ಬಿಜೆಪಿಯಿಂದ ಉಚ್ಛಾಟನೆಗೊಂಡ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಇಬ್ಬರಿಗೂ ಮತ್ತು ಪಕ್ಷಕ್ಕೂ ಲಾಭದಾಯಕ. ಈ ನಿರ್ಧಾರದಿಂದ ಶಾಸಕರಿಗೆ ಕಾಂಗ್ರೆಸ್ ಸೇರಲು ಮತ್ತು ಬಿಜೆಪಿಗೆ ಹೊಸ ನಾಯಕತ್ವ ಬೆಳೆಸಲು ಅನುಕೂಲ.
ಬೆಂಗಳೂರು (ಮೇ 27): ರಾಜಕೀಯದಲ್ಲಿ ಕೆಲವೊಮ್ಮೆ ತೆಗೆದುಕೊಳ್ಳುವ ತೀಕ್ಷ್ಣ ನಿರ್ಣಯಗಳು ತಕ್ಷಣದಲ್ಲಿ ನಷ್ಟವಂತೆಯಾಗಿ ಕಂಡರೂ, ದೀರ್ಘಕಾಲಿಕವಾಗಿ ಲಾಭದಾಯಕವಾಗಬಹುದು. ಇದೇ ಹಾದಿಯಲ್ಲಿ ಬಿಜೆಪಿ ತನ್ನ ಇಬ್ಬರು ಶಾಸಕರನ್ನು ಎಸ್.ಟಿ. ಸೋಮಶೇಖರ್ (ಯಶವಂತಪುರ) ಮತ್ತು ಶಿವರಾಮ್ ಹೆಬ್ಬಾರ್ (ಯಲ್ಲಾಪುರ) ಪಕ್ಷ ವಿರೋಧಿ ಚಟುವಟಿಕೆಗಳನ್ನು ಉಲ್ಲೇಖಿಸಿ, ಉಚ್ಛಾಟನೆ ಮಾಡಿದೆ. ಆದರೆ ಈ ನಿರ್ಧಾರದಿಂದಾಗಿ ಲಾಭವು ಕೇವಲ ಪಕ್ಷಕ್ಕೂ ಅಲ್ಲ, ಶಾಸಕರಿಗೂ ಆಗಿರುವುದು ಸ್ಪಷ್ಟವಾಗಿದೆ.
ಉಚ್ಛಾಟನೆ ಪಶ್ಚಾತ್ತಾಪವಿಲ್ಲ; ಅವಕಾಶವೇ ಹೆಚ್ಚಾಯ್ತು:
ಬಿಜೆಪಿಯಿಂದ ಹೊರ ಹೋಗಿದ್ದರೂ ಇಬ್ಬರು ಶಾಸಕರು ತಮ್ಮ ವಿಧಾನಸಭಾ ಸ್ಥಾನವನ್ನು ಉಳಿಸಿಕೊಂಡು ಸರ್ಕಾರ ನಡೆಸುತ್ತಿರುವ ಆಡಳಿತ ಪಕ್ಷದೊಂದಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ. ಕಾಂಗ್ರೆಸ್ ಸರ್ಕಾರದ ನಿಲುವಿಗೆ ಬೆಂಬಲ ಸೂಚಿಸುತ್ತಲೇ ರಾಜಕೀಯವಾಗಿ 'ಅಂತರ' ಕಾಪಾಡಿಕೊಂಡಿದ್ದ ಇವರಿಗೆ ಈಗ ಸರ್ಕಾರದ ಪರವಾಗಿ ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ಅವಕಾಶ ದೊರೆತಿದೆ.
ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು ಅನುಕೂಲ:
ಇದೀಗ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆಗೊಂಡ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯ ಅಡ್ಡಿಯಿಲ್ಲದೆ, ಅಧಿಕೃತವಾಗಿ ಕಾಂಗ್ರೆಸ್ ನೊಂದಿಗೆ ರಾಜಕೀಯವಾಗಿ ಕೈಜೋಡಿಸಲು ಅವಕಾಶ ಸೃಷ್ಟಿಯಾಗಿದೆ. ಉಚ್ಛಾಟನೆಯ ನಂತರ ಈ ಇಬ್ಬರು ಶಾಸಕರು ವಿಧಾನಸಭೆಯೊಳಗೂ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಲು ಮುಕ್ತವಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಧೋರಣೆಗೆ ಸಹಕಾರ ನೀಡುವ ಮೂಲಕ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಒತ್ತು ನೀಡಲು ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಜೆಪಿ ಮುಜುಗರಕ್ಕೂ ಕೊನೆ:
ಪಕ್ಷದಲ್ಲಿದ್ದುಕೊಂಡೇ ಅಸಹಕಾರ ತೋರಿಸುತ್ತಿದ್ದ ಶಾಸಕರು ಪಕ್ಷದಲ್ಲಿ ಉಳಿದಿದ್ದರೆ ನಿರಂತರವಾಗಿ ಉಂಟಾಗುತ್ತಿದ್ದ ಮುಜುಗರ ಹಾಗೂ ಕಾರ್ಯಕರ್ತರಲ್ಲಿ ಉಂಟಾಗಿದ್ದ ಗೊಂದಲ ಇದೀಗ ನಿವಾರಣೆಯಾಗಿದೆ. ಈ ನಿರ್ಧಾರದಿಂದಾಗಿ ಬಿಜೆಪಿ ಇಬ್ಬರ ಕ್ಷೇತ್ರಗಳಲ್ಲಿ ಹೊಸ ನಾಯಕತ್ವ ಬೆಳೆಸುವುದಕ್ಕೆ ವಾತಾವರಣ ಕ್ಲಿಯರ್ ಆಗಲಿದೆ. ಇದೇ ವೇಳೆ ವಿಧಾನಸಭೆಯೊಳಗೆ ಬಿಜೆಪಿ ವಿಪ್ ಅನುಸರಿಸದವರನ್ನು ಪಕ್ಕದಿಂದ ಹೊರಗಿಡುವ ಮೂಲಕ ಸಂಘಟಿತ ರಾಜಕೀಯ ಚಟುವಟಿಕೆಗಳಿಗೆ ವೇದಿಕೆ ಸಿದ್ಧವಾಗಿದೆ.
ಸೋಮಶೇಖರ್ ಬಿಜೆಪಿ ರಾಜಕೀಯ ಅಂತ್ಯ, ಕೈ ರಾಜಕಾರಣ ಆರಂಭ:
ರಾಜಕೀಯವಾಗಿ ಮುಜುಗರದ ಸ್ಥಿತಿಯಲ್ಲಿ ಓಲಾಡುತ್ತಿದ್ದ ಇಬ್ಬರೂ ಶಾಸಕರು ಈಗ ಸ್ವತಂತ್ರವಾಗಿ ಅಥವಾ ಅಲ್ಪಕಾಲದಲ್ಲೇ ಕಾಂಗ್ರೆಸ್ ಸೇರುವ ಮೂಲಕ ತಮ್ಮ ಭವಿಷ್ಯವನ್ನು ದೃಢಗೊಳಿಸುವ ಸಾಧ್ಯತೆ ಹೆಚ್ಚಿದೆ. ಬಿಜೆಪಿ ಕೂಡಾ ಈ ಬದಲಾವಣೆಯಿಂದ ತಕ್ಷಣದ ಮುಜುಗರದಿಂದ ವಿಮುಕ್ತಿಯಾಗುತ್ತಿದೆ. ಜೊತೆಗೆ, ಬಿಜೆಪಿ ಇವರನ್ನು ನಂಬಿಕೊಂಡು ಕ್ಷೇತ್ರಗಳಲ್ಲಿ ನಾಯಕತ್ವವನ್ನು ಕಳೆದುಕೊಳ್ಳುವುದಕ್ಕಿಂತ ದೀರ್ಘಕಾಲಿಕವಾಗಿ ಹೊಸ ನಾಯಕರನ್ನು ಹುಡುಕಿ ಬೆಳೆಸುವತ್ತ ಬಿಜೆಪಿ ಗಮನ ಹರಿಸಲಿದೆ.
ಒಟ್ಟಾರೆಯಾಗಿ, ಬಿಜೆಪಿ ತೆಗೆದುಕೊಂಡ ಈ ಉಚ್ಛಾಟನಾ ನಿರ್ಧಾರ ರಾಜಕೀಯದ ಎರಡೂ ಕಡೆಗೂ ಸ್ಪಷ್ಟತೆ ಸಿಗಲಿದೆ. ಸ್ವಾತಂತ್ರ್ಯ ಮತ್ತು ಮುಕ್ತತೆಯ ವಾತಾವರಣವನ್ನು ಒದಗಿಸಿದೆ. ಶಾಸಕರಾದ ಸೋಮಶೇಖರ್ ಮತ್ತು ಹೆಬ್ಬಾರ್ ಅವರ ರಾಜಕೀಯ ಭವಿಷ್ಯ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ಕಾಲವೇ ಉತ್ತರಿಸಬೇಕು. ಆದರೆ ಇತ್ತೀಚಿನ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವ ಸೂಚನೆ ನೀಡುತ್ತಿದೆ.
ಬಿಜೆಪಿಗೆ ಅನಿವಾರ್ಯವಾಗಿದ್ದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಉಚ್ಛಾಟನೆ.
- ಇಬ್ಬರೂ ಶಾಸಕರು ಕಳೆದ ಎರಡು ವರ್ಷಗಳಿಂದ ಪಾರ್ಟಿ ವಿರುದ್ಧ ನಿಂತಿದ್ದರು.
- ಬಿಜೆಪಿ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಇಬ್ಬರೂ ಶಾಸಕರು ಬರುತ್ತಿರಲಿಲ್ಲ.
- ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಪರ ನಿಂತಿದ್ದರು.
- ಶಿವರಾಮ್ ಹೆಬ್ಬಾರ್ ಹೇಳಿಕೆ ನೀಡದೆ ಇದ್ದರೂ ಸೈಲೆಂಟ್ ಆಗಿ ಕಾಂಗ್ರೆಸ್ ಜೊತೆ ಇದ್ದರು.
- ಕಳೆದ ಎರಡು ವರ್ಷಗಳಿಂದ ಪಾರ್ಟಿ ವಿರುದ್ಧ ಇದ್ದಾಗಲೂ ರಾಜ್ಯ ಬಿಜೆಪಿ ಕ್ರಮಕ್ಕೆ ಶಿಪಾರಸು ಮಾಡಿರಲಿಲ್ಲ.
- ವಿಜಯೇಂದ್ರ ರಾಜ್ಯಾಧ್ಯಕ್ಷ ಆದಮೇಲೆ ಎಸ್.ಟಿ. ಸೋಮಶೇಖರ್ ಅವರು ಕೆಲವು ದಿನ ಶಾಸಕ ಯತ್ನಾಳ್ ವಿರುದ್ಧ ವಾಗ್ದಾಳಿ ಮಾಡುತ್ತಾ ವಿಜಯೇಂದ್ರ ಪರವಾಗಿ ಮಾತನಾಡುತ್ತಿದ್ದರು.
- ಅದೇ ಸಮಯದಲ್ಲಿ ಯತ್ನಾಳ್ ಉಚ್ಛಾಟನೆ ಆಯ್ತು.
- ಆಗ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆ ಆಯಿತು.
- ಯತ್ನಾಳ್ ಅವರಿಗೆ ಒಂದು ನ್ಯಾಯ ಈ ಇಬ್ಬರಿಗೆ ಒಂದು ನ್ಯಾಯವೇ ಎಂಬ ಪ್ರಶ್ನೆ.
- ಸಾರ್ವಜನಿಕವಾಗಿ ಸೋಮಶೇಖರ್ ಮತ್ತು ಹೆಬ್ಬಾರ್ ಅವರಿಗೆ ಯಾಕೆ ಕ್ರಮ ಇಲ್ಲ ಎಂದು ಬಿಜೆಪಿ ಕಾರ್ಯಕರ್ತರೇ ಪ್ರಶ್ನೆ ಮಾಡಲು ಶುರು ಮಾಡಿದರು.
- ಸೋಶಿಯಲ್ ಮೀಡಿಯಾದಲ್ಲಿ ವಿಜಯೇಂದ್ರರಿಗೆ ಸಹ ಪ್ರಶ್ನೆ ಎದುರಾಯ್ತು.
- ಯಾಕೆ ನಿಮ್ಮಪರ ಮಾತಾಡ್ತಾರೆ ಸೋಮಶೇಖರ್ ಎನ್ನುವ ಕಾರಣಕ್ಕೆ ಉಚ್ಛಾಟನೆ ಮಾಡಲಿಲ್ಲವಾ ಎಂಬ ಪ್ರಶ್ನೆ ಮಾಡಲಾಗಿದೆ.
- ಆಗ ಯತ್ನಾಳ್ ಉಚ್ಛಾಟನೆಗೆ ಸಮರ್ಥನೆ ಮಾಡಿಕೊಳ್ಳಬೇಕಾದ ಅಗತ್ಯತೆಗಾದರೂ ಈ ಇಬ್ಬರ ಮೇಲೆ ಕ್ರಮಕ್ಕೆ ಶಿಪಾರಸ್ಸು ಮಾಡೋದು ರಾಜ್ಯ ಬಿಜೆಪಿಗೆ ಅನಿವಾರ್ಯ ಆಯಿತು.
- ಸೋಮಶೇಖರ್ ಮತ್ತು ಹೆಬ್ಬಾರ್ ಇಬ್ಬರನ್ನೂ ಉಚ್ಛಾಟನೆ ಮಾಡಲು ರಾಜ್ಯ ಕೋರ್ ಕಮಿಟಿ ಶಿಸ್ತು ಸಮಿತಿ ನೋಟೀಸ್ ನೀಡಿತ್ತು.
- ಇಬ್ಬರು ಶಾಸಕರು ನೀಡಿದ ಉತ್ತರವನ್ನು ಶಿಸ್ತು ಸಮಿತಿ ಮಾನ್ಯ ಮಾಡಲಿಲ್ಲ.
- ಆಗ ಅನಿವಾರ್ಯವಾಗಿ ಇಬ್ಬರ ಮೇಲೆ ಕ್ರಮ ರಾಜ್ಯ ಮತ್ತು ಕೇಂದ್ರ ಬಿಜೆಪಿಗೆ ಅನಿವಾರ್ಯ ಆಯಿತು.
- ಇದೀಗ ಬಿಜೆಪಿ ಹೈಕಮಾಂಡ್ ಇಬ್ಬರ ಮೇಲೆ ಕ್ರಮ ತೆಗೆದುಕೊಂಡಿದೆ
- ಈ ಮಧ್ಯೆ ಸೋಮಶೇಖರ್ ಅವರಿಗೆ ನೀವು ಸುಮ್ನೆ ಇರಿ, ವಿಜಯೇಂದ್ರ ಎಲ್ಲಾ ಸರಿ ಮಾಡುತ್ತಾರೆ ಎಂದು ಯಡಿಯೂರಪ್ಪ ಅವರೇ ಮನವಿ ಮಾಡಿದ್ದರು.
- ಆದರೂ ಸೋಮಶೇಖರ್ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ..
