ಉದ್ದಿಮೆಗಳ ಮಾರಾಟ ಮಾಡಿದ್ದು ಬಿಟ್ರೆ ಬಿಜೆಪಿ ಏನೂ ಮಾಡಿಲ್ಲ: ಎಚ್.ವಿ.ಕುಮಾರಸ್ವಾಮಿ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರ್ಕಾರಿ ಸಾಮ್ಯದ ಉದ್ದಿಮೆಗಳನ್ನು ಮಾರಾಟ ಮಾಡಿದ್ದು ಬಿಟ್ಟರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಏನೂ ಮಾಡಿಲ್ಲವೆಂದು ಯುವ ಮುಖಂಡ ಹಾಗೂ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಪಾವಗಡದ ಎಚ್.ವಿ.ಕುಮಾರಸ್ವಾಮಿ ಆರೋಪಿಸಿದರು.
ಚಿತ್ರದುರ್ಗ (ಡಿ.10): ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸರ್ಕಾರಿ ಸಾಮ್ಯದ ಉದ್ದಿಮೆಗಳನ್ನು ಮಾರಾಟ ಮಾಡಿದ್ದು ಬಿಟ್ಟರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಏನೂ ಮಾಡಿಲ್ಲವೆಂದು ಯುವ ಮುಖಂಡ ಹಾಗೂ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಪಾವಗಡದ ಎಚ್.ವಿ.ಕುಮಾರಸ್ವಾಮಿ ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸೋನಿಯಾ ಗಾಂಧಿ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ದೇಶಕ್ಕೆ ನೆಹರು, ಇಂದಿರಾ ಗಾಂಧಿ, ರಾಜೀವ್‌ಗಾಂಧಿ ಕೊಡುಗೆ ಅಪಾರ. ಹದಿನೆಂಟು ವರ್ಷಗಳ ಕಾಲ ಸೋನಿಯಾ ಗಾಂಧಿ ಪಕ್ಷದ ಸಾರಥ್ಯ ವಹಿಸಿ, ಮುನ್ನಡೆಸಿಕೊಂಡು ಹೋಗಿದ್ದು ಸುಲಭವಲ್ಲ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯ, ಅಣೆಕಟ್ಟೆ, ಬಿಎಸ್ಎನ್ಎಲ್, ರೈಲ್ವೆ, ಎಚ್‌ಎಎಲ್. ಏರ್‌ಪೋರ್ಟ್ ಇವುಗಳೆಲ್ಲ ಕಾಂಗ್ರೆಸ್ ಕೊಡುಗೆಯಾಗಿವೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದೊಂದನ್ನೆ ಮಾರುತ್ತಿದೆ. ಸೋನಿಯಾಗಾಂಧಿ ಅವರಿಗೆ ಅಧಿಕಾರದ ಆಸೆ ಇರಲಿಲ್ಲ. ಹಾಗಾಗಿ ಮನಮೋಹನ್‌ಸಿಂಗ್‌ರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿದರು. ಪಕ್ಷದ ಇತಿಹಾಸವನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಿ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ವಿನಂತಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸಲು ರಥಯಾತ್ರೆ: ಸಂಸದ ಮುನಿಸ್ವಾಮಿ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಅತ್ತೆ ಇಂದಿರಾ ಗಾಂಧಿ, ಪತಿ ರಾಜೀವ್ ಗಾಂಧಿಯ ಹತ್ಯೆಯಾದಂತ ಆತಂಕದ ಸ್ಥಿತಿಯಲ್ಲಿ ಸೋನಿಯಾ ಗಾಂಧಿ ಭಾರತವನ್ನು ಬಿಟ್ಟು ತನ್ನ ತವರು ಇಟಲಿಗೆ ಹೋಗಲಿಲ್ಲ. ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಮುನ್ನ ಸೋನಿಯಾ ಗಾಂಧಿ ಚಿತ್ರದುರ್ಗಕ್ಕೆ ಆಗಮಿಸಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಜೊತೆ ಚರ್ಚಿಸಿ ಹೋಗಿದ್ದರು. ಪ್ರಧಾನಿಯಾಗುವ ಅವಕಾಶ ಸಿಕ್ಕರೂ ಆಸೆ ಪಡದೆ ಮನಮೋಹನ್ ಸಿಂಗ್‌ರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ಪಕ್ಷಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ ಮಾದರಿ ಮಹಿಳೆ ಎನಿಸಿಕೊಂಡಿದ್ದಾರೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾಗಲೂ ಸೋನಿಯಾಗಾಂಧಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ತೀರ್ಮಾನ ತೆಗೆದುಕೊಂಡರು. ಎರಡು ಬಾರಿ ಸಂಸದರಾಗಿ ಪ್ರಧಾನಿ ಹುದ್ದೆ ಸಿಕ್ಕರೂ ಅಲಂಕರಿಸಲಿಲ್ಲ. ಅಂತಹ ತ್ಯಾಗಮಯಿ ಎಂದು ಸ್ಮರಿಸಿದರು.
ಕೆಪಿಸಿಸಿ ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಸೋನಿಯಾ ಗಾಂಧಿ ಕೊಡುಗೆ ದೇಶಕ್ಕೆ ಅಪಾರ. ಅತ್ತೆ. ಗಂಡನನ್ನು ಕಳೆದುಕೊಂಡರೂ ಎದೆಗುಂದದೆ ಪಕ್ಷವನ್ನು ಪುನಶ್ಚೇತನಗೊಳಿಸುವಲ್ಲಿ ಹಿಂದೆ ಬೀಳಲಿಲ್ಲ. ಇನ್ನೇನು ನಾಲ್ಕೆಂದು ತಿಂಗಳಲ್ಲಿ ನಡೆಯುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರ್ಯಕರ್ತರು ಈಗಿನಿಂದಲೇ ಶ್ರಮಿಸುವಂತೆ ಮನವಿ ಮಾಡಿದರು.
ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ.ಕೆ.ಮೀನಾಕ್ಷಿ ಮಾತನಾಡಿ ಸೋನಿಯಾ ಗಾಂಧಿ ಭಾರತಕ್ಕೆ ಮಾದರಿ ಮಹಿಳೆಯಾಗಿದ್ದಾರೆ. ಎಲ್ಲವನ್ನು ಕಳೆದುಕೊಂಡ ಆತಂಕದ ಸಂದರ್ಭದಲ್ಲಿ ಭಾರತವನ್ನು ತೊರೆದು ತವರು ದೇಶಕ್ಕೆ ಹೋಗಲಿಲ್ಲ. ತ್ಯಾಗಮಯಿ ಸೋನಿಯಾ ರವರ ಕೈಬಲ ಪಡಿಸಬೇಕಾಗಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದರು.
ನಮ್ಮ ಸಮಸ್ಯೆ ನಾವು ಪಕ್ಷದಲ್ಲಿಯೇ ಪರಿಹರಿಸಿಕೊಳ್ಳುತ್ತೇವೆ: ಸಚಿವ ಎಂ.ಬಿ.ಪಾಟೀಲ್
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್, ಬಿ.ಜಿ.ಶ್ರೀನಿವಾಸ್, ಕಾರ್ಯದರ್ಶಿ ಶಬ್ಬೀರ್‌ಭಾಷ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್ ನವಾಜ್, ದಲಿತ ಮುಖಂಡ ಬಿ.ರಾಜಣ್ಣ, ಚಾಂದ್‌ಪೀರ್, ಭಾಗ್ಯಮ್ಮ, ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಜಯಣ್ಣ, ಸೇವಾದಳದ ಇಂದಿರಾ, ಜಿಲ್ಲಾ ಕಾಂಗ್ರೆಸ್ ಕಿಸಾನ್‌ಸೆಲ್ ವಿಭಾಗದ ಉಪಾಧ್ಯಕ್ಷ ಶಿವಲಿಂಗಪ್ಪ ಇದ್ದರು.