ಬೆಂಗಳೂರು (ಜ.23):  ಬಿಜೆಪಿಗೆ ವಲಸೆ ಹೋಗುವವರ ರಾಜಕೀಯ ಸಮಾಧಿ ನಿರ್ಮಾಣವಾಗುತ್ತದೆ ಎಂದು ನಾನು ವಿಧಾನಸಭೆಯಲ್ಲೇ ಹೇಳಿದ್ದೆ. ಅದು ಈಗ ಆ ಪಕ್ಷಕ್ಕೆ ವಲಸೆ ಹೋದವರಿಗೆ ಅರ್ಥವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಹೋಗಬ್ಯಾಡ್ರಪ್ಪ, ರಾಜಕೀಯ ಸಮಾಧಿ ಆಗ್ತೀರಾ ಎಂದಿದ್ದೆ. ಆದರೆ, ಬಹಳ ಪ್ರೀತಿಯಿಂದ ಬಿಜೆಪಿಗೆ ಹೋದರು. ಈಗ ಆ ನಾರಾಯಣಗೌಡ, ಎಂಟಿಬಿ ನಾಗರಾಜ್‌, ಗೋಪಾಲಯ್ಯ, ರೋಷನ್‌ ಬೇಗ್‌, ಮುನಿರತ್ನ ಪರಿಸ್ಥಿತಿ ನೋಡಿ. ಯೂಸ್‌ ಅಂಡ್‌ ಥ್ರೋ (ಬಳಸಿ-ಬಿಸಾಡು) ಆಗಿದ್ದಾರೆ ಎಂದು ಹೇಳಿದರು.

'ಸಿದ್ದು, ಡಿಕೆಶಿಗೆ ಈಗ ಉದ್ಯೋಗವಿಲ್ಲ, ಹೋರಾಟದ ನೆಪದಲ್ಲಿ ಕೆಲಸ ಹುಡುಕುತ್ತಿದ್ದಾರೆ' ...

ಈ ಶಾಸಕರ ಪೈಕಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ, ಈಗಲಾದರೂ ಅವರಿಗೆ ಅರ್ಥವಾಗಿದೆಯಲ್ಲ, ಬಿಡಿ. ಇದು ಬಿಜೆಪಿಯ ಆಂತರಿಕ ವಿಷಯ ಎಂದು ಶಿವಕುಮಾರ್‌ ಹೇಳಿದರು.

ರಾಜಭವನ ಚಲೋ ನನ್ನದಲ್ಲ:

ರಾಜಭವನ ಚಲೋ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪ್ರತಿಭಟನೆ ಡಿ.ಕೆ.ಶಿವಕುಮಾರ್‌ದಲ್ಲ. ಇದು ಜನರ ಹಾಗೂ ರೈತರ ಧ್ವನಿ. ಹೀಗಾಗಿ ಸಾಮಾನ್ಯ ಜನರ ಬದುಕು ಕೆಣಕುತ್ತಿರುವ ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಪ್ರತಿಭಟನೆಗೆ ಸಾವಿರಾರು ಜನ ಸೇರಿದ್ದರು. ಇದರಲ್ಲಿ ಆಶ್ಚರ್ಯಪಡುವುದು ಏನೂ ಇಲ್ಲ. ನಾನು ಈಗಾಗಲೇ ಹೇಳಿರುವ ಪ್ರಕಾರ ಇದು ಸಂಘರ್ಷದ ವರ್ಷ. ಹೀಗಾಗಿ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಕರ್ನಾಟಕ ನೆಲ-ಜಲದ ವಿಚಾರದಲ್ಲಿ ಕಾಂಗ್ರೆಸ್ ರಾಜಿಯಿಲ್ಲ, ಉದ್ಧವ್ ಠಾಕ್ರೆಗೆ ಡಿಕೆಶಿ ತಿರುಗೇಟು ...

ಶಿವಮೊಗ್ಗ ಘಟನೆ ತನಿಖೆಗೆ ಆದೇಶಿಸಿದರೆ ಸಾಲದು

ಶಿವಮೊಗ್ಗ ಸ್ಫೋಟ ಘಟನೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಸ್ಫೋಟಕಗಳನ್ನು ಹೇಗೆ, ಎಲ್ಲಿ ಸಂಗ್ರಹಿಸಬೇಕು, ಯಾವ ರೀತಿ ಸಾಗಿಸಬೇಕು, ಹೇಗೆ ಬಳಸಬೇಕು ಎಂದು ನಿರ್ದಿಷ್ಟಮಾರ್ಗದರ್ಶನ ಇದೆ. ಇಷ್ಟುದೊಡ್ಡ ಪ್ರಮಾಣದ ಸ್ಫೋಟಕ ಹೇಗೆ ಸಾಗಿಸುತ್ತಿದ್ದರು ಎಂಬುದು ಪ್ರಮುಖ ವಿಚಾರ. ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿರುವುದು ಸರಿಯಾಗಿದೆ. ಆದರೆ, ಸ್ಫೋಟಕ ನಿರ್ವಹಣೆಗೆ ಮುಂಜಾಗ್ರತೆ ವಹಿಸುವ ಜವಾಬ್ದಾರಿಯುತ ವ್ಯವಸ್ಥೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಈ ದುರ್ಘಟನೆಯಲ್ಲಿ ಅನೇಕರು ಮೃತಪಟ್ಟಿರುವುದು ಆಘಾತಕಾರಿ. ಇದಕ್ಕೆ ಯಾರು ಹೊಣೆ? ಇದರ ಜವಾಬ್ದಾರಿ ಯಾರು ಹೊತ್ತುಕೊಳ್ಳುತ್ತಾರೆ? ಕೇವಲ ತನಿಖೆಗೆ ಆದೇಶಿಸಿದರೆ ಸಾಲದು. ಸ್ವತಃ ಮುಖ್ಯಮಂತ್ರಿ ಹಾಗೂ ನೂತನ ಗಣಿ ಸಚಿವರು ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಬೇಕು ಎಂದು ಒತ್ತಾಯಿಸಿದರು.