ ಮಾತಿಗೂ ಬೆಲೆ ಇತ್ತು. ಆಗಿನ ನಾಯಕರ, ಮುಖಂಡರು ಒಗ್ಗಟ್ಟಿನಿಂದ ನಿರ್ಧಾರ ಕೈಗೊಳ್ಳುತ್ತಿದ್ದರು. ಕಳೆದ ಬಾರಿಯೇ ರಘುಪತಿ ಭಟ್‌ ಅವರ ಹೆಸರನ್ನು ಕೆಲವರು ಕಟ್‌ ಮಾಡಿದ್ದರು. ಗೆಲ್ಲುವ ಅಭ್ಯರ್ಥಿಗಳ ಹೆಸರು ಬಿಡಬೇಡಿ ಅಂತ ನಾನು ಗಟ್ಟಿಧ್ವನಿಯಲ್ಲಿ ಹೇಳಿದ್ದೆ. ಆದರೆ ಅಂತಹ ಸ್ವಾತಂತ್ರ್ಯ ಈಗಿಲ್ಲ. ರಾಜ್ಯ ಬಿಜೆಪಿ ಬರೀ ಸಂತೋಷ, ಜೋಶಿ, ಬೊಮ್ಮಾಯಿ ಕಪಿಮುಷ್ಠಿಯಲ್ಲಿದೆ ಎಂದು ಅಮಿತ್‌ ಶಾ, ಜೋಶಿಗೆ ತಿರುಗೇಟು ನೀಡಿದರು.

ಎದುರಾಳಿಗಳನ್ನು ಬಿಜೆಪಿಗೆ ಕರೆತಂದು ಹೊರನಡೆದ ಶೆಟ್ಟರ್‌!

ಬಿಜೆಪಿ ತಳಪಾಯ ಹಾಳಾಗಿದೆ:

ಇತ್ತೀಚಿಗೆ ಕೆಲವರು ಇಡೀ ಪಕ್ಷವನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ. ತಮಗೆ ಬೇಕಾದಂತಹ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಹೈಕಮಾಂಡ್‌ ಗಮನಕ್ಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ಡಿಸ್ಟರ್ಬ್‌ ಮಾಡಿ ಬಿಜೆಪಿ ತಳಪಾಯವೇ ಹಾಳಾಗುವಂತೆ ಮಾಡಿದ್ದಾರೆ. ಶೆಟ್ಟರ್‌ ಪಕ್ಷ ಬಿಟ್ಟಿರುವುದರಿಂದ ಏನಾಗುತ್ತೆ ಎನ್ನುವವರಿಗೆ ಚುನಾವಣಾ ಫಲಿತಾಂಶ ಬರಲಿ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಚುನಾವಣೆ ಇಡೀ ದೇಶದಲ್ಲಿಯೇ ಸೆಂಟರ್‌ ಸ್ಟೇಜ್‌ಗೆ ಬಂದಿದೆ. ಈ ಕ್ಷೇತ್ರವನ್ನು ಸೆಂಟರ್‌ ಸ್ಟೇಜ್‌ಗೆ ಬಿಜೆಪಿಯವರೇ ತಂದಿದ್ದಾರೆ. ಶೆಟ್ಟರ್‌ ಅವರನ್ನು ಸೋಲಿಸುವುದೇ ಬಿಜೆಪಿ ಅಜೆಂಡಾ ಆಗಿದೆ. ಸೆಂಟ್ರಲ್‌ ಡಿಸ್ಟರ್ಬ್‌ ಮಾಡಿದರೆ ಉತ್ತರ ಕರ್ನಾಟಕದ ಭಾಗದಲ್ಲಿ ಬಿಜೆಪಿಗೆ ಡಿಸ್ಟರ್ಬ್‌ ಆಗಲಿದೆ. ಶೆಟ್ಟರ್‌ ಕಡೆಗಣಿಸಿದ್ದಕ್ಕೆ ಬಿಜೆಪಿಯ ಹಣೆಬರಹ ಏನಾಗಲಿದೆ ಎಂಬುದು ಈಗ ಗೊತ್ತಾಗುತ್ತಿದೆ ಎಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.

ನಾನು ಮಾಡಿದ ಅನ್ಯಾಯವೇನು?

ನಾನು ಏನು ಅನ್ಯಾಯ ಮಾಡಿದ್ದೇನೆ? ನನ್ನಿಂದ ಬಿಜೆಪಿಗೆ ಏನು ಅನ್ಯಾಯವಾಗಿದೆ? ನಾನು ಪಕ್ಷವನ್ನು ಸದೃಢ ಮಾಡಿದ್ದು ತಪ್ಪಾ? ಬೇರೆ ಪಕ್ಷದ ಅಧೀನದಲ್ಲಿ ಇದ್ದ ಕ್ಷೇತ್ರವನ್ನು ನಾನು ಬಿಜೆಪಿ ಕ್ಷೇತ್ರವನ್ನಾಗಿ ಪರಿವರ್ತಿಸಿದ್ದೇನೆ. ನಾನು ಸಂಘಟನೆ ಮಾಡಿದ್ದಕ್ಕೆ ಬಿಜೆಪಿಗೆ ಶಕ್ತಿ ಬಂದಿದೆ. ಜೀರೋದಿಂದ ಬಿಜೆಪಿ ಕಟ್ಟಿಬೆಳೆಸಿದ್ದೇನೆ. ನನ್ನಿಂದ ಪಕ್ಷ ಬೆಳೆದಿಲ್ಲ, ಎಲ್ಲವು ಪಕ್ಷದಿಂದಲೇ ಆಗಿದೆ ಎನ್ನುವುದಾದರೆ, ಮೈಸೂರ ಭಾಗದಲ್ಲಿ ಈ ವರೆಗೆ ಯಾಕೆ ಪಕ್ಷ ಸ್ಟ್ರಾಂಗ್‌ ಆಗಿಲ್ಲ? ತೆಲಂಗಾಣ, ತಮಿಳನಾಡು, ಕೇರಳದಲ್ಲಿ ಏಕೆ ಬಿಜೆಪಿ ಬರುತ್ತಿಲ್ಲ ಎಂಬುದನ್ನು ಅಮಿತ್‌ ಶಾ ಅವರು ಸ್ಪಷ್ಟಪಡಿಸಲಿ ಎಂದ ಅವರು, ಯಾವುದೇ ಚುನಾವಣೆಯಾದರೂ ಪಕ್ಷ ಹಾಗೂ ಅಭ್ಯರ್ಥಿಯ ವರ್ಚಸ್ಸು ಎರಡೂ ಬೇಕಾಗುತ್ತದೆ ಎಂದರು.

ಜಗದೀಶ್‌ ಶೆಟ್ಟರ ಇರುವ ಕಾರಣಕ್ಕಾಗಿ ಪಕ್ಷ ಸ್ಟ್ರಾಂಗ್‌ ಆಗಿದೆ. ಈ ಕ್ಷೇತ್ರವನ್ನು ಸ್ಟ್ರಾಂಗ್‌ ಮಾಡಲು ಸಾಕಷ್ಟುಶ್ರಮಿಸಿದ್ದೇನೆ. ನನ್ನ ಸೋಲಿಗೆ ಬಿಜೆಪಿಯ ಯಾವುದೇ ನಾಯಕರು ಕರೆ ನೀಡಿದರೂ ಪ್ರಯೋಜನವಾಗಲ್ಲ. ಜನರು ಶೆಟ್ಟರ್‌ ಗೆಲ್ಲಿಸಲು ನಿರ್ಧಾರ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಹಿಂದಿನ ಬಾಗಿಲು ರಾಜಕಾರಣ ನನಗೆ ಹಿಡಿಸುವುದಿಲ್ಲ. ರಾಜಪಾಲರಾಗುವುದು, ರಾಜ್ಯಸಭಾ ಸದಸ್ಯನಾಗುವುದು ನನಗೆ ಇಷ್ಟಇಲ್ಲ. ಜನರ ಮಧ್ಯದಲ್ಲಿ ಇದ್ದು ರಾಜಕಾರಣ ಮಾಡಬೇಕು. ಶೆಟ್ಟರಗೆ ಅನ್ಯಾಯವಾಗಿರುವ ಬಗ್ಗೆ ಜನತೆಗೆ ಮನವರಿಕೆ ಆಗಿದೆ. ಅದು ಚುನಾವಣೆಯಲ್ಲಿ ಫಲಿತಾಂಶದ ಮೂಲಕ ಗೊತ್ತಾಗಲಿದೆ ಎಂದು ಹೇಳಿದರು.

ಶೆಟ್ಟರ್ ಬೇರೆ ಟೀಂ ಸೇರಿದ್ರೂ ಈ ಸಲವೂ ಕಪ್‌ ನಮ್ದೆ; ಪ್ರಲ್ಹಾದ್ ಜೋಶಿ

ಶೆಟ್ಟರ್‌ ಹಳೆಯ ಪ್ಲೇಯರ್‌, ಅವರಿಗೆ ವಯಸ್ಸಾಗಿದೆ. ನಿವೃತ್ತಿ ಪಡೆಯಿರಿ ಎಂದರೂ ಪಡೆಯದೇ ಬೇರೆ ಟೀಂನೊಂದಿಗೆ ಆಟವಾಡಲು ಹೋಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಡಿದ ಟೀಕೆಗೆ ತಿರುಗೇಟು ನೀಡಿದ ಶೆಟ್ಟರ್‌, ಜೋಶಿ ಅವರಿಗೂ 60 ವಯಸ್ಸಾಗಿದೆ. ಅರಳುಮರಳು ಆಗಿರಬಹುದು ಎಂದರು.

70- 76 ವರ್ಷ ಆದವರು ಇವರಿಗೆ ಹಳೆಯ ಪ್ಲೇಯರ್‌ ಅಲ್ಲ. ಆದರೆ 67 ವರ್ಷದ ನಾನು ಹಳೆಯ ಪ್ಲೇಯರ್‌. ಅವರಿಗೆ ಅಧಿಕಾರದ ಮದ ಏರಿದೆ. ಅದಕ್ಕಾಗಿ ಪಕ್ಷಕ್ಕೆ ಯಾರು ದುಡಿದಿದ್ದಾರೆ ಎನ್ನುವುದನ್ನು ಮರೆತ್ತಿದ್ದಾರೆ. ಶೆಟ್ಟರ್‌ ಪಕ್ಷ ಬಿಟ್ಟಿರುವುದು, ವಯಸ್ಸಾಗಿರುವುದು ಜೋಶಿ ಅವರಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಎಚ್ಚರಿಸಿದರು.

Follow Us:
Download App:
  • android
  • ios