BYV ರಾಜ್ಯಾಧ್ಯಕ್ಷರಾಗಿದಕ್ಕೆ ಖುಷಿಯೂ ಇಲ್ಲ, ಬೇಸರವೂ ಇಲ್ಲ. ಸಮಚಿತ್ತದಲ್ಲಿರುವೆ: ಸಿ.ಟಿ.ರವಿ
ಲೋಕಸಭಾ ಚುನಾವಣೆ ಸಮೀಪಿಸಿದ ಈ ಹೊತ್ತಿನಲ್ಲಿ ಬಹಿರಂಗವಾಗಿ ಹೇಳಿಕೆ ನೀಡದೆ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಾಗಿ ಕೇಳಿಬಂದಿದ್ದ ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ಸಿ.ಟಿ.ರವಿ ಅವರೂ ಬೇಸರಗೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ''ಮುಖಾಮುಖಿ''ಯಾದಾಗ...

ವಿಜಯ್ ಮಲಗಿಹಾಳ
ಬೆಂಗಳೂರು (ನ.16): ರಾಜ್ಯ ಬಿಜೆಪಿಯಲ್ಲಿ ಈಗ ಸಂಭ್ರಮ ಮತ್ತು ಆತಂಕದ ವಾತಾವರಣ. ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ನೇಮಿಸಿದ ಬಗ್ಗೆ ಆ ಹುದ್ದೆಯ ಆಕಾಂಕ್ಷಿಗಳೂ ಸೇರಿದಂತೆ ಹಲವು ನಾಯಕರು ಬಹಿರಂಗವಾಗಿ ಅಲ್ಲದಿದ್ದರೂ ಆಂತರಿಕವಾಗಿ ಬೇಸರಗೊಂಡಿರುವುದು ಗುಟ್ಟಿನ ವಿಷಯವೇನಲ್ಲ. ಆದರೆ, ಲೋಕಸಭಾ ಚುನಾವಣೆ ಸಮೀಪಿಸಿದ ಈ ಹೊತ್ತಿನಲ್ಲಿ ಬಹಿರಂಗವಾಗಿ ಹೇಳಿಕೆ ನೀಡದೆ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಾಗಿ ಕೇಳಿಬಂದಿದ್ದ ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ಸಿ.ಟಿ.ರವಿ ಅವರೂ ಬೇಸರಗೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ''ಮುಖಾಮುಖಿ''ಯಾದಾಗ...
* ಸಿ.ಟಿ.ರವಿ ಅವರು ಈಗ ಖುಷಿಯಾಗಿದ್ದಾರಾ ಅಥವಾ ಬೇಸರದಲ್ಲಿದ್ದಾರಾ?
ಖುಷಿ ಅಂತನೂ ಅಲ್ಲ. ಬೇಸರ ಅಂತನೂ ಅಲ್ಲ. ಸಮಚಿತ್ತದಲ್ಲಿ ಇದ್ದೇನೆ ಎಂದು ಹೇಳಬಹುದು. ಬಂದಿದ್ದನ್ನು ಸ್ವೀಕರಿಸುವ ಅಭ್ಯಾಸ ನನಗಿದೆ.
* ರಾಜ್ಯಾಧ್ಯಕ್ಷ ಹುದ್ದೆ ಇನ್ನೇನು ಹತ್ತಿರ ಬಂದಂತಾಗಿ ಕೈತಪ್ಪಿ ಹೋಯಿತೆ?
ಈ ಹುದ್ದೆ ನನಗೇ ಸಿಗಬೇಕಿತ್ತು ಎನ್ನುವ ನಿರೀಕ್ಷೆಯಲ್ಲಿ ನಾನೇನೂ ಇರಲಿಲ್ಲ. ಹಾಗಾಗಿಯೇ ನಾನು ಅದಕ್ಕಾಗಿ ಯಾವುದೇ ರೀತಿಯ ಪ್ರಯತ್ನ ಮಾಡಿಲ್ಲ. ರಾಜಕೀಯದಲ್ಲಿದ್ದವರು ಪ್ರಯತ್ನ ಮಾಡುವುದಿಲ್ಲ ಎಂದರೆ ಯಾರೂ ನಂಬುವುದಿಲ್ಲ. ಆದರೆ, ಇದು ಸತ್ಯ. ರಾಜ್ಯಾಧ್ಯಕ್ಷ ಹುದ್ದೆ ಎನ್ನುವುದು ಅಧಿಕಾರವಲ್ಲ, ಒಂದು ಜವಾಬ್ದಾರಿ ಎಂಬ ಮಾತನ್ನು ಮೊದಲೇ ಹೇಳಿದ್ದೆ. ಅದನ್ನು ಪಕ್ಷದ ದೊಡ್ಡವರು ಕುಳಿತು ತಿರ್ಮಾನಿಸುವಂಥದ್ದು.
ರಾಜಕೀಯ ಬೇಡ ಎನ್ನಿಸಿದರೆ ರಾಜಕಾರಣ ಬಿಟ್ಟು ಕುಳಿತುಕೊಳ್ಳುತ್ತೇನೆ: ಸಿ.ಟಿ.ರವಿ
* ಈ ಹುದ್ದೆಯ ರೇಸ್‌ನಲ್ಲಿ ನಿಮ್ಮ ಹೆಸರು ಪ್ರಮುಖವಾಗಿ ಕೇಳಿಬಂದಿತ್ತಲ್ಲವೇ?
ಹಿಂದೆಯೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ, ಮುಖ್ಯಮಂತ್ರಿ ಹುದ್ದೆ ಬದಲಾವಣೆ ವೇಳೆಯೂ ನನ್ನ ಹೆಸರು ಕೇಳಿಬಂದಿತ್ತು. ರಾಜ್ಯಾಧ್ಯಕ್ಷ ಹುದ್ದೆಗೆ ನನ್ನ ಹೆಸರು ಕೇಳಿಬಂದಿದ್ದು ಇದೇ ಮೊದಲೇನಲ್ಲ. ಮೂರು ಬಾರಿ ಪ್ರಸ್ತಾಪವಾಗಿತ್ತು. ಆ ಸ್ಥಾನವನ್ನು ವಹಿಸಿಕೊಳ್ಳುವ ಯೋಗ್ಯತೆ ಇದೆ ಎಂಬ ರೀತಿಯಲ್ಲಿ ನನ್ನ ಹೆಸರು ಪ್ರಸ್ತಾಪವಾಗಿದ್ದಕ್ಕೆ ಸಂತೋಷಪಡುತ್ತೇನೆ.
* ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬಹುದು ಎಂಬ ನಿರೀಕ್ಷೆ ನಿಮಗಿತ್ತೆ?
ತ್ತೀಚಿಗೆ ಒಂದೂವರೆ ತಿಂಗಳಿಂದ ಅವರ ಹೆಸರೂ ಚರ್ಚೆಯಲ್ಲಿ ಕೇಳಿಬರುತ್ತಿತ್ತು. ಇನ್ನುಳಿದ ಸಂಗತಿಯನ್ನು ನಾನು ಈಗ ಚರ್ಚೆ ಮಾಡಿದರೆ ಸರಿ ಹೋಗುವುದಿಲ್ಲ.
* ವಿಜಯೇಂದ್ರ ಅವರ ನೇಮಕಕ್ಕೆ ನಿಮ್ಮ ಸಂಪೂರ್ಣ ಸಹಮತವಿದೆ ಎಂದುಕೊಳ್ಳಬಹುದೇ? ಮಧ್ಯಪ್ರದೇಶದಿಂದ ವೀಡಿಯೋ ಸಂದೇಶದ ಮೂಲಕ ವಿಜಯೇಂದ್ರ ಅವರ ನೇಮಕಕ್ಕೆ ಶುಭ ಕೋರಿದ್ದೀರಿ?
ಆರಂಭದಲ್ಲೂ ನಾನು ಅವರ ನೇಮಕ ಸ್ವಾಗತ ಮಾಡಿದ್ದೇನೆ. ಆದರೆ, ಕೆಲವು ಮಾಧ್ಯಮಗಳು ತಪ್ಪಾಭಿಪ್ರಾಯ ಬರುವಂತೆ ವಿಶ್ಲೇಷಣೆ ಮಾಡಿವೆ. ನಮ್ಮ ಹಿಂದಿನ ಟ್ರ್ಯಾಕ್ ರೆಕಾರ್ಡ್, ಹಿಂದೆ ಯಾವ್ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಂಡಿದ್ದೇವೆ ಎಂಬುದು ನಮ್ಮ ಪಕ್ಷ ನಿಷ್ಠೆಗಿರುವ ಅಳತೆಗೋಲು. ಆಂಜನೇಯನಿಗೆ ರಾಮನ ಮೇಲೆ ಇದ್ದಂಥ ನಿಷ್ಠೆ ಮತ್ತು ಭಕ್ತಿ ನಮಗೆ ಪಕ್ಷದ ಮೇಲಿದೆ. ಈಗ ಏನು ಅಂತ ನಾವು ಎದೆ ಬಗೆದು ತೋರಿಸಲು ಆಂಜನೇಯ ಅಲ್ಲ.
* ಪಕ್ಷದ ಮೇಲೆ ನಿಮಗಿರುವ ನಿಷ್ಠೆ ಮತ್ತು ಭಕ್ತಿಗೆ ಈಗ ಹೈಕಮಾಂಡ್ ನೀಡಿದ ಬೆಲೆ ಇದೇನಾ?
ತಾಳಿದವನು ಬಾಳಿಯಾನು ಎಂಬ ಹಳೆಯ ಗಾದೆ ಮಾತಿದೆ. ನಾನು ಈಗ ಅದನ್ನು ಪುನರುಚ್ಚರಿಸುತ್ತೇನೆ ಅಷ್ಟೇ.
* ಅಂದರೆ, ಈ ಬಾರಿ ರಾಜ್ಯಾಧ್ಯಕ್ಷ ಹುದ್ದೆಯ ಜವಾಬ್ದಾರಿ ಹೊರಬೇಕು ಎಂಬ ಆಕಾಂಕ್ಷೆ ನಿಮ್ಮಲ್ಲಿ ಇರಲಿಲ್ಲವೇ?
ಪ್ರತಿಯೊಬ್ಬ ಮನುಷ್ಯನಿಗೂ ವೈಯಕ್ತಿಕವಾಗಿ ಒಂದೊಂದು ಮೆಟ್ಟಿಲು ಏರಬೇಕು ಎಂಬ ಆಕಾಂಕ್ಷೆ ಇರುವುದು ಸಹಜ. ಆದರೆ, ರಾಜಕಾರಣಕ್ಕೆ ಕಾಲಿಟ್ಟಿದ್ದು ನಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳಲು ಅಲ್ಲ. ಕೆಲವು ತಾತ್ವಿಕ ವಿಚಾರಗಳನ್ನು ಒಪ್ಪಿಕೊಂಡು, ಕೆಲವು ರಾಷ್ಟ್ರಹಿತದ ಮತ್ತು ಸಾಂಸ್ಕೃತಿಕ ಪುನರುತ್ಥಾನದ ನಿಲುವುಗಳ ಕಾರಣಕ್ಕೆ ನಾವು ಬಿಜೆಪಿಗೆ ಬಂದಿದ್ದೇವೆ.
* ನಿಮ್ಮ ಪ್ರಕಾರ ವಿಜಯೇಂದ್ರ ಅವರು ಈಗ ರಾಜ್ಯಾಧ್ಯಕ್ಷ ಹುದ್ದೆಗಾಗಿ ಎಷ್ಟು ಮೆಟ್ಟಿಲು ಏರಿ ಬಂದಿದ್ದಾರೆ?
ನಾನು ಈ ಸಂದರ್ಭದಲ್ಲಿ ನಾನು ಅದ್ಯಾವುದನ್ನೂ ವಿಶ್ಲೇಷಣೆ ಮಾಡಲು ಬಯಸುವುದಿಲ್ಲ. ಮಾಡಿದರೆ ಅದು ಸೂಕ್ತವಾಗುವುದಿಲ್ಲ. ಇದೊಂದು ತಂಡ. ತಂಡದಲ್ಲಿ ಕ್ಯಾಪ್ಟನ್ ಗೈಡ್ ಮಾಡುತ್ತಾರೆ, ಲೀಡ್ ಮಾಡುತ್ತಾರೆ. ಇಡೀ ತಂಡದ ಎಲ್ಲ ಆಟಗಾರರೂ ಸಹಕಾರಿಯಾಗಿ ಆಟವಾಡಿದರೆ ಮಾತ್ರ ಗೆಲ್ಲಲು ಸಾಧ್ಯ. ಹಾಗಾಗಿ, ನಾವು ತಂಡವಾಗಿ ಆಲೋಚನೆ ಮಾಡುತ್ತೇವೆ. ಈಗ ಕರ್ನಾಟಕದಲ್ಲಿ ನಮ್ಮ ತಂಡದ ಕ್ಯಾಪ್ಟನ್ ವಿಜಯೇಂದ್ರ.
* ಈ ನೇಮಕದ ಬಗ್ಗೆ ಹಲವು ನಾಯಕರು ಬೇಸರಗೊಂಡು ವಿಜಯೇಂದ್ರ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರಲ್ಲವೇ?
ಆ ನಾಯಕರ ಬೇಸರವನ್ನು ದೂರ ಮಾಡುವುದಕ್ಕೆ ನಾನೂ ವ್ಯಕ್ತಿಗತವಾಗಿ ಅವರೊಂದಿಗೆ ಮಾತನಾಡುತ್ತೇನೆ. ಮುಂಬರುವ ಲೋಕಸಭಾ ಚುನಾವಣೆ ದೇಶದ ಹಿತದೃಷ್ಟಿಯಿಂದ ಬಹು ಮುಖ್ಯವಾದದ್ದು. ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿಗಾಗಿ ನಾವು ಉಳಿದೆಲ್ಲ ಸಂಗತಿಗಳನ್ನು ಮರೆಯಬೇಕಾಗಿದೆ. ಒಂದೇ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕಾಗಿದೆ.
* ದೇಶದ ಹಿತಕ್ಕಾಗಿ ನೀವೂ ಸೇರಿದಂತೆ ಪಕ್ಷದ ಹಿರಿಯ ನಾಯಕರು ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಕೆಲಸ ಮಾಡಬೇಕು ಎನ್ನುತ್ತೀರಿ?
ನಾನು ತ್ಯಾಗ ಅಂತ ಪರಿಭಾವಿಸುವುದಿಲ್ಲ. ಉಳಿದೆಲ್ಲ ಸಂಗತಿಗಳನ್ನು ಗೌಣವಾಗಿಸಿ ದೇಶದ ಹಿತಕ್ಕಾಗಿ ಕೆಲಸ ಮಾಡಬೇಕಾಗಿದೆ ಎಂಬುದನ್ನು ನಾನು ಉಳಿದವರಿಗೂ ಮನವರಿಕೆ ಮಾಡಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ.
* ಮುಂಬರುವ ಲೋಕಸಭಾ ಚುನಾವಣೆ ವಿಜಯೇಂದ್ರ ಅವರ ನಾಯಕತ್ವದ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಾಧನವೇ?
ಇದೊಂದು ಟೀಮ್ ವರ್ಕ್. ಸಾಮಾನ್ಯವಾಗಿ ಲೋಕಸಭಾ ಚುನಾವಣೆ ಬಹುತೇಕ ರಾಷ್ಟ್ರೀಯ ಅಜೆಂಡಾ, ರಾಷ್ಟ್ರೀಯ ನೇತೃತ್ವದ ಮೇಲಿನ ಪ್ರಭಾವ ಹೆಚ್ಚಾಗಿರುತ್ತದೆ. ಸ್ಥಳೀಯ ಮಟ್ಟದ ಪ್ರಭಾವ ತುಸು ಕಡಮೆ ಇರುತ್ತದೆ.
* ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಲವಾದ ಒತ್ತಡಕ್ಕೆ ಮಣಿದು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆಯಲ್ಲ?
ನಾನು ಈಗ ಆ ಎಲ್ಲ ಸಂಗತಿಗಳನ್ನು ಚರ್ಚೆ ಮಾಡಲು ಬಯಸುವುದಿಲ್ಲ. ಯಾವ ಹಿನ್ನೆಲೆಯಲ್ಲಿ ಆಯ್ಕೆ ಮಾಡಿದ್ದಾರೆ ಎಂಬುದು ಪಕ್ಷದ ವರಿಷ್ಠರಿಗೇ ಮಾತ್ರ ಗೊತ್ತು. ಈಗ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜವಾಬ್ದಾರಿಯನ್ನೂ ಸ್ವೀಕರಿಸಿದ್ದಾರೆ. ನಾವೆಲ್ಲ ಅವರಿಗೆ ಅಭಿನಂದಿಸಿದ್ದೇವೆ. ಈಗ ಆ ವಿಷಯಗಳನ್ನು ಚರ್ಚಿಸಲು ಬಯಸುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನ ದಡಕ್ಕೆ ತಲುಪಿಸಲು, ಕರ್ನಾಟಕದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಲು ನಾವೆಲ್ಲರು ಕೂಡ ನೂತನ ಅಧ್ಯಕ್ಷರ ಬೆಂಬಲಕ್ಕೆ ನಿಲ್ಲುತ್ತೇವೆ.
* ಕುಟುಂಬ ರಾಜಕಾರಣ ಬಗ್ಗೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವ ಬಿಜೆಪಿ ನಾಯಕರು ಈಗ ವಿಜಯೇಂದ್ರ ನೇಮಕವನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ?
ಕಾಂಗ್ರೆಸ್‌ನಲ್ಲಿ ಐದನೇ ತಲೆಮಾರು ನಡೆಯುತ್ತಿದೆ. ನಮ್ಮ ಪಕ್ಷಕ್ಕೆ ಕರ್ನಾಟಕದಲ್ಲಿ ಈ ಅವಕಾಶ ಕಳೆದುಕೊಂಡೆವು ಅಂತ ಸ್ವಾಭಾವಿಕವಾಗಿ ಅನ್ನಿಸಬಹುದು. ಆದರೆ, ನಮ್ಮಲ್ಲಿ ಶಾಶ್ವತ ಅಧ್ಯಕ್ಷ ಅಂತ ಇಲ್ಲ. ಮೂರು ವರ್ಷ ಅಥವಾ ವಿಸ್ತರಣೆಯಾಗಿ ಮತ್ತೊಂದು ವರ್ಷದ ಅವಧಿ ಅಷ್ಟೇ. ಇಡೀ ನಿರ್ಣಯ ಪ್ರಕ್ರಿಯೆಯೇ ಒಂದು ಕುಟುಂಬಕ್ಕೆ ಹೋದಾಗ ಅದು ಕುಟುಂಬ ರಾಜಕಾರಣವಾಗುತ್ತದೆ. ನಮ್ಮ ಪಕ್ಷದಲ್ಲಿ ಅಂಥ ಸಾಧ್ಯತೆ ಕಡಮೆ. ಪ್ರಭಾವ ಬೀರಬಹುದು ಅಷ್ಟೇ.
* ಯಡಿಯೂರಪ್ಪ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಬಳಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಅವರ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗಿದೆ ಎಂಬ ಮಾತೂ ಇದೆ?
ನೋಡಿ, ಯಡಿಯೂರಪ್ಪ ಅವರು ದಣಿವರಿಯದ ನಾಯಕ. ಅವರು ಚುನಾವಣಾ ರಾಜಕೀಯದ ನಿವೃತ್ತಿ ಘೋಷಣೆ ಸಂದರ್ಭದಲ್ಲೇ ಮುಂದೆಯೂ ಬಿಜೆಪಿ ಪರವಾಗಿ ದುಡಿಯುತ್ತೇನೆ ಎಂಬ ಮಾತು ಹೇಳಿದ್ದರು. ಅವರನ್ನು ಬಳಸಿಕೊಳ್ಳಬೇಕು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ.
* ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಯಡಿಯೂರಪ್ಪ ಅವರು ಮುನಿಸಿಕೊಂಡರೆ ಹೇಗೆ ಎಂಬ ಭಯ ಮತ್ತು ಆತಂಕ ಬಿಜೆಪಿ ವರಿಷ್ಠರಿಗಿದೆಯೇ?
ಗೌರವವಂತೂ ಇದೆ. ಭಯ ಮತ್ತು ಆತಂಕದ ಬಗ್ಗೆ ನನಗೆ ಗೊತ್ತಿಲ್ಲ. ಈಗ ನಮ್ಮ ಮೇಲಿರುವುದು ಭಯಪಡುವ ಅಥವಾ ಭಯ ಹುಟ್ಟಿಸುವಂಥ ನಾಯಕತ್ವ ಅಲ್ಲ.
* ವಿಜಯೇಂದ್ರ ಅವರು ತಮ್ಮ ನಾಯಕತ್ವವನ್ನು ಸಾಬೀತುಪಡಿಸಿದ್ದರಿಂದಲೇ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗಿದೆ ಎಂಬ ಮಾತನ್ನು ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಹಾಗಾದರೆ, ನಿಮ್ಮನ್ನೂ ಸೇರಿದಂತೆ ಹಲವು ನಾಯಕರಿಗೆ ನಾಯಕತ್ವ ಸಾಬೀತುಪಡಿಸಲು ಸಾಧ್ಯವಾಗಿಲ್ಲವೇ?
ರಾಷ್ಟ್ರೀಯ ಅಧ್ಯಕ್ಷರು ಹೇಳಿದ ಮೇಲೆ ಮುಗಿಯಿತು. ಅದೇ ಅಂತಿಮ. ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ ಹೈಕೋರ್ಟ್ ಅನ್ನು ಕೇಳಿದಂತಾಗುತ್ತದೆ. ಸುಪ್ರೀಂ ತೀರ್ಪೆ ಅಂತಿಮ.
* ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸುವುದರಲ್ಲಿ ವಿಜಯೇಂದ್ರ ಅವರ ಪರೋಕ್ಷ ಪಾತ್ರವಿದೆ ಎಂಬ ವದಂತಿ ಫಲಿತಾಂಶದ ಬಳಿಕ ಹಬ್ಬಿತ್ತು?
ನನ್ನ ಕಿವಿಗೆ ಆ ರೀತಿಯ ವದಂತಿ ಬಿದ್ದಿಲ್ಲ. ಯಾರು ಹಬ್ಬಿಸಿದರೋ ಗೊತ್ತಿಲ್ಲ. ನನ್ನ ಸೋಲಿಗೆ ನಾನೇ ಕಾರಣ ಎಂದು ಫಲಿತಾಂಶದ ನಂತರ ಹೇಳಿದ್ದೇನೆ.
* ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಸಮೀಕರಣ ಮೂಲಕ ಮತಗಳನ್ನು ಕ್ರೋಢೀಕರಿಸುವ ಲೆಕ್ಕಾಚಾರ ಇದೆಯೇ?
ಒಂದೊಂದು ಪಕ್ಷಕ್ಕೆ ಒಂದೊಂದು ಸಿದ್ಧಾಂತ ಇರುತ್ತದೆ. ನಮ್ಮ ಪಕ್ಷಕ್ಕೆ ಹಿಂದುತ್ವವೇ ಸಿದ್ಧಾಂತ. ದೇಶ ಮೊದಲು ಎನ್ನುವುದೇ ಸಿದ್ಧಾಂತ.
* ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ನೀವು ಏನು ಕಿವಿಮಾತು ಹೇಳಲು ಬಯಸುತ್ತೀರಿ?
ಅನುಭವ, ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಸಾರ್ವತ್ರಿಕ ಹಿತವಾಗುವಂಥ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಪಕ್ಷವನ್ನು ಬೆಳೆಸಿ, ನೀವೂ ಬೆಳೆಯಿರಿ ಎಂಬ ಮಾತನ್ನು ಹೇಳಲು ಬಯಸುತ್ತೇನೆ. ನಮ್ಮ ಮನೆಗೆ ಬಂದಾಗಲೂ ವಿಜಯೇಂದ್ರ ಅವರಿಗೆ ಇದೇ ಮಾತನ್ನು ಹೇಳಿದ್ದೇನೆ. ಪಕ್ಷದ ಹಿತಾಸಕ್ತಿ ಮತ್ತು ವೈಯಕ್ತಿಕ ಹಿತಾಸಕ್ತಿ ಬಂದಾಗ ಪಕ್ಷದ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡಿದಲ್ಲಿ ಪಕ್ಷದ ಜತೆಗೆ ನೀವು ಬೆಳೆಯುತ್ತೀರಿ ಎಂದಿದ್ದೇನೆ. ''ನಾವು'' ಅಂತ ಹೋದಾಗ ಹೆಚ್ಚಿನ ಶಕ್ತಿ ಬರುತ್ತದೆ.
ಕಾಂಗ್ರೆಸ್‌ಗೆ ತನ್ನ ಶಾಸಕರನ್ನೇ ಸಮಾಧಾನ ಮಾಡಲಾಗುತ್ತಿಲ್ಲ: ಸಿ.ಟಿ.ರವಿ ವ್ಯಂಗ್ಯ
* ವಿಜಯೇಂದ್ರ ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡಲು ನೀವು ಸಜ್ಜಾಗಿದ್ದೀರಿ?
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಆ ಒಂದು ಗುರಿಗಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡುತ್ತೇವೆ. ಅಧ್ಯಕ್ಷ ಸ್ಥಾನದಿಂದ ಬರುವಂಥ ಯಾವುದೇ ಸೂಚನೆಯನ್ನು ಆದೇಶ ಎಂದು ಒಬ್ಬ ಕಾರ್ಯಕರ್ತನಾಗಿ ನಾನಂತೂ ಭಾವಿಸುತ್ತೇನೆ.
*ಯಾವುದೇ ಕಾರಣಕ್ಕೂ ಒಕ್ಕಲಿಗ ಸಮುದಾಯದವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಡಿ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವರಿಷ್ಠರಿಗೆ ಷರತ್ತು ವಿಧಿಸಿದ್ದರು ಎಂಬ ಮಾತು ನಿಮ್ಮ ಪಕ್ಷದಿಂದಲೇ ಕೇಳಿಬರುತ್ತಿದೆ?
ಕುಮಾರಸ್ವಾಮಿ ಅವರು ಈಗಷ್ಟೇ ಎನ್‌ಡಿಎ ಭಾಗವಾಗಿದ್ದಾರೆ. ಅವರು ಷರತ್ತು ವಿಧಿಸಿದ್ದರು ಎಂಬುದನ್ನು ನಾನು ಒಪ್ಪುವುದಿಲ್ಲ. ಅಕಸ್ಮಾತ್ ಷರತ್ತು ವಿಧಿಸಿದ್ದರೂ ಅದಕ್ಕೆ ಮಣಿದು ನಮ್ಮ ವರಿಷ್ಠರು ನಿರ್ಣಯ ತೆಗೆದುಕೊಂಡಿದ್ದಾರೆಂದು ನಾನು ಅಂದುಕೊಳ್ಳುವುದಿಲ್ಲ.