ಹೋರಾಟದ ಮೂಲಕವೇ ಬಿಜೆಪಿ ಬೆಳೆದು ಬಂದಿದೆ. ಈ ಪಕ್ಷದ ದಮನ ಪ್ರಯತ್ನ ಇವತ್ತಿನದ್ದಲ್ಲ. ಇಂತಹ ದ್ವೇಷವನ್ನು ಎದುರಿಸಿಯೇ ನಮ್ಮ ಪಕ್ಷ ಮುಂದುವರಿದಿದೆ. ನಮ್ಮ ಕಾರ್ಯಕರ್ತರು ವಿಶ್ವಾಸ-ಧೈರ್ಯ ಕಳೆದುಕೊಳ್ಳಬಾರದು. ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ಹೈಕೋರ್ಟ್ ಪೀಠ ಇರುವ ಎಲ್ಲ ಸ್ಥಳಗಳಲ್ಲಿ ಕಾನೂನು ಪ್ರಕೋಷ್ಠದ ಕಾರ್ಯಕರ್ತರು ಮತ್ತು ವಕೀಲರ ತಂಡ ರಚನೆಯಾಗಿದೆ: ತೇಜಸ್ವಿ ಸೂರ್ಯ
ಬೆಂಗಳೂರು(ಜೂ.11): ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಇದನ್ನು ಎದುರಿಸಿ, ಬಿಜೆಪಿ ಕಾರ್ಯಕರ್ತರಿಗೆ ನೆರವಾಗಲು ‘ಕಾನೂನು ಸಹಾಯವಾಣಿ’ ಆರಂಭಿಸಿದೆ.
ಶನಿವಾರ ಬಿಜೆಪಿ ಕಚೇರಿಯಲ್ಲಿ ಕಾನೂನು ಸಹಾಯವಾಣಿ ಸಂಖ್ಯೆ 18003091907 ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ಮತ್ತು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಮುಂದಿನ ದಿನದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಮತ್ತು ನಮ್ಮ ಪರವಾಗಿ ಕೆಲಸ ಮಾಡುವವರ ಮೇಲೆ ದ್ವೇಷದ ರಾಜಕೀಯ ಮಾಡುವ ಮುನ್ಸೂಚನೆಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕೋಷ್ಠದ ಯೋಗೇಂದ್ರ ಮತ್ತು ಅವರ 100 ವಕೀಲರ ತಂಡ ಸಹಾಯವಾಣಿ ಆರಂಭಿಸಿದೆ. ಸದನದೊಳಗೆ ಮತ್ತು ಹೊರಗೆ ಇಂತಹ ದೌರ್ಜನ್ಯ ವಿರುದ್ಧ ಹೋರಾಟ ಸಂಘಟಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ಹಿಟ್ಲರ್ ಸರ್ಕಾರ : ಎಂ.ಬಿ. ಪಾಟೀಲ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
ಹೋರಾಟದ ಮೂಲಕವೇ ಬಿಜೆಪಿ ಬೆಳೆದು ಬಂದಿದೆ. ಈ ಪಕ್ಷದ ದಮನ ಪ್ರಯತ್ನ ಇವತ್ತಿನದ್ದಲ್ಲ. ಇಂತಹ ದ್ವೇಷವನ್ನು ಎದುರಿಸಿಯೇ ನಮ್ಮ ಪಕ್ಷ ಮುಂದುವರಿದಿದೆ. ನಮ್ಮ ಕಾರ್ಯಕರ್ತರು ವಿಶ್ವಾಸ-ಧೈರ್ಯ ಕಳೆದುಕೊಳ್ಳಬಾರದು. ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ಹೈಕೋರ್ಟ್ ಪೀಠ ಇರುವ ಎಲ್ಲ ಸ್ಥಳಗಳಲ್ಲಿ ಕಾನೂನು ಪ್ರಕೋಷ್ಠದ ಕಾರ್ಯಕರ್ತರು ಮತ್ತು ವಕೀಲರ ತಂಡ ರಚನೆಯಾಗಿದೆ ಎಂದು ಹೇಳಿದರು.
ಗೃಹ ಸಚಿವರು ಕರಾವಳಿ ಭಾಗದಲ್ಲಿ ಅತ್ಯಂತ ಪೂರ್ವಾಗ್ರಹದಿಂದ ಹೇಳಿಕೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದ ಅವರು, ಗಣಪತಿ ಹಬ್ಬ, ಯುಗಾದಿ, ರಾಮನವಮಿ, ಹನುಮ ಜಯಂತಿಯ ಸಂದರ್ಭದಲ್ಲೂ ಮೆರವಣಿಗೆಗೆ ಅವಕಾಶ ಕೊಟ್ಟಿರಲಿಲ್ಲ. ಆಗಲೂ ಕೋರ್ಚ್‌ಗೆ ಹೋಗಿ ಅನುಮತಿ ಪಡೆದು ರಾರಯಲಿ, ಮೆರವಣಿಗೆ, ಶೋಭಾಯಾತ್ರೆ ಮಾಡಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಹೇಳಿದರು.
ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನಾತ್ಮಕವಾಗಿ ನಮ್ಮ ಕಾರ್ಯಕರ್ತರನ್ನು ಕಟ್ಟಿಹಾಕುವ ಕೆಲಸಕ್ಕೆ ಮುಂದಾಗಿದೆ. ಸಚಿವರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ಸಹಾಯವಾಣಿ ಉದ್ಘಾಟಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ರಾಜ್ಯ ಸಮಿತಿ ಸದಸ್ಯ ವಸಂತಕುಮಾರ್, ವಕೀಲ ಸಂದೀಪ್ ರವಿ ಉಪಸ್ಥಿತರಿದ್ದರು.
