ರಾಹುಲ್‌ ಗಾಂಧಿಗೆ ಎರಡು ವರ್ಷಗಳ ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಒಂದೇ ದಿನದಲ್ಲಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು. ರಾಹುಲ್‌ ಗಾಂಧಿ ಅವರನ್ನು ಸಂಸತ್ತಿನಿಂದ ಹೊರಗಿಡಬೇಕು ಎನ್ನುವ ಕುತಂತ್ರದಿಂದ ಇದನ್ನು ಮಾಡಲಾಗಿದೆ: ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ 

ಯಾದಗಿರಿ(ಮಾ.26):  ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅನರ್ಹತೆಯ ಹಿಂದೆ ಆಡಳಿತ ಪಕ್ಷದ ಕುತಂತ್ರವಿದೆ. ಪ್ರಜಾತಂತ್ರದ ವಿರುದ್ಧವಾಗಿರುವ ಕೇಂದ್ರ ಸರ್ಕಾರ ವಿಪಕ್ಷಗಳಿಗೆ ಕಿರುಕುಳ ನೀಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಸೈದಾಪುರದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಕಚೇರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಸಮಾವೇಶದಲ್ಲಿ ಶನಿವಾರ ಮಾತನಾಡಿ, ರಾಹುಲ್‌ ಗಾಂಧಿಗೆ ಎರಡು ವರ್ಷಗಳ ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಒಂದೇ ದಿನದಲ್ಲಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು. ರಾಹುಲ್‌ ಗಾಂಧಿ ಅವರನ್ನು ಸಂಸತ್ತಿನಿಂದ ಹೊರಗಿಡಬೇಕು ಎನ್ನುವ ಕುತಂತ್ರದಿಂದ ಇದನ್ನು ಮಾಡಲಾಗಿದೆ. ಈ ಕುತಂತ್ರ ವಿರುದ್ಧ ಹೋರಾಟ ಮಾಡುತ್ತೇವೆ. ಪ್ರತಿ ಬ್ಲಾಕ್‌ನಲ್ಲೂ ಕಾಂಗ್ರೆಸ್‌ ಹೋರಾಟ ಹಮ್ಮಿಕೊಳ್ಳುತ್ತದೆ. ನಾವೆಲ್ಲ ರಾಹುಲ್‌ ಗಾಂಧಿ ಜೊತೆಯಲ್ಲಿದ್ದೇವೆ. ಅವರೂ ಯಾರಿಗೂ ಹೆದರುವುದಿಲ್ಲ ಎಂದರು.

ಧಮ್, ತಾಕತ್ ಇದ್ರೆ ಜೆಡಿಎಸ್ ಯಾತ್ರೆ ನಿಲ್ಲಿಸಿ: ಸಿಎಂ ಬೊಮ್ಮಾಯಿಗೆ ಕಂದಕೂರ ಸವಾಲ್‌

ದಿ.ನೆಹರು ಅವರು ವಿರೋಧ ಪಕ್ಷ ಇರಬೇಕು ಎಂದಿದ್ದರು. ಆದರೆ, ಈಗಿನ ಆಡಳಿತ ಪಕ್ಷ ವಿರೋಧ ಪಕ್ಷದ ವಿರುದ್ಧ ಕುತಂತ್ರ ಮಾಡುತ್ತಿದೆ. ಹಲವಾರು ಕಿರುಕುಳ ನೀಡುತ್ತಿದೆ ಎಂದು ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಉದ್ಯಮಿ ಅದಾನಿಗೆ ಅನುಕೂಲವಾಗುವಂಥ ಕಾನೂನುಗಳನ್ನು ಮೋದಿ ಜಾರಿಗೆ ತಂದಿದ್ದಾರೆ. ಪ್ರಧಾನಿ ಮೋದಿ ಹಾಗೂ ಅದಾನಿ ಇಬ್ಬರು ಖಾಸಗಿ ವಿಮಾನದಲ್ಲೇ ಬಂದಿದ್ಯಾಕೆ ಎಂಬುದರ ಬಗ್ಗೆ ನಾವು ಉತ್ತರ ಕೇಳುತ್ತಿದ್ದೇವೆ. ಸಂಸತ್ತಿನಲ್ಲಿ ನಾವು ಮಾತನಾಡಬೇಕೆಂದರೆ ಸಭೆ ಮುಂದೂಡುತ್ತಾರೆ. ನಮ್ಮನ್ನು ಮಾತನಾಡದಂತೆ ಮಾಡಿ ಪ್ರಜಾತಂತ್ರ ವ್ಯವಸ್ಥೆ ಕೆಳಮಟ್ಟಕ್ಕೆ ಇಳಿಸಿದ್ದಾರೆ ಎಂದು ಟೀಕಿಸಿದರು.