Assembly Election: ಬಿಜೆಪಿಯ ಡೋಂಗಿ ಸರ್ಕಾರದ ಆಯಸ್ಸು 60 ದಿನ ಮಾತ್ರ: ಸಿದ್ದರಾಮಯ್ಯ ವಾಗ್ದಾಳಿ
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿ ಬೀಸುತ್ತಿದೆ. ಬಿಜೆಪಿ ಪಕ್ಷದ ಡೋಂಗಿ ಸರ್ಕಾರದ ಆಡಳಿತ ಇನ್ನು ಕೇವಲ 60 ದಿನ ಮಾತ್ರ ಇದ್ದು, ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಆಧಿಕಾರಕ್ಕೆ ಬರಲಿದೆ.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಫೆ.15): ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿ ಬೀಸುತ್ತಿದೆ. ಬಿಜೆಪಿ ಪಕ್ಷದ ಡೋಂಗಿ ಸರ್ಕಾರದ ಆಡಳಿತ ಇನ್ನು ಕೇವಲ 60 ದಿನ ಮಾತ್ರ ಇದ್ದು, ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಆಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದರು.
ನಗರದ ಪ್ರತಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರಾಜ್ಯದ ಇತಿಹಾಸದಲ್ಲಿ ಇಂತಹ ಭ್ರಷ್ಟ ಸರ್ಕಾರ ನಾನೆಂದೂ ನೋಡಿಲ್ಲ. ಇದೇ ಮೊದಲ ಬಾರಿಗೆ ಇಂತಹ ಭ್ರಷ್ಟಾಚಾರ ಸರ್ಕಾರ ನೋಡುತ್ತಿದ್ದೇನೆ. ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದು ಒಂದೂವರೆ ವರ್ಷ ಆಗಿದೆ. 40 ಪರ್ಸೆಂಟ್ ಹಣ ಕೇಳ್ತಿದ್ದಾರೆ ಅಂತ ಓಪನ್ ಆಗಿ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರು ಏನು ಕ್ರಮ ತೆಗೆದುಕೊಳ್ಳಲಿಲ್ಲ, ನೋಟಿಸ್ ಕೊಡಲಿಲ್ಲ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಕಾರಜೋಳ ಸೇರಿ ಪಿಡಬ್ಲೂಡಿ ಮಿನಿಸ್ಟರ್ ಭೇಟಿ ಆಗ್ತಾರೆ.ಏನು ಆಗಲಿಲ್ಲ. ಕ್ರಮ ತಗೋತಿನಿ ಅಂದ ಬೊಮ್ಮಾಯಿ ಇದುವರೆಗೂ ಕ್ರಮ ತೆಗೆದುಕೊಳ್ಳಲಿಲ್ಲ. ಈ ಕುರಿತು ನಾನು ಮೂರು ಬಾರಿ ಪ್ರಯತ್ನಪಟ್ಟಿದ್ದೇನೆ. ನಿನ್ನೆಯೂ ಸಹ ಚರ್ಚೆ ಮಾಡಿದ್ದಕ್ಕೆ ಗಲಾಟೆ ಮಾಡಿದರು. ಸದನದಲ್ಲಿ ದಾಖಲೆ ಕೇಳಿದರು. ಸರ್ಕಾರ 2008 ರಿಂದ ಇಲ್ಲಿಯವರೆಗೆ ತನಿಖೆ ಮಾಡಿಸಲಿ. ಎಚ್.ವಿಶ್ವನಾಥ, ಬಸನಗೌಡ ಪಾಟೀಲ ಯತ್ನಾಳ ಸೇರಿ ಹಲವರು ಅವರ ಪಕ್ಷದವರೇ ಆರೋಪ ಮಾಡಿದರು. ಯತ್ನಾಳ ಮಾಜಿ ಸಿಎಂ ಮಗನಿಂದಲೇ ಭ್ರಷ್ಟಾಚಾರ ನಡೆದಿದೆ ಅಂತ ಹೇಳಿದರು.
ಸಿದ್ದರಾಮಯ್ಯ ಅಭಿಮಾನಿಗಳ ಟೆಂಪೋಗೆ ಗುದ್ದಿದ ಲಾರಿ: ಮೂವರಿಗೆ ಗಂಭೀರ ಗಾಯ
ನೀರಾವರಿ ಯೋಜನೆ ಟೆಂಡರ್ ಅಕ್ರಮ: ಚಿತ್ರದುರ್ಗದ ಗೂಳಿಹಟ್ಟಿ ಶೇಖರ್ ಸಹ ಕರ್ನಾಟಕ ನೀರಾವರಿ ಯೋಜನೆ ಟೆಂಡರ್ ಗಳಲ್ಲಿ ಅಕ್ರಮ ನಡೆದಿದೆ ಅಂತ ಆರೋಪಿಸಿ ಪತ್ರ ಬರೆದಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ ಡೆತ್ ನೋಟನಲ್ಲಿ ಈಶ್ವರಪ್ಪ ಕಾರಣ ಅಂತ ಬರೆದಿದ್ದರು. ಯಾರೂ ಏನು ಮಾಡಲಿಲ್ಲ, ಇವರೆಲ್ಲಾ ಲಜ್ಜೆಗೆಟ್ಟವರು, ಭಂಡರು ಎಂದು ದೂರಿದರು. ಕೆಲವರು ದಯಾಮರಣಕ್ಕೆ ಅನುಮತಿ ಕೇಳಿದರು. ಇಂತಹದ್ದು ಯಾವುದೇ ಸರ್ಕಾರದಲ್ಲಿ ನಡೆದಿಲ್ಲ.
ಈಗಿನ ತರಾತುರಿ ಎಲ್ಲ ಅಕ್ರಮ ಟೆಂಡರ್ ರದ್ದು ಮಾಡಬೇಕು ಎಂದಿದ್ದೇವೆ. ನಾವು ಈ ಸಾರಿ ಅಧಿಕಾರಕ್ಕೆ ಬರೊದು ನೂರಕ್ಕೆ ನೂರರಷ್ಟು ಸತ್ಯ. ಅಧಿಕಾರಕ್ಕೆ ಬರುತ್ತಲೇ ಟೆಂಡರ್ ರದ್ದು ಮಾಡಿ, ತನಿಖೆ ಮಾಡಿಸುತ್ತೇವೆ. ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಸೇರಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಗೆ ಗುರಿ ಪಡಿಸುತ್ತೇವೆ ಎಂದರು.
ಮಾನಗೆಟ್ಟ, ಭಂಡಗೆಟ್ಟ ಸರ್ಕಾರ: ಬೆಂಗಳೂರು ಪಿಎಸ್ಐ ಗೆ ಸಂಬಂಧಿಸಿದಂತೆ ಸಚಿವ ಎಂಟಿಬಿ ನಾಗರಾಜ್ ಆಡಿಯೋ ಒಂದು ವೈರಲ್ ಆಗಿತ್ತು. ಪಾಪ, "70 ಲಕ್ಷ ಕೊಟ್ಟು ಬಂದಿದ್ದಾ, ಸಾಲಸೋಲ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಮಾತನಾಡಿದ್ದ ಎಂಟಿಬಿ ನಾಗರಾಜ್ ಆಡಿಯೊ ವೈರಲ್ ಮಾತು ಉಲ್ಲೇಖಿಸಿ ಮಾತನಾಡಿದ ಅವರು ಇಂತಹದ್ದಕ್ಕೆಲ್ಲಾ ಇನ್ನು ಯಾವ ದಾಖಲೆ ಬೇಕು ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಏನು ಮಾಡಲಿಲ್ಲ. ಇದೊಂದು ಮಾನಗೆಟ್ಟ, ಭಂಡಗೆಟ್ಟ ಸರ್ಕಾರ ಎಂದು ಜರಿದರು.
ನನ್ನ ಮೇಲೆ ಬಾದಾಮಿ ಕ್ಷೇತ್ರದ ಋಣವಿದೆ: ಮತ್ತೊಮ್ಮೆ ಬಾದಾಮಿಯಿಂದ ಸ್ಪರ್ಧೆಗೆ ಕ್ಷೇತ್ರದ ಜನರ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು ಬಾದಾಮಿ ಜನ ಒಳ್ಳೆಯವರು. ನನಗೆ ಬೆಂಗಳೂರಿನಿಂದ ತುಂಬಾ ದೂರವಾಗುತ್ತಿದೆ.ಬಾದಾಮಿ ಜನರ ಋಣ ತೀರಿಸಲು ಆಗಲ್ಲ. ಅದಕ್ಕೆ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಆದ್ರೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಆಗಲ್ಲ. ಇನ್ನು ರಾಜ್ಯ ಬಿಜೆಪಿ ಸರ್ಕಾರ ಕಿತ್ತು ಹಾಕಲಿಕ್ಕೆ ಜನ ಕಾಯ್ತಿದ್ದಾರೆ. ಇನ್ನೂ 60 ದಿನ ಮಾತ್ರ ಬಾಕಿ ಇದೆ. ನಾವು ರಾಜ್ಯದಲ್ಲಿ 130 ರಿಂದ 140 ಸ್ಥಾನ ಗೆಲ್ಲುತ್ತೇವೆ. ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮೋದಿ, ಶಾ ಆಟ ನಡೆಯಲ್ಲ: ಇತ್ತ ಪ್ರವಾಹದ ವೇಳೆ ರಾಜ್ಯಕ್ಕೆ ಬರದ ಮೋದಿ, ಶಾ ಕರ್ನಾಟಕಕ್ಕೆ ಈಗ ಪದೇ, ಪದೇ ಬರ್ತಿರೋ ಬಗ್ಗೆ ಲೇವಡಿ ಮಾಡಿದ ಅವರು ಮೋದಿ, ಶಾ, ನಡ್ಡಾ ನೂರು ಸಾರಿ ಬಂದರೂ ಕರ್ನಾಟಕಕ್ಕೆ ಏನೂ ಆಗಲ್ಲ. ಬರಗಾಲ, ಪ್ರವಾಹ, ಕೋವಿಡ್ ಬಂದಾಗ, ಜನ ಸಾಯಬೇಕಾದ್ರೆ ಬರಲಿಲ್ಲ. ಈಗ ಎಲೆಕ್ಷನ್ ಗೋಸ್ಕರ ಬರುತ್ತಿದ್ದಾರೆ. ಇವರ ಬಂಡವಾಳ ಏನೂ ಇಲ್ವಲ್ಲ ಎಂದ ಅವರು, ಇವರೆಲ್ಲ ನಂಬಿಕೊಂಡಿರೋದು ನರೇಂದ್ರ ಮೋದಿ ಅವರನ್ನು, ಆದರೆ ಕರ್ನಾಟಕದಲ್ಲಿ ಜನ ಈಗಾಗಲೇ ತೀರ್ಮಾನ ಮಾಡಿ ಅಗಿದೆ. ಈ ಸರ್ಕಾರವನ್ನು ಕಿತ್ತೆಸೆಯಬೇಕು ಅನ್ಕೊಂಡಿದಾರೆ ಎಂದರು.
ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ ಖಂಡನೀಯ: ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ ಖಂಡಿಸಿದ ಅವರು ಮೋದಿ ಬಂದಮೇಲೆ ಈ ತಂತ್ರಗಾರಿಕೆ ಉಪಯೋಗಿಸುತ್ತಿದ್ದಾರೆ. ಯಾರು ಇವರ ವಿರುದ್ಧ ಆರೋಪ ಮಾಡುತ್ತಾರೋ ಅವರ ಮೇಲೆ ದಾಳಿ ಮಾಡಿಸುತ್ತಾರೆ. ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಶೇ 99 ರಷ್ಟು ದಾಳಿಗಳು ತಮ್ಮ ವಿರುದ್ಧವಾಗಿ ಮಾತನಾಡಿದವರ ಮೇಲೆಯೇ ಮಾಡಿದ್ದಾರೆ ಎಂದರು.