ಹಿಂದೂ ದೇಗುಲಗಳಿಗಾಗಿ ನಮ್ಮಂಥ ಯೋಜನೆ ಬಿಜೆಪಿಗರು ತಂದಿಲ್ಲ: ಸಿದ್ದರಾಮಯ್ಯ ಟಾಂಗ್
ಬಿಜೆಪಿಯವರು ಧರ್ಮ, ಆಚಾರ-ವಿಚಾರ ಕುರಿತು ಮಾತನಾಡುತ್ತಾರೆ. ಜನರ ದಾರಿತಪ್ಪಿಸುತ್ತಾರೆ ಅಷ್ಟೆ. ಆದರೆ ಹಿಂದೂ ದೇಗುಲಗಳ ಅಭಿವೃದ್ಧಿಗಾಗಿ ನಾವು ಜಾರಿಗೆ ತಂದಷ್ಟು ಯೋಜನೆಗಳನ್ನು ಬಿಜೆಪಿಯವರು ತಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರು.
ಬೆಳಗಾವಿ (ಅ.14): ಬಿಜೆಪಿಯವರು ಧರ್ಮ, ಆಚಾರ-ವಿಚಾರ ಕುರಿತು ಮಾತನಾಡುತ್ತಾರೆ. ಜನರ ದಾರಿತಪ್ಪಿಸುತ್ತಾರೆ ಅಷ್ಟೆ. ಆದರೆ ಹಿಂದೂ ದೇಗುಲಗಳ ಅಭಿವೃದ್ಧಿಗಾಗಿ ನಾವು ಜಾರಿಗೆ ತಂದಷ್ಟು ಯೋಜನೆಗಳನ್ನು ಬಿಜೆಪಿಯವರು ತಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರು. ಸವದತ್ತಿ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಮಹಿಳಾ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ದೇವರು, ಧರ್ಮ ತಮಗೆ ಮಾತ್ರ ಸೇರಿದ್ದು ಎಂದು ಬಿಜೆಪಿಯವರು ಭಯ ಹುಟ್ಟಿಸುವಂತೆ ಮಾತನಾಡುತ್ತಾರೆ.
ಆದರೆ ಈವರೆಗೂ ಸವದತ್ತಿ ಯಲ್ಲಮ್ಮ ದೇವಿಯ ಭಕ್ತರಿಗೆ ನಾವು ಮಾಡಿದಂಥ ಕಾರ್ಯಕ್ರಮವನ್ನು ಬಿಜೆಪಿಯವರು ಈವರೆಗೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ನಾವು ಚಾಮುಂಡೇಶ್ವರಿ, ಹುಲಿಗೆಮ್ಮ, ಘಾಟಿ ಸುಬ್ರಹ್ಮಣ್ಯ ದೇಗುಲಗಳ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿದ್ದೇವೆ. ಶಕ್ತಿ ಯೋಜನೆಯಂಥ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಕುರಿತು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳು, ಯೋಜನೆಗಳ ಪಟ್ಟಿಕೊಟ್ಟರು.
ಯಾವ ದೇವರೂ ಮನುಷ್ಯರನ್ನು ಧರ್ಮದ ಕಾರಣಕ್ಕೆ ದ್ವೇಷಿಸಿ ಎಂದು ಹೇಳುವುದಿಲ್ಲ. ಬಿಜೆಪಿ ಮಾತ್ರ ದೇವರ ಹೆಸರಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ ಎಂದ ಸಿದ್ದರಾಮಯ್ಯ ದೇವರು ಮತ್ತು ಧರ್ಮದ ಹೆಸರಲ್ಲಿ ದೇಶ, ರಾಜ್ಯವನ್ನು ಒಡೆಯುವ ಬಿಜೆಪಿಯನ್ನು ಮೊದಲು ದೂರ ಇಡಬೇಕು. ಅವರ ಬಗ್ಗೆ ಜಾಗೃತರಾಗಿರಬೇಕು. ಇಲ್ಲದಿದ್ದರೆ ನಮ್ಮ ನಾಡೂ ಉಳಿಯಲ್ಲ, ದೇಶವೂ ಉಳಿಯಲ್ಲ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದ ಜನರು ಸುಖ, ಸಮೃದ್ಧಿಯಿಂದ ಇರಲಿ: ಸಿದ್ದರಾಮಯ್ಯ ಪ್ರಾರ್ಥನೆ
ಗೃಹಲಕ್ಷ್ಮಿ ಯೋಜನೆ ಜಾರಿಯಾದರೆ ಅತ್ತೆ ಸೊಸೆ ಜಗಳ ಆಗುತ್ತದೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆದರು. ಆದರೆ ಗೃಹಲಕ್ಷ್ಮಿ ಹಣವನ್ನು ಕೂಡಿಸಿಟ್ಟು ಅತ್ತೆಯರು ಸೊಸೆಯರಿಗೆ ಬಳೆ ಅಂಗಡಿ ಹಾಕಿಕೊಟ್ಟಿದ್ದಾರೆ. ಟೈಲರಿಂಗ್ ಮಷಿನ್ ಕೊಡಿಸಿದ್ದಾರೆ. ಇಂಥ ನೂರಾರು ಉದಾಹರಣೆಗಳಿವೆ ಎಂದರು. ಬಿಜೆಪಿಯವರು ಏನೂ ಮಾಡಲಿಲ್ಲ, ಕೇವಲ ಹಿಂದೂ ಧರ್ಮದ ಹೆಸರಲ್ಲಿ ಜನರ ದಾರಿ ತಪ್ಪಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನನ್ನ ಜನಪರ ಯೋಜನೆ ಸಹಿಸದೇ ಬಿಜೆಪಿಯವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಜನರ ಆಶೀರ್ವಾದ ಇರುವವರೆಗೆ ನಾನು ಮುಖ್ಯಮಂತ್ರಿಯಾಗಿರುತ್ತೇನೆ ಎಂದರು.