Asianet Suvarna News Asianet Suvarna News

ಬೊಮ್ಮಾಯಿ ಸರ್ಕಾರಕ್ಕೆ ಹೈಕಮಾಂಡ್‌ ಫುಲ್‌ಮಾರ್ಕ್ಸ್‌!

* ಸಿಎಂ ಕಾರ‍್ಯವೈಖರಿ ಬಗ್ಗೆ ಅರುಣ್‌ ಸಿಂಗ್‌ ತೃಪ್ತಿ

* ಬೊಮ್ಮಾಯಿ ಸರ್ಕಾರಕ್ಕೆ ಹೈಕಮಾಂಡ್‌ ಫುಲ್‌ಮಾರ್ಕ್ಸ್‌

* ಶೀಘ್ರ ಬಿಜೆಪಿ ಅಧ್ಯಕ್ಷ ನಡ್ಡಾಗೆ ವರದಿ ಸಾಧ್ಯತೆ

* ಅಮಿತ್‌ ಶಾ ಪ್ರಶಂಸೆ ಬೆನ್ನಲ್ಲೇ

BJP High Command Happy With CM Bommai Administration In Karnataka pod
Author
Bangalore, First Published Sep 5, 2021, 7:50 AM IST

ನವದೆಹಲಿ(ಸೆ.05): ಹೈಕಮಾಂಡ್‌ ನಾಯಕರಾಗಿರುವ ಕೇಂದ್ರ ಸಚಿವ ಅಮಿತ್‌ ಶಾ ಅವರು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿದ ಬೆನ್ನಲ್ಲೇ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಕೂಡ ಫುಲ್‌ಮಾರ್ಕ್ಸ್‌ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷ ಸಂಘಟನಾರ್ಥ ಮೈಸೂರು ಪ್ರಾಂತ್ಯದಲ್ಲಿ ಮೂರು ದಿನಗಳ ಪ್ರವಾಸ ಮುಗಿಸಿಕೊಂಡು ದೆಹಲಿಗೆ ಹಿಂತಿರುಗಿದ ಅರುಣ್‌ ಸಿಂಗ್‌ ತಮ್ಮ ವರದಿಯನ್ನು ಈಗಾಗಲೇ ಸಿದ್ಧಪಡಿಸಿದ್ದು ಇದರಲ್ಲಿ ಬೊಮ್ಮಾಯಿ ಅವರ ಆಡಳಿತ ಯಾವುದೇ ಗೊಂದಲವಿಲ್ಲದೆ ನಡೆಯುತ್ತಿದ್ದು ಆಡಳಿತ ಯಂತ್ರವು ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಮುಂದಿನವಾರ ಅವರು ಈ ವರದಿಯನ್ನು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಒಪ್ಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುರುವಾರವಷ್ಟೇ ದಾವಣಗೆರೆಯಲ್ಲಿ ಗಾಂಧಿಭವನ, ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ ಮತ್ತು ಗ್ರಂಥಾಲಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ್ದ ಅಮಿತ್‌ ಶಾ, ಯಡಿಯೂರಪ್ಪ ಅವರು ಪ್ರಾರಂಭಿಸಿದ ವಿಕಾಸಪಥದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದುವರಿಯುತ್ತಿದ್ದಾರೆ ಎಂದು ಹೊಗಳಿದ್ದರು. ಮಾತ್ರವಲ್ಲದೆ ಮುಂದಿನ ಚುನಾವಣೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದ ತಿಳಿಸಿದ್ದರು. ಇದರ ಬೆನ್ನಲ್ಲೇ ಅರುಣ್‌ ಸಿಂಗ್‌ ಕೂಡ ಬಸವರಾಜ ಬೊಮ್ಮಾಯಿ ಅವರ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿ ಆಡಳಿತ ಯಾವುದೇ ಗೊಂದಲವಿಲ್ಲದೆ ನಡೆಯುತ್ತಿದೆ. ಶಾಸಕರಲ್ಲಿ ಸಿಎಂ ಬಗ್ಗೆ ವಿಶ್ವಾಸದ ಮನೋಭಾವ ಇದೆ. ಸುಖಾಸುಮ್ಮನೆ ಗೊಂದಲಕ್ಕೆ ಎಡೆ ಮಾಡಿಕೊಡಲ್ಲ. ಆಡಳಿತ ಯಂತ್ರವು ಚುರುಕಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಮೈಸೂರು ಭಾಗದ ಪಕ್ಷ ಸಂಘಟನೆಯ ಬಗ್ಗೆಯೂ ಪ್ರಸ್ತಾಪಿಸಿರುವ ಸಿಂಗ್‌, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಉತ್ತಮ ಫಲಿತಾಂಶದ ನಿರೀಕ್ಷಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕೈದು ಪುಟಗಳ ವರದಿ ಸಿದ್ಧ ಮಾಡಿರುವ ಅರುಣ್‌ ಸಿಂಗ್‌ ಮುಂದಿನ ವಾರ ಅದನ್ನು ಜೆ.ಪಿ.ನಡ್ಡಾ ಅವರ ಕೈಗೆ ಒಪ್ಪಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Follow Us:
Download App:
  • android
  • ios