ಕರ್ನಾಟಕ ಉಪ ಚುನಾವಣೆಯ 2 ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ, ಚನ್ನಪಟ್ಟಣ ಕುತೂಹಲ ಬಾಕಿ
ಕರ್ನಾಟಕದ 3 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿದೆ. 3ರ ಪೈಕಿ 2 ಕ್ಷೇತ್ರಗಳಿಗೆ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಘೋಷಿಸಿದೆ. ಇದೀಗ ಚನ್ನಪಟ್ಟಣ ಕುತೂಹಲ ಹೆಚ್ಚಾಗಿದೆ.
ನವದೆಹಲಿ(ಅ.19) ಕರ್ನಾಟಕದ ತೆರವಾಗಿರುವ 3 ವಿಧಾನಸಭೆಯ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಮೂರು ಕ್ಷೇತ್ರಗಳ ಪೈಕಿ 2 ಕ್ಷೇತ್ರಕ್ಕೆ ಅಭ್ಯರ್ಥಿಗಳ ಘೋಷಿಸಿದೆ. ಚೆನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಹಗ್ಗಜಗ್ಗಾಟ ಜೋರಾಗಿರುವ ಕಾರಣ ಈ ಕ್ಷೇತ್ರದ ಅಭ್ಯರ್ಥಿ ಇನ್ನೂ ಅಂತಿಮಗೊಂಡಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರ ಕ್ಷೇತ್ರವಾಗಿದ್ದ ಶಿಗ್ಗಾಂವಿ ಕ್ಷೇತ್ರಕ್ಕೆ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗಿ ಟೆಕೆಟ ನೀಡಲಾಗಿದೆ. ಇನ್ನು ಸಂಡೂರು ಕ್ಷೇತ್ರಕ್ಕೆ ಬಿಜೆಪಿ ನಾಯಕ ಬಂಗಾರು ಹನುಮಂತುಗೆ ಟಿಕೆಟ್ ನೀಡಲಾಗಿದೆ.
ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಜಾರಿದೆ ಎಂದು ಮೂಲಗಳು ಹೇಳುತ್ತಿದೆ. ಟಿಕೆಟ್‌ಗಾಗಿ ಭಾರಿ ಹೋರಾಟ ನಡೆಸಿದ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್‌ಗೆ ತೀವ್ರ ನಿರಾಸೆಯಾಗಿದೆ. ಹೆಚ್‌ಡಿ ಕುಮಾರಸ್ವಾಮಿ ಸಂಸದರಾದ ಬಳಿಕ ರಾಜೀನಾಮೆ ನೀಡಿದ ಚನ್ನಪಟ್ಟಣ ಸ್ಥಾನಕ್ಕೆ ಇದೀಗ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆ ಬಹುತೇಕ ಪಕ್ಕಾ ಆಗಿದೆ.
Breaking ಕರ್ನಾಟಕದ 3 ವಿಧಾನಸಭಾ ಕ್ಷೇತ್ರಕ್ಕೆ ನ.13ಕ್ಕೆ ಉಪ ಚುನಾವಣೆ, 23ಕ್ಕೆ ಫಲಿತಾಂಶ ಘೋಷಣೆ!
ಕರ್ನಾಟಕದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಶಿಗ್ಗಾಂವಿ ಕ್ಷೇತ್ರದಿಂದ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದರೆ. ಹೀಗಾಗಿ ಶಿಗ್ಗಾಂವಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಶಿಗ್ಗಾಂವಿ ಕ್ಷೇತ್ರವನ್ನು ತಮ್ಮ ಕುಟುಂಬ ಬಳಿ ಉಳಿಸಿಕೊಳ್ಳುವಲ್ಲಿ ಬಸವರಾಜ್ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಇತ್ತ ಸಂಡೂರ್ ಕ್ಷೇತ್ರದಲ್ಲಿ ಭಾರಿ ಕುತೂಹಲ ಮನೆ ಮಾಡಿತ್ತು. ಈ ಕ್ಷೇತ್ರದಲ್ಲಿ ಬಂಗಾರು ಹನುಮಂತುಗೆ ಟಿಕೆಟ್ ನೀಡಲಾಗಿದೆ.
ಚನ್ನಪಟ್ಟಣ ಜಿದ್ದಾಜಿದ್ದಿನ ಕಣವಾಗಿದೆ. ಲೋಕಸಭೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಆಗಿರುವ ನಷ್ಟವನ್ನು ಇದೀಗ ಉಪ ಚುನಾವಣೆಯಲ್ಲಿ ಬಡ್ಡಿ ಸಮೇತ ತೀರಿಸಲು ಡಿಕೆಶಿ ಬ್ರದರ್ಸ್ ಪ್ಲಾನ್ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕಾರಣ ಕನಕಪುರು ಕ್ಷೇತ್ರದಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್ ಸೋಲು ಕಂಡಿದ್ದರು. ಇಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಗೆಲುವು ಸಾಧಿಸಿ ಸಂಸದರಾಗಿದ್ದಾರೆ. ಇತ್ತ ವಿಧಾನಸಭೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಹೀಗಾಗಿ ಇದೀಗ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ. ಇತ್ತ ಸಿಪಿ ಯೋಗೇಶ್ವರ್ ತಾವೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಕೆಲಸ ಆರಂಭಿಸಿದ್ದರು. ಟಿಕೆಟ್‌ಗಾಗಿ ಸಿಪಿ ಯೋಗೇಶ್ವರ್ ಹಾಗೂ ಹೆಚ್‌ಡಿ ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಇದೀಗ ಚನ್ನಪಟ್ಟಣ ಬಹುತೇಕ ಜೆಡಿಎಸ್ ಪಾಲಾಗಿದೆ.
ನವೆಂಬರ್ 13ರಂದು ಕರ್ನಾಟಕದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ನವೆಂಬರ್ 23ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.