‘ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣ ಹಾಗೂ ಪಕ್ಷದ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆಯುತ್ತೇನೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರು (ಜು.02): ‘ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣ ಹಾಗೂ ಪಕ್ಷದ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆಯುತ್ತೇನೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಈ ಮೂಲಕ ತಮಗೆ ಶಿಸ್ತುಕ್ರಮದ ನೋಟಿಸ್ ನೀಡಿದ್ದರೂ ಬಗ್ಗದಿರಲು ತೀರ್ಮಾನಿಸಿದ್ದಾರೆ. ಶನಿವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಯಡಿಯೂರಪ್ಪ ಅವರ ಹೋರಾಟಗಳು, ಪಾದಯಾತ್ರೆಗಳು, ಸಾವಿರಾರು ಕೇಸ್‌ಗಳ ಪ್ರತಿಫಲವಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ ಅಗ್ರಮಾನ್ಯ ನಾಯಕ ಯಡಿಯೂರಪ್ಪ. ಇಂತಹ ನಾಯಕನನ್ನು 2 ಬಾರಿ ಷಡ್ಯಂತ್ರ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು. 1 ದಿನವೂ ಸ್ವತಂತ್ರವಾಗಿ ಅಧಿಕಾರ ಮಾಡಲು ಬಿಡಲಿಲ್ಲ. ಅಂತಹ ನಾಯಕನ ವಿರುದ್ಧ ಮಾತನಾಡಿದವರ ವಿರುದ್ಧ ಯಾವುದೇ ಶಿಸ್ತು ಕ್ರಮವಿಲ್ಲ. ನೋಟಿಸ್ ಸಹ ಇಲ್ಲ. ಅವರಿಗೇ ರಾಜಮರ್ಯಾದೆ, ಸತ್ಕಾರ ಮಾಡಿದರು. ನಾನು ಯಡಿಯೂರಪ್ಪ ಪರ ಮಾತನಾಡಿದರೆ ನೋಟಿಸ್ ಕೊಡುತ್ತಾರೆ’ ಎಂದು ಪರೋಕ್ಷವಾಗಿ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಕಿಡಿಕಾರಿದರು.
ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್‌ಗೆ ಚರ್ಚೆ ದೌರ್ಭಾಗ್ಯ: ಸಂಸದ ಬಿ.ವೈ.ರಾಘವೇಂದ್ರ ಆರೋಪ
‘ಬಿಎಸ್‌ವೈ ಕರೆ ಮಾಡಿದ್ದರು. ಹೀಗಾಗಿ ಅವರನ್ನು ಭೇಟಿಯಾಗಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇವೆ. ಪಕ್ಷ ಕಟ್ಟೋಣ. ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದಿದ್ದಾರೆ. ಅವರ ಮಾತಿಗೆ ಗೌರವ ನೀಡುವೆ. ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡಲ್ಲ. ಆದರೆ, ಪಕ್ಷದ ಹೀನಾಯ ಸೋಲಿಗೆ ಕಾರಣಗಳು ಹಾಗೂ ಪಕ್ಷದ ಸ್ಥಿತಿಗತಿ ಕುರಿತು ಮೋದಿ, ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಅಮಿತ್ ಶಾಗೆ ಪತ್ರ ಬರೆಯುತ್ತೇನೆ. ಭೇಟಿಗೆ ಅವಕಾಶ ನೀಡಿದರೆ ನಡ್ಡಾ ಭೇಟಿ ಮಾಡಿ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡುತ್ತೇನೆ’ ಎಂದರು.
ರಾಜ್ಯ ಸುತ್ತಲು ಬಿಎಸ್‌ವೈ ಬೇಕಾ?: ‘ಈ ಬಾರಿ ರಾಜ್ಯದ ಬಿಜೆಪಿ ನಾಯಕರು ಚುನಾವಣೆಯಲ್ಲಿ ಮೋದಿ, ಬಿಎಸ್‌ವೈ ಮುಖ ತೋರಿಸಿ ಮತ ಕೇಳಿದ್ದರು. ಹಾಗಾದರೆ ಪಕ್ಷಕ್ಕೆ ಇವರ (ಇತರ ನಾಯಕರ) ಕೊಡುಗೆ ಏನು? 78 ವರ್ಷ ಎಂದು ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರು. ರಾಜ್ಯ ಸುತ್ತಲು ಅದೇ ಯಡಿಯೂರಪ್ಪ ಬೇಕಾ? ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.
ಪಕ್ಷ ಕಟ್ಟಿ ಬೆಳೆಸಿದ್ದು ಬಿಎಸ್‌ವೈ: ‘ಕೆಲವರು ಯಡಿಯೂರಪ್ಪ, ರೇಣುಕಾಚಾರ್ಯನ ಹೆಗಲ ಮೇಲೆ ಬಂದೂಕು ಇರಿಸಿ ಗುಂಡು ಹೊಡೆಯುತ್ತಿದ್ದಾರೆ ಎನ್ನುತ್ತಿದ್ದಾರೆ. ಯಡಿಯೂರಪ್ಪ ಎಂದಿಗೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಮುಂದೆಯೂ ಮಾಡಲ್ಲ. ಅವರು ಯಾವತ್ತೂ ಸಹ ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಮಾತನಾಡಬೇಡಿ ಎನ್ನುತ್ತಾರೆ. ಬಿಎಸ್‌ವೈಗೆ ಸಂಘ ಪರಿವಾರದ ಹಿನ್ನೆಲೆ ಇದೆ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿಬೆಳೆಸಿದ್ದು ಬಿಎಸ್‌ವೈ. ಇವರ ಜತೆಗೆ ಅನಂತಕುಮಾರ್. ಇಂದು ಪಕ್ಷದಲ್ಲಿ ಇರುವ ಯಾರೂ ಪಕ್ಷ ಕಟ್ಟಿಬೆಳೆಸಿಲ್ಲ ಎಂದು ಹಿಂದೆ ಹೇಳಿದ್ದೆ. ಇಂದೂ ಹೇಳುತ್ತೇನೆ. ನಾನು ಬಿಜೆಪಿ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಾನು ಪಕ್ಷದಲ್ಲೇ ಇರುತ್ತೇನೆ’ ಎಂದರು
ಅಧ್ಯಕ್ಷರು ಕೇಳಲೇ ಇಲ್ಲ: ‘ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು ಎಂದು ರಾಜ್ಯಾಧ್ಯಕ್ಷರಿಗೆ ಹೇಳಿದೆ. ಆದರೆ, ಅವರು ಕೇಳಲಿಲ್ಲ. ಸರ್ಕಾರ ಮತ್ತು ಪಕ್ಷದ ತಪ್ಪು ನಿರ್ಧಾರಗಳಿಂದ ಒಳ ಮೀಸಲಾತಿಯಿಂದ 40-50 ಮಂದಿ ಸೋತರು. ಹೊಸಮುಖಗಳಿಗೆ ಅವಕಾಶ ನೀಡಿದ್ದು, ವ್ಯವಸ್ಥಿತವಾಗಿ ಹಿರಿಯ ಮುಖಂಡರನ್ನು ಕಡಗಣಿಸಿದ್ದು ಹೀನಾಯ ಸ್ಥಿತಿಗೆ ಕಾರಣ. ಯಡಿಯೂರಪ್ಪ ಅವರಿಗೆ ಅಪಮಾನ, ಅವಮಾನ ಮಾಡಿದರೆ ಸುಮ್ಮನಿರಲ್ಲ ಎಂದು ಹೇಳಿದ್ದೇನೆ’ ಎಂದು ಹೇಳಿದರು.
ನೋಟಿಸ್ ವಿಚಾರದಲ್ಲಿ ಗೊಂದಲ: ‘ನನಗೆ ನೋಟಿಸ್ ಕೊಟ್ಟಬಳಿಕವೇ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ ಎಂಬುದು ನನಗೆ ಗೊತ್ತಾಗಿದೆ. 11 ಜನಕ್ಕೆ ನೋಟಿಸ್ ನೀಡಲಾಗಿದೆ ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಆದರೆ, ರೇಣುಕಾಚಾರ್ಯನ ನೋಟಿಸ್ ಅನ್ನು ವ್ಯವಸ್ಥಿತವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೀರಿ. ಉಳಿದ 10 ಜನರ ನೋಟಿಸ್ ಎಲ್ಲಿಗೆ ಹೋಯಿತು? ನೋಟಿಸ್ ವಿಚಾರದಲ್ಲಿ ಈ ಗೊಂದಲ ಏಕೆ? ಶಿಸ್ತು ಸಮಿತಿ ಇದೇ ಎಂಬುದು ನನಗೆ ಗೊತ್ತಿಲ್ಲ. ಸಮಿತಿಯಲ್ಲಿರುವವರ ಹೆಸರು ಸಹ ಕೇಳಿಲ್ಲ’ ಎಂದರು.
‘ನಾನು ಬಿಜೆಪಿ ವಿರುದ್ಧ ಅಥವಾ ನಾಯಕರ ವಿರುದ್ಧ ಮಾತನಾಡಲಿಲ್ಲ. ಪಕ್ಷವನ್ನು ಕಟ್ಟಿಬೆಳೆಸಿದ ನಾಯಕನ ಅಪಮಾನ ಮಾಡುವುದು ಸರಿಯಲ್ಲ ಎಂದು ಹೇಳಿದ್ದೇನೆ. ಅಷ್ಟಕ್ಕೇ ನೋಟಿಸ್ ಗಿಫ್ಟ್ ನೀಡಿದ್ದಾರೆ. ನನ್ನ ಹೋರಾಟ ಮತ್ತು ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ರೇಣುಕಾಚಾರ್ಯ ಹೇಳಿದರು.
ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದುಗೊಳಿಸಿಲಿ: ಕೋಡಿಹಳ್ಳಿ ಚಂದ್ರಶೇಖರ್
ಜೆಡಿಎಸ್ ಜತೆ ಪ್ರತಾಪ್ ಹೊಂದಾಣಿಕೆ: ‘ಮೈಸೂರು ಲೋಕಸಭಾ ಸದಸ್ಯರು ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲವಾ? ಇವರ ಅಡ್ಜಸ್ಟ್‌ಮೆಂಟ್ ರಾಜಕಾರಣ ಎಲ್ಲರಿಗೂ ಗೊತ್ತಿದೆ. ಬಿಎಸ್‌ವೈ ಅವರನ್ನು ಅಪಮಾನ ಮಾಡಬೇಕು ಎಂಬ ಕಾರಣಕ್ಕೆ ಏನೇನೋ ಮಾತನಾಡುವುದು ಸರಿಯಲ್ಲ’ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.
