ಶಿರಾ(ಆ..25) ಶಿರಾ ವಿಧಾನಸಭಾ ಉಪಚುನಾವಣೆಗೆ ಕಮಲ ಪಡೆಯಲ್ಲಿ ತಯಾರಿ ಆರಂಭವಾಗಿದ್ದು, ಉಪಚುನಾವಣೆಯ ಜವಾಬ್ದಾರಿ ಡಿಸಿಎಂ ಅಶ್ವಥ್ ನಾರಾಯಣ್‌ರವರಿಗೆ ವಹಹಿಸಲಾಗಿದ್ದು, ಪೂರ್ವಭಾವಿ ತಯಾರಿ ಮಾಡಲು ಪಕ್ಷದ ನಾಯಕರಿಂದ ಡಿಸಿಎಂಗೆ ಸೂಚನೆ ನೀಡಿದ್ದಾರೆ. ಈ ಸೂಚನೆ ಬೆನ್ನಲ್ಲೇ ವರಿಷ್ಠರ ಸೂಚನೆಯಂತೆ ತುಮಕೂರು ಜಿಲ್ಲಾ ನಾಯಕರೊಂದಿಗೆ ಡಿಸಿಎಂ ಚರ್ಚೆ ನಡೆಸಿದ್ದಾರೆ.

ಚುನಾವಣೆ ಸಂಬಂಧ ತುಮಕೂರು ಬಿಜೆಪಿ ನಾಯಕರೊಂದಿಗೆ ಡಿಸಿಎಂ ಮೊದಲ ಸುತ್ತಿನ ಸಭೆ ನಡೆಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸುರೇಶ್ ಗೌಡ ಮತ್ತೀತರ ಜೊತೆಗೆ ಸಮಾಲೋಚನೆ  ನಡೆಸಿರುವ ಅಶ್ವಥ್ ನಾರಾಯಣ್ ಕ್ಷೇತ್ರದ ಚಿತ್ರಣದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಗೆಲ್ಲುವುದೊಂದೇ ಮಾನದಂಡ ಅನ್ನೋ ಸೂತ್ರಕ್ಕೆ ಬದ್ಧವಾಗಿರುವ ಬಿಜೆಪಿ ನಾಯಕರು ಕಳೆದ ಬಾರಿಯ ಚುನಾವಣಾ ಅಭ್ಯರ್ಥಿಗಳ ಜೊತೆಗೂ ಡಿಸಿಎಂ ಒಂದು ಸುತ್ತಿನ ಸಭೆ ನಡೆಸಿದ್ದಾರೆ. 

ಬೇವನಹಳ್ಳಿ ಮಂಜುನಾಥ್, ಎಸ್ ಆರ್ ಗೌಡರ ಜೊತೆಗೂ ಡಿಸಿಎಂ ಮಾತುಕತೆ ಮುಗಿಸಿದ್ದಾರೆ. ಇನ್ನು ಬಿಜೆಪಿ ನಾಯಕರು ಈ ಬಾರಿ ಒಕ್ಕಲಿಗರಿಗೆ ಈ ಬಾರಿ ಟಿಕೆಟ್ ಕೊಡಬೇಕು ಅನ್ನೋ ತಿರ್ಮಾನಕ್ಕೆ ಬಂದಿದ್ದು, ಕೊನೆ ಗಳಿಗೆಯಲ್ಲಿ ಸುರೇಶ್ ಗೌಡರನ್ನು ಕಣಕ್ಕಿಳಿಸುವ ಬಗ್ಗೆಯೂ ಪಕ್ಷದೊಳಗೆ ಗಂಭೀರ ಚರ್ಚೆ ನಡೆಯುತ್ತಿದೆ. ಆದರೆ ಜಿಲ್ಲಾಧ್ಯಕ್ಷ ಆಗಿರೋದ್ರಿಂದ ಮಾಜಿ ಶಾಸಕ ಸುರೇಶ್ ಗೌಡ ಈವರೆಗೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.

ಇನ್ನು ಇತ್ತ ದಿವಂಗತ ಶಾಸಕ ಸತ್ಯನಾರಾಯಣ ಕುಟುಂಬ ಸದಸ್ಯರ ಮೇಲೂ ಬಿಜೆಪಿ ನಾಯಕರು ಕಣ್ಣಿಟ್ಟಿದ್ದು, ಇತ್ತೀಚೆಗೆ ಸತ್ಯನಾರಾಯಣ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದ ಡಿಸಿಎಂ ಸಾಂತ್ವಾನ ಹೇಳಿದ್ದರು. ಡಿಸಿಎಂ ಅಶ್ವಥ್ ನಾರಾಯಣ ಜೊತೆಗೆ ಸಚಿವ ಮಾಧುಸ್ವಾಮಿ ಸಹ ಸತ್ಯನಾರಾಯಣ ನಿವಾಸಕ್ಕೆ ತೆರಳಿದ್ದರು.