Bharat Jodo Yatra: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಇಂದು ರೈತರು ಬಡವರು, ಅಲ್ಪಸಂಖ್ಯಾತರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಇದನ್ನ ಜನರಿಗೆ ತಿಳಿಸಬೇಕು ನೈಜ ವಿಚಾರ ಜನರ ಮುಂದೆ ಇಡುವ ಸಲುವಾಗಿ ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ರಾಯಚೂರು (ಅ.10) : ಮೋದಿ ಪ್ರಧಾನಿಯಾದ ಮೇಲೆ ಹೇಟ್ ಪಾಲಿಟಿಕ್ಸ್ ಜಾಸ್ತಿ ಆಗಿದೆ. ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ರಾಯಚೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ.
ವಿಜಯಪುರ: ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಪೋಸ್ಟ್: ಪೊಲೀಸ್ ಕಾನ್ಸಟೇಬಲ್ ಸಸ್ಪೆಂಡ್
ರಾಹುಲ್ ಗಾಂಧಿಯವರ ಭಾರತ ಐಕ್ಯತಾ ಯಾತ್ರೆ ಅಂಗವಾಗಿ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಸಿದ್ದರಾಮಯ್ಯನವರು ಮಾತನಾಡಿದರು. ಬಿಜೆಪಿ ಆಡಳಿತ ಬಂದ ಮೇಲೆ ದೇಶದ ಜನರ ಮನಸ್ಸುಗಳು ಒಡೆದಿವೆ. ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಅವಕ್ಕೆ ಪರಿಹಾರ ಕೊಡುವ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಅವರು ಕೊಟ್ಟ ಭರವಸೆಗಳನ್ನೂ ಈಡೇರುಸುತ್ತಿಲ್ಲ, ಇದನ್ನ ಮುಚ್ಚಿಕೊಳ್ಳಲು ಹಿಂದುತ್ವ ವಿಚಾರ ಮುನ್ನೆಲೆಗೆ ತರುತ್ತಿದ್ದಾರೆ. ಮುಂದಿನ ಚುನಾವಣೆಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಕಳೆದ ತಿಂಗಳು 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿದೆ. ಈ ಯಾತ್ರೆ ಕಾಶ್ಮೀರದರೆಗೆ ನಡೆಯುತ್ತಿದೆ. ಒಟ್ಟು 3570 ಕಿ.ಮಿ 12 ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶದಲ್ಲಿ ಪಾದಯಾತ್ರೆ ನಡೆಯುತ್ತದೆ. ಹೀಗಾಗಿ ಇದು ಸ್ವಾತಂತ್ರ್ಯ ಬಳಿಕ ದೇಶದಲ್ಲಿ ಐತಿಹಾಸಿಕ ಪಾದಯಾತ್ರೆ ಆಗಲಿದೆ ಇಂದು ರೈತರು ಬಡವರು, ಅಲ್ಪಸಂಖ್ಯಾತರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಇದನ್ನ ಜನರಿಗೆ ತಿಳಿಸಬೇಕು ನೈಜ ವಿಚಾರ ಜನರ ಮುಂದೆ ಇಡುವ ಸಲುವಾಗಿ ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಂಗಳೂರಿಂದ ಬಳ್ಳಾರಿ ಪಾದಯಾತ್ರೆ ನಮಗೆ ದೊಡ್ಡ ಕಸರತ್ತು ಆಗಿತ್ತು, ಇದು ಅದಕ್ಕಿಂತ ದೊಡ್ಡದು. ಅಕ್ಟೋಬರ್ 15 ರಂದು ಬಳ್ಳಾರಿಯಲ್ಲಿ ಮಧ್ಯಾಹ್ನ 1:30 ಕ್ಕೆ ಪಾದಯಾತ್ರೆ ನಡೆಯುತ್ತದೆ. ಅಲ್ಲಿ ಬೃಹತ್ ಸಮಾವೇಶ ಮಾಡಲು ನಿರ್ಧರಿಸಿದ್ದೇವೆ.
ಮಂತ್ರಾಲಯ ಮಠಕ್ಕೆ ಹೋಗಿ ರಾಯಚೂರಿಗೆ ಬರುತ್ತೇವೆ:
ರಾಯಚೂರಿನಲ್ಲಿ 21ಕ್ಕೆ ರಾಹುಲ್ ಗಾಂಧಿ ಬರುತ್ತಾರೆ. ಇಲ್ಲಿ ಪಾದಯಾತ್ರೆ ನಡೆಸಿ ಬಳಿಕ ತೆಲಂಗಾಣಕ್ಕೆ ಹೋಗುತ್ತಾರೆ. ಕರ್ನಾಟಕದಲ್ಲಿ ಒಟ್ಟು 21 ದಿನಗಳ ಕಾಲ 510 ಕಿಮೀ ಪಾದಯಾತ್ರೆ ನಡೆಯುತ್ತದೆ. ಎಲ್ಲೂ ಬಹಿರಂಗ ಸಮಾವೇಶ ಮಾಡುವುದಿಲ್ಲ. ಆದರೆ ಬಳ್ಳಾರಿಯಲ್ಲಿ ಮಾತ್ರ ಒಂದು ಸಮಾವೇಶ ಮಾಡಲಾಗುತ್ತದೆ ಎಂದು ಭಾರತ್ ಜೋಡೋ ಪಾದಯಾತ್ರೆಯ ವಿವರ ನೀಡಿದರು.
ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ:
ದೇಶದಲ್ಲಿ ಡಿಸೇಲ್, ಪೆಟ್ರೋಲ್, ಗ್ಯಾಸ್ ಸೇರಿದಂತೆ ಪ್ರತಿಯೊಂದರ ಬೆಲೆ ಗಗನಕ್ಕೆ ಏರಿದೆ. ಜನಸಾಮಾನ್ಯರು ಬಳಸುವ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ಹಾಕಿದೆ. ಇದರಿಂದ ಜನರಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಆಗುತ್ತಿಲ್ಲ. ನರೇಂದ್ರ ಮೋದಿ ನಾವು ಜಿಎಸ್ ಟಿ ತರುತ್ತೇವೆ ಅಂದಾಗ ವಿರೋಧ ಮಾಡಿದ್ದರು. ಆದರೆ ಈಗ ಅವರೇ ಸಾಮಾನ್ಯ ವಸ್ತುಗಳಿಗೂ ಜಿಎಸ್‌ಟಿ ಹಾಕಿ. ಬಡವರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ.
ಅಂಬಾನಿ ಅದಾನಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯನವರು, ಮಂಡಕ್ಕಿಗೂ ಜಿಎಸ್‌ಟಿ ಹಾಕಿದ್ದಾರೆ. ಮಂಡಕ್ಕಿಯನ್ನು ಅದಾನಿ, ಅಂಬಾನಿ ಬೆಳೆಸುತ್ತಾರಾ ಎಂದು ಪ್ರಶ್ನಿಸಿದರು. ಡ್ರಾಪೌಟ್ ಆಗಿರುವ ಅದಾನಿ ಈಗ ಜಗತ್ತಿನ ಎರಡನೇ ಅತಿ ದೊಡ್ಡ ಶ್ರೀಮಂತ. ನರೇಂದ್ರ ಮೋದಿ ಒಂದುಕಡೆ ಕಾರ್ಪೊರೇಟ್ ಬೆಳೆಸುತ್ತಿದ್ದಾರೆ, ಇನ್ನೊಂದೆ ಜಿಎಸ್‌ಟಿ, ಬೆಲೆ ಏರಿಕೆ ಮಾಡುವ ಮೂಲಕ ಬಡವರ ರಕ್ತ ಹೀರುತ್ತಿದ್ದಾರೆ ಮೋದಿ ಪ್ರಧಾನಿ ಆಗುವ ಮೊದಲು 53 ಲಕ್ಷ 11 ಸಾವಿರ ಕೋಟಿ ಇದ್ದ ಸಾಲ, ಈಗ 152 ಲಕ್ಷ ಕೋಟಿ ಆಗಿದೆ. ಇದು ಹೀಗೆ ಆದರೆ ಭಾರತ ಸಂಪೂರ್ಣ ಸಾಲಗಾರ ದೇಶವಾಗಿ ದಿವಾಳಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದೆ: ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇನ್ನೊಂದೆಡೆ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದು ವರ್ಷವಾಯಿತು. ಆದರೆ ಯಾವುದೇ ತನಿಖೆಗೆ ಮುಂದಾಗಿಲ್ಲ. 'ನಾ ಖಾವೂಂಗಾ, ನಾ ಖಾನೆ ದೂಂಗಾ' ಎನ್ನುವ ಮೋದಿ ಭ್ರಷ್ಟಾಚಾರ ನಡೆದ ಬಗ್ಗೆ ತನಿಖೆ ಮಾಡಿಸಬಹುದಿತ್ತು. ಯಾಕೆ ತನಿಖೆ ಮಾಡಿಸುತ್ತಿಲ್ಲ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರಾ?
ಬಿಜೆಪಿ 40% ಕಮಿಷನ್ ಸರ್ಕಾರ:
ಯಾವುದೇ ಕೆಲಸ ಆಗಬೇಕೆಂದ್ರೂ ಈಗಿನ ಸರ್ಕಾರಕ್ಕೆ 40% ಕಮಿಷನ್ ಕೊಡಬೇಕು. ಈ ಮೊದಲು ಕೇಳಿರಲಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಹೀಗೆ ಆಗಿದ್ದರೆ ಸಿಬಿಐ ಗೆ ರಫರ್ ಮಾಡಿಬಿಡುತ್ತಿದ್ದೆ. ಈ ಬಿಜೆಪಿಯವರು ಸಿಬಿಐಯನ್ನ ಚೋರ್ ಬಚಾವ್ ಸಂಸ್ಥೆ, ಕಾಂಗ್ರೆಸ್ ಇನ್ವೆಷ್ಟಿಗೇಷನ್ ಇನಸ್ಟಿಟ್ಯೂಟ್ ಅಂತಿದ್ರು ಆದರೆ ಈಗ ಅವರ ಕೈಯಲ್ಲೇ ಸಿಬಿಐ ಇದೆ ಏನೂ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದೆ:
ಡಿಕೆ ರವಿ, ಮೇಸ್ತಾ ಕೇಸ್ ಗಳಲ್ಲಿ ಬಿಜೆಪಿಯವರು ಸುಳ್ಳು ಆರೋಪ ಮಾಡಿದ್ದಾರೆ. ಹೆಣದ ಮೇಲೆ ರಾಜಕೀಯ ಮಾಡಿದ್ದಾರೆ. ಕೋಮುಗಲಭೆ ಎಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಡಿಕೆ ರವಿ, ಮೇಸ್ತಾ ಪ್ರಕರಣದಲ್ಲಿ ಇವರು ಯಾವ ದಾಖಲೆಗಳನ್ನ ಕೊಟ್ಟಿದ್ದಾರೆ? ಕೇವಲ ಸುಳ್ಳು, ಹುಸಿ ದೇಶಭಕ್ತಿ ಹೆಸರಲ್ಲಿ ಜನರನ್ನು ದಾರಿ ತಪ್ಪಿಸಿ ಅಧಿಕಾರಿ ನಡೆಸುತ್ತಿದ್ದಾರೆ ಈ ಬಿಜೆಪಿಯವರು ನಮ್ಮ ಸರ್ಕಾರ ಬಂದರೆ ರೈತರ ಆದಾಯ ದುಪ್ಪಟ್ಟು ಮಾಡ್ತಿವಿ ಅಂತಿದ್ರು. ಅಧಿಕಾರಕ್ಕೆ ಬಂದು ಎಷ್ಟೊ ವರ್ಷಗಳಾದ್ವು. ರೈತರ ಆದಾಯ ಹೆಚ್ಚು ಮಾಡಿದ್ದಾರಾ? ದೇಶದಲ್ಲಿ ಯಾವ ರೈತ ಸುಖವಾಗಿದ್ದಾನೆ? ಎಲ್ಲಿ ನೋಡಿದರೂ ಬೆಲೆ ಏರಿಕೆ, ಭ್ರಷ್ಟಾಚಾರದಿಂದ ದೇಶದ ರೈತ ಹೈರಾಗಿದ್ದಾನೆ ಎಂದರು.
ಪಾದಯಾತ್ರೆ ಬಗ್ಗೆ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಯವರಿಗೆ ಭಯ, ನಡುಕ ಶುರುವಾಗಿದೆ ಅದಕ್ಕೆ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಷ್ಟೇ ಅಲ್ಲ,ರಾಹುಲ್ ಗಾಂಧಿ ದೇಶಾದ್ಯಂತ ಪಾದಯಾತ್ರೆ ಮಾಡುವ ಮೂಲಕ ಜನರಲ್ಲಿ ಒಗ್ಗಟ್ಟು ಮೂಡಿಸುತ್ತಿರುವುದರಿಂದ ಕೇಂದ್ರ ಸರ್ಕಾರಕ್ಕೂ ಭಯ ಶುರುವಾಗಿದೆ.
ಬಿಜೆಪಿಗರಿಗೆ ದ್ವೇಷ ಹುಟ್ಟು ಹಾಕುವುದೇ ಕೆಲಸ: ಸಿದ್ದರಾಮಯ್ಯ
ಮೀಸಲಾತಿ ಹೆಚ್ಚಳಕ್ಕೆ ಒತ್ತಡ ಹಾಕಿದ್ದು ನಾವು:
ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಡ ಹಾಕಿದವರು ನಾವು. ಬಿಜೆಪಿಯವರು ಅಲ್ಲ. ರಕ್ತದಲ್ಲಿ ಬರೆದುಕೊಡ್ತಿನಿ ಅಂದಿದ್ದ ಶ್ರೀರಾಮುಲು ಅಧಿವೇಶನದಲ್ಲಿ ಮೀಸಲಾತಿ ಬಗ್ಗೆ ಮಾತಾಡಿಲ್ಲ. ಶಾಸಕರು ಮಾತನಾಡಿದ್ದಾರೆ. ಸದಾಶಿವ ಆಯೋಗ ವರದಿ ಬಿಜೆಪಿ ಅವಧಿಯಲ್ಲಿ ಸಬ್ಮಿಟ್ ಆಗಿದೆ, ನಾವು ಮಾಡಲು ಆಗಲಿಲ್ಲ. ಬೋವಿ ಜನಾಂಗದ ಮೀಸಲಾತಿಗೆ ಕೊರ್ಮ ಕೊರ್ಚ ವಿರೋಧ ಇರುವುದರಿಂದ ಸದಾಶಿವ ಆಯೋಗ ವರದಿ ಜಾರಿ ಆಗುತ್ತಿಲ್ಲ. ಮುಂದೆ ನಮ್ಮ ಸರ್ಕಾರ ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಯತ್ನ ಮಾಡುತ್ತೇವೆ. ನಾನು, ಡಿ.ಕೆ.ಶಿವಕುಮಾರ ಹಾಗೂ ಹಿರಿಯ ಮುಖಂಡರ ನೇತೃತ್ವದಲ್ಲಿ ಎರಡು ತಂಡಗಳಲ್ಲಿ ರಥಯಾತ್ರೆ ಮಾಡುತ್ತೇವೆ ಬಿಜೆಪಿಯವರು ಏನ್ ಮಾಡ್ತಾರೋ ಅದರ ಬಗ್ಗೆ ನಾನು ಮಾತಾಡಲ್ಲ ಎಂದರು.
ಮುಲಾಯಂ ಸಿಂಗ್ ಯಾದವ್ ಅಗಲಿಕೆಗೆ ಸಿದ್ದರಾಮಯ್ಯ ಸಂತಾಪ
ಮುಲಾಯಂ ಸಿಂಗ್ ಯಾದವ್ ಹಿರಿಯ ರಾಜಕಾರಣಿ. ಉತ್ತರ ಪ್ರದೇಶದಲ್ಲಿ ಸಿಎಂ ಆಗಿದ್ದವರು. ಅವರ ಮಗ ಅಖಿಲೇಶ್ ಕೂಡ ಸಿಎಂ ಆಗಿದ್ದರು. ಅವರದು ರಾಜಕೀಯ ಹಿನ್ನೆಲೆಯ ದೊಡ್ಡ ಕುಟುಂಬ. ಹಿರಿಯ ಸಮಾಜವಾದಿಯಾಗಿದ್ದ ಮುಲಾಯಂ ಅವರ ಅಗಲಿಕೆಯಿಂದ ದೇಶಕ್ಕೆ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.