ಸ್ವಾತಂತ್ರ್ಯೋತ್ಸವ ಆಚರಿಸುವ ನೈತಿಕತೆ ಬಿಜೆಪಿಗಿಲ್ಲ: ಜಿ.ಎಸ್. ಪಾಟೀಲ
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ, ದೇಶಕ್ಕೆ ನೀಡಿದ ಕೊಡುಗೆ ಕುರಿತು ಜಾಗೃತಿ
ರೋಣ(ಆ.06): ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ತ್ಯಾಗ, ಬಲಿದಾನ ಅಪಾರವಾಗಿದ್ದು, ಸ್ವಾತಂತ್ರ್ಯೋತ್ತರ ದೇಶದ ಭದ್ರತೆ, ಏಕತೆ ಮತ್ತು ಸ್ವಾವಲಂಬನೆ ಬದುಕಿಗೆ ಕಾಂಗ್ರೆಸ್ ಅಪಾರ ಕೊಡುಗೆ ನೀಡಿದ್ದು, ದೇಶದ ಸಂವಿಧಾನ ಕುರಿತು ಗೌರವವಿಲ್ಲದ ಆಡಳಿತರೂಢ ಬಿಜೆಪಿಗೆ ಸ್ವಾತಂತ್ರ್ಯೋತ್ಸವ ಆಚರಿಸುವ ಯಾವುದೇ ನೈತಿಕತೆಯಿಲ್ಲ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಿ.ಎಸ್. ಪಾಟೀಲ ಕಿಡಿಕಾರಿದರು. ಅವರು ಶುಕ್ರವಾರ ತಾಲೂಕಿನ ಸರ್ಜಾಪುರ ಗ್ರಾಮದಿಂದ ಕಾಂಗ್ರೆಸ್ ನೇತೃತ್ವದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹಮ್ಮಿಕೊಂಡ 166 ಕಿ.ಮೀ. ಪಾದಯಾತ್ರೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಬ್ರಿಟಿಷರಿಂದ ದೇಶವನ್ನು ಬಂಧಮುಕ್ತಗೊಳಿಸಲು ಕಾಂಗ್ರೆಸ್ ಮುಂಚೂಣಿಯಲ್ಲಿದ್ದು, ಹೋರಾಟದಲ್ಲಿ ಅನೇಕ ಮಹನೀಯರು ಪ್ರಾಣಾರ್ಪಣೆ ಗೈದಿದ್ದಾರೆ. ಇದರ ಪ್ರತಿಫಲವಾಗಿ ದೇಶ ಸ್ವತಂತ್ರಗೊಂಡಿತು. ಕಾಂಗ್ರೆಸ್ ಯಾವುದೇ ಅಧಿಕಾರ ಮಾಡಲು ಹೋರಾಟ ಮಾಡಿಲ್ಲ. ಕಾಂಗ್ರೆಸ್‌ನ ಸ್ವಾತಂತ್ರ್ಯಕ್ಕಾಗಿ ಹೋರಾಟ, ಸ್ವಾತಂತ್ರ್ಯೋತ್ತರ ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆ ಏನು ಎಂಬುದನ್ನು ಪ್ರತಿ ಮನೆ ಮನೆಗೆ ತೆರಳಿ ಜನತೆಗೆ ತಿಳಿಸುವ ಉದ್ದೇಶ ಹೊಂದಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಪಾದಯಾತ್ರೆ ಜರುಗಲಿದೆ. ಅದರಂತೆ ರೋಣ ಕ್ಷೇತ್ರದ ಮೊದಲ ಗ್ರಾಮವಾದ ಸರ್ಜಾಪುರದಿಂದ ಪ್ರಾರಂಭವಾಗಿ ಆ. 13ರಂದು ಮುಂಡರಗಿ ತಾಲೂಕಿನ ಡಂಬಳ ಹೋಬಳಿಯಲ್ಲಿ ಪಾದಯಾತ್ರೆ ಅಂತಿಮಗೊಳ್ಳಲಿದ್ದು, ಒಟ್ಟು 166 ಕಿ.ಮೀ. ಪಾದಯಾತ್ರೆ ಜರುಗಲಿದೆ ಎಂದರು.
ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ ದಿನದಂದೇ ಕಾಂಗ್ರೆಸ್ ಕಪ್ಪುಬಟ್ಟೆ ಧರಿಸಿದ್ದೇಕೆ?
ಪ್ರಧಾನಿ ಮೋದಿಜಿ ನುಡಿದಂತೆ ನಡೆಯದೇ ಕಳೆದ 8 ವರ್ಷದಲ್ಲಿ ಯುವಕರಿಗೆ ಉದ್ಯೋಗ ಕೊಡದೇ ಮತ್ತಷ್ಟುನಿರುದ್ಯೋಗ ಸೃಷ್ಡಿ ಮಾಡಿದ್ದಾರೆ. ಮೋದಿ ಮೋದಿ ಎಂದು ಹೇಳುವ ಯುವಕರೇ ಮೋದಿಯವರು ನಿಮಗೇನು ಕೊಡುಗೆ ನೀಡಿದ್ದಾರೆ ಎಂಬುದನ್ನು ಅವಲೋಕ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಇಲ್ಲದಂತೆ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ. ಮೋದಿಯವರಿಗೆ ವಿರೋಧ ಮಾಡುವವರನ್ನು ಹತ್ತಿಕ್ಕಲು ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ ಶಾಂತಿ ತೋಟವಾಗಿದ್ದು, ಆದರೆ ಬಿಜೆಪಿ ರಾಜ್ಯದಲ್ಲಿ ಜಾತಿಯ ವಿಷ ಬೀಜ ಬಿತ್ತಿ ಶಾಂತಿಯನ್ನು ಹಾಳು ಮಾಡುತ್ತಿದೆ. ಸಿಎಂ ಬೊಮ್ಮಾಯಿ ಆಡಳಿತದಲ್ಲಿ 8 ದಿನಕ್ಕೊಂದು ಹತ್ಯೆಗಳಾಗುತ್ತಿವೆ, ಇದನ್ನೆ ಪ್ರಶಂಸೆ ಮಾಡಲು ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿರಬಹುದು. ರಾಜ್ಯ ಸರ್ಕಾರಕ್ಕೆ ಅಮಿತ್ ಶಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳುತ್ತಿರುವುದು ನಾಚಿಕೆ ಸಂಗತಿಯಾಗಿದೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯದ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.
ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೋಂಪುರ ಮಾತನಾಡಿ, ದೇಶ ಅಪಾಯದಲ್ಲಿದ್ದು, ಜನತೆಯನ್ನು ಜಾಗ್ರತಗೊಳಿಸುವ ದಿಸೆಯಲ್ಲಿ ಕಾಂಗ್ರೆಸ್ ಅಮೃತ ಸ್ವಾತಂತ್ರ್ಯೋತ್ಸವ ಅಂಗವಾಗಿ ಮನೆ ಮನೆಗೆ ತೆರಳಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೂಟಿ ಮಾಡುತ್ತಿದ್ದಾರೆ.ದೇಶದ ರಕ್ಷಣೆಗೆ, ಜನರ ಸ್ವಾಭಿಮಾನ ಜಾಗ್ರತಗೊಳ್ಳಬೇಕಿದೆ ಎಂದರು.
ಕೆಪಿಸಿಸಿ ಸದಸ್ಯ ಹಸನಸಾಬ ದೋಟಿಹಾಳ, ಶರಣಗೌಡ ಪಾಟೀಲ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ್, ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಶರಣಪ್ಪ ಬೆಟಗೇರಿ, ಪ್ರಭು ಮೇಟಿ, ಮಂಜುಳಾ ರೇವಡಿ, ಮಂಜುಳಾ ಹುಲ್ಲಣ್ಣವರ, ಪರಶುರಾಮ ಅಳಗವಾಡಿ, ವಿ.ಆರ್. ಗುಡಿಸಾಗರ, ಶಿವರಾಜ ಘೋರ್ಪಡೆ, ಪ್ರವೀಣಗೌಡ ಗೌಡರ, ನೀಲಮ್ಮ ಪರಮಟ್ಟಿ, ಅಶೋಕ ಪಾಟೀಲ, ಮೌನೇಶ ಹಾದಿಮನಿ, ನಿರ್ಮಲಾ ರಾಠೋಡ, ಚಂದ್ರಶೇಖರ ರಾಜೂರ, ಸೋಮನಗೌಡ ಪಾಟೀಲ, ರಾಜು ಮಾಲಗಿತ್ತಿ, ಬಿ.ಎಸ್. ಕರಿಗೌಡ್ರ, ನಿಂಗಪ್ಪ ಕಾಶಪ್ಪನವರ, ಉಮೇಶ ರಾಠೋಡ, ವೀರನಗೌಡ ಗೌಡರ ಸೇರಿದಂತೆ ಅನೇಕರು ಭಾಗವಹಿಸಿದ್ದರು.