ಬಿಜೆಪಿಯಿಂದ ನೀರಾವರಿ, ಮೀಸಲು ವಿವಾದಗಳಿಗೆ ತೆರೆ: ಅಣ್ಣಾಮಲೈ
ಕರ್ನಾಟಕದ ನೀರಾವರಿ ಹಾಗೂ ಮೀಸಲಾತಿ ವಿವಾದಗಳನ್ನು ಬಿಜೆಪಿ ಸಮರ್ಥವಾಗಿ ಬಗೆಹರಿಸಿದ್ದು ಅಭಿವೃದ್ಧಿ ರಾಜಕೀಯದ ವಾರಸುದಾರಿಕೆ ಪ್ರದರ್ಶಿಸಿದೆ ಎಂದು ಬಿಜೆಪಿ ತಮಿಳುನಾಡು ಘಟಕದ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದರು.
ಚಿತ್ರದುರ್ಗ (ಏ.01): ಕರ್ನಾಟಕದ ನೀರಾವರಿ ಹಾಗೂ ಮೀಸಲಾತಿ ವಿವಾದಗಳನ್ನು ಬಿಜೆಪಿ ಸಮರ್ಥವಾಗಿ ಬಗೆಹರಿಸಿದ್ದು ಅಭಿವೃದ್ಧಿ ರಾಜಕೀಯದ ವಾರಸುದಾರಿಕೆ ಪ್ರದರ್ಶಿಸಿದೆ ಎಂದು ಬಿಜೆಪಿ ತಮಿಳುನಾಡು ಘಟಕದ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದರು. ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಗುರುವಾರ ಬಿಜೆಪಿ ಡಿಜಿಟಲ್ ಮಾಧ್ಯಮ ಪ್ರಕೋಷ್ಠದಿಂದ ಆಯೋಜಿಸಿದ್ದ ದಾವಣಗೆರೆ ವಿಭಾಗ ಮಟ್ಟದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕರ್ನಾಟಕದ ಜನತೆ ಡಬಲ್ ಇಂಜಿನ್ ಸರ್ಕಾರದ ಸಾಧನೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಚುನಾವಣೆ ಪ್ರಾಮುಖ್ಯತೆ ಪಡೆದಿದ್ದು ಜಾತಿ ರಾಜಕಾರಣ ನೇಪಥ್ಯಕ್ಕೆ ಸರಿದಿದೆ ಎಂದರು.
ನಿಷ್ಠಾವಂತ ಕಾರ್ಯಕರ್ತರು ಇರುವುದರಿಂದ ಬಿಜೆಪಿ ಜೀವಂತವಾಗಿದೆ. ಈ ಪಕ್ಷಕ್ಕೆ ಹೋರಾಟದ ಹಿನ್ನೆಲೆ ಇದೆ. ಕಾಂಗ್ರೆಸ್ ಅಂದರೆ ಕ್ರಿಮಿನಲ್, ಕಮ್ಯೂನಲ್. ವಿವಾದಗಳ ಹುಟ್ಟು ಹಾಕಿ ಅವುಗಳನ್ನು ಜೀವಂತವಾಗಿ ಇಟ್ಟುಕೊಂಡು ಬರುವುದೇ ಕಾಂಗ್ರೆಸ್ ಜಾಯಮಾನ. ಆದರೆ ಬಿಜೆಪಿ ಸದಾ ಸಮಸ್ಯೆ ನಿವಾರಣೆಗೆ ಯತ್ನಿಸುತ್ತದೆ. ಇದಕ್ಕೆ ಮೀಸಲಾತಿ ವಿವಾದ ಬಗೆಹರಿದಿರುವುದೇ ಸಾಕ್ಷಿ ಎಂದರು. ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಿದೆ. ಹಾಗೆ ನೋಡಿದರೆ ಕಳೆದ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಹೆಚ್ಚು ಸ್ಥಾನ ನೀಡಿದ್ದರು. ಕಾಂಗ್ರೆಸ್ ಜೆಡಿಎಸ್ ಬೇಡ ಎಂದು ಜನ ನಿರ್ಧರಿಸಿದ್ದರು.
ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಕೊಡಿ: ಅಣ್ಣಾಮಲೈ
ಆದರೆ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಅಸಹಜ ಮೈತ್ರಿ ಮಾಡಿಕೊಂಡು ಇಬ್ಬರೂ ಸೇರಿ ಸರ್ಕಾರ ಮಾಡಿದ್ದರು. ಇಬ್ಬರ ಸಿದ್ದಾಂತದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಮೈತ್ರಿ ಸರ್ಕಾರ ಬಲು ಬೇಗ ಪತನವಾಯಿತು ಎಂದರು. ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳಲ್ಲಿ ಸವಾಲುಗಳನ್ನು ಎದುರಿಸಲು ಎರಡು ವರ್ಷಗಳು ಉರುಳಿದವು. ಎರಡು ವರ್ಷ ಕೋವಿಡ್, ಲಾಕ್‌ಡೌನ್, 118 ವರ್ಷದ ದಾಖಲೆ ಮಳೆಯ ಸವಾಲುಗಳನ್ನು ಎದುರಿಸಿ ಅಭಿವೃದ್ಧಿ ಮಾಡಲಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕ ನಂ.1 ಆಗಿದೆ . ದೇಶದ ಅಂಕಿ ಅಂಶಗಳು ಸ್ವತಹ ಇದನ್ನು ಸಾಬೀತು ಪಡಿಸಿವೆ ಎಂದು ಅಣ್ಣಾಮಲೈ ಹೇಳಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜನಪರ ಆಡಳಿತ ನೀಡಿದ ಪರಿಣಾಮ ರಾಜ್ಯದಲ್ಲಿ ಮತ್ತೆ ಬಿಜೆಪಿ ಕಡೆ ಜನ ಕಣ್ಣು ಹಾಯಿಸುತ್ತಿದ್ದಾರೆ.150 ಸ್ಥಾನ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲ ಮೋರ್ಚಾಗಳು ತಂಡವಾಗಿ ಕೆಲಸ ಮಾಡಬೇಕಿದೆ ಎಂದರು. ಬದಲಾದ ಪ್ರಚಾರ ವೈಖರಿಯಿಂದಾಗಿ ಜನಾಭಿಪ್ರಾಯ ರೂಪಿಸುವ ನೆಲೆಗಳು ಸೋಷಿಯಲ್ ಮೀಡಿಯಾಗಳಲ್ಲಿ ವಿಸ್ತೃತವಾಗಿ ಹರಡಿವೆ.ಹಿಂದೆ ಕಾರ್ಯಕರ್ತರು ಬೂತ್ ಬಳಿ ಇದ್ದು ಪ್ರಚಾರ ಮಾಡುತ್ತಿದ್ದರು. ಈಗ ಅದು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುವ ಪೋಸ್ಟ್ ಮೂಲಕ ಜನಾಭಿಪ್ರಾಯ ರೂಪಿಸಲಾಗುತ್ತಿದೆ.
Chitradurga: ರಂಗೇರಿದ ಹೊಳಲ್ಕೆರೆ ಚುನಾವಣಾ ಅಖಾಡ: ಮಾಜಿ ಸಚಿವ ಎಚ್.ಆಂಜನೇಯಗೆ ಅದ್ದೂರಿ ಸ್ವಾಗತ
ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ನಮ್ಮ ವಿರೋಧಿಗಳು ಮಾಡುತ್ತಿದ್ದಾರೆ. ಇದಕ್ಕೆ ಸಮರ್ಥ ಉತ್ತರ ನೀಡುವ ಕೆಲಸವನ್ನು ಸೋಷಿಯಲ್ ಮೀಡಿಯಾ ಮೂಲಕ ನಮ್ಮ ಕಾರ್ಯಕರ್ತರು ಮಾಡಬೇಕಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಡಿಜಿಟಲ್ ಮಾಧ್ಯಮ ರಾಜ್ಯ ಸಂಚಾಲಕ ವಿಕಾಸ್ ಪುತ್ತೂರು, ವಿಭಾಗ ಸಂಚಾಲಕ ರಾಘವೇಂದ್ರ ನಾಗೂರು, ಪ್ರಶಾಂತ್, ಕೊಟ್ರೇಶ್ ಗೌಡ, ರವಿಕಿರಣ್, ಸಂತೋಷ ಗುಡಿಮಠ, ಮನೋಜ್ ಇದ್ದರು.