ಬೆಳಗಾವಿ[ಫೆ.14]: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಕುರಿತು ಪಕ್ಷದ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ)ಯಲ್ಲಿ ಪರಾಮರ್ಶೆ ಮಾಡಲಾಗುವುದು ಎಂದು ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಬಿಜೆಪಿಗೂ ಯಶಸ್ಸು ದೊರೆತಿಲ್ಲ. ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಿ, ಒಡೆದಾಳುವ ನೀತಿ ಅನುಸರಿಸಿದ್ದ ಆಡಳಿತಾರೂಢ ಬಿಜೆಪಿಗೆ ಜನಮನ್ನಣೆ ನೀಡಲಿಲ್ಲ. ಚುನಾವಣೆಯಲ್ಲಿ ಸೋಲು, ಗೆಲವು ಸಹಜ ಎಂದು ವಿಶ್ಲೇಷಿಸಿದರು.

ಕೆಲವು ಬಾರಿ ಅಭಿವೃದ್ಧಿ ವಿಷಯವು ಕೂಡ ಚುನಾವಣೆಯಲ್ಲಿ ಬರುವುದಿಲ್ಲ. ಅಜೆಂಡಾ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಮೋದಿ ಸರ್ಕಾರ ಎರಡು ಸಲ ಅಜೆಂಡಾ ಮೇಲೆಯೇ ಗೆದ್ದಿದೆ. ಜನರನ್ನು ಭಾವನಾತ್ಮಕವಾಗಿ ಸೆಳೆದು, ಅಪಪ್ರಚಾರ ಮಾಡಿಯೂ ಅಧಿಕಾರದ ಗದ್ದುಗೆ ಹಿಡಿಯುತ್ತಾರೆ ಎಂದು ದೂರಿದರು.

ಮೀಸಲಾತಿ ಮೂಲಭೂತ ಹಕ್ಕು:

ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಸಂವಿಧಾನದಲ್ಲಿರುವ ಮೂಲಭೂತ ಹಕ್ಕು. ಆದರೆ, ಈ ವಿಚಾರದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ಟಿಪ್ಪಣಿಯನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದರು.