ಅವಿಶ್ವಾಸ ಚರ್ಚಿಸದೆ ಮೇಲ್ಮನೆ ಕಲಾಪ ಮುಂದೂಡಿದ ಸಭಾಪತಿ| ಅಧಿವೇಶನ 15ರವರೆಗೆ ನಡೆಸುವಂತೆ ಸೂಚಿಸಲು ಕೋರಿಕೆ| ದೂರು ಹೊತ್ತು ರಾಜಭವನದ ಕದ ತಟ್ಟಿದ ಡಿಸಿಎಂ ಲಕ್ಷ್ಮಣ ಸವದಿ| ಇಂದು ಪರಿಷತ್ ಬಿಜೆಪಿ ಸದಸ್ಯರಿಂದಲೂ ದೂರು ಸಾಧ್ಯತೆ|
ಬೆಂಗಳೂರು(ಡಿ.11): ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಕೈಗೆತ್ತಿಕೊಳ್ಳದೆ ವಿಧಾನಪರಿಷತ್ ಕಾರ್ಯಕಲಾಪವನ್ನು ಏಕಾಏಕಿ ಅನಿರ್ದಿಷ್ಟಾವಧಿಗೆ ಮುಂದೂಡಿರುವ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಡಳಿತಾರೂಢ ಬಿಜೆಪಿ ಇದೀಗ ರಾಜ್ಯಪಾಲರ ಮೊರೆ ಹೋಗಿದೆ.
ಗುರುವಾರ ಸಂಜೆ ಕಲಾಪ ಮುಂದೂಡಿದ ಬೆನ್ನಲ್ಲೇ ಪರಿಷತ್ತಿನ ಸದಸ್ಯರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ಅಲ್ಲದೆ, ಅಧಿವೇಶನದ ಕಲಾಪವನ್ನು ಈ ತಿಂಗಳ 15ರವರೆಗೆ ನಡೆಸುವಂತೆ ಸಭಾಪತಿಗಳಿಗೆ ಸೂಚನೆ ನೀಡಬೇಕು ಎಂದೂ ಕೋರಿದರು. ಶುಕ್ರವಾರ ಬೆಳಗ್ಗೆ 11ಗಂಟೆಗೆ ಪರಿಷತ್ತಿನ ಬಿಜೆಪಿಯ ಎಲ್ಲ ಸದಸ್ಯರೂ ರಾಜಭವನಕ್ಕೆ ಹೋಗಿ ಮತ್ತೊಮ್ಮೆ ದೂರು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಉಪಮುಖ್ಯಮಂತ್ರಿ ಸವದಿ ಅವರು ಸಭಾಪತಿಗಳ ನಡೆಯನ್ನು ವಿವರಿಸಿ ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಅನಿರ್ದಿಷ್ಟಾವಧಿಗೆ ಮುಂದೂಡುವ ಬಗ್ಗೆ ಚರ್ಚೆ ನಡೆಸದೇ ಇರುವುದನ್ನು ರಾಜ್ಯಪಾಲರ ಗಮನಕ್ಕೆ ತಂದರು. ಈ ತಿಂಗಳ 15ರವರೆಗೆ ನಡೆಸಲು ಮುಂಚೆಯೇ ನಿರ್ಧಾರವಾಗಿತ್ತು. ಜೊತೆಗೆ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯವನ್ನೂ ಮಂಡಿಸಲಾಗಿತ್ತು. ಆದರೆ, ಅದೆಲ್ಲವನ್ನೂ ಬದಿಗಿರಿಸಿ ಯಾರೊಂದಿಗೂ ಚರ್ಚಿಸದೆ ಏಕಪಕ್ಷೀಯವಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿರುವುದು ಸರಿಯಲ್ಲ ಎಂದು ದೂರಿದರು.
ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ
ಇದಕ್ಕೆ ಪ್ರತಿಕ್ರಿಯಿಸದ ರಾಜ್ಯಪಾಲರು ಸರ್ಕಾರದ ಆಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸವದಿ ಅವರಿಗೆ ಭರವಸೆ ನೀಡಿದರು. ಬಳಿಕ ದೂರಿನ ಪ್ರತಿಯನ್ನು ರಾಜ್ಯಪಾಲರು ಅಡ್ವೋಕೇಟ್ ಜನರಲ್‌ಗೆ ಕಳುಹಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಟ್ಟ ಸಂಪ್ರದಾಯ: ಮಾಧುಸ್ವಾಮಿ
ಈ ಮಧ್ಯೆ ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ವಿಧಾನಸಭೆಯನ್ನು ಗುರುವಾರ ಮುಕ್ತಾಯ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ವಿಧಾನಪರಿಷತ್ ಮಂಗಳವಾರದವರೆಗೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಪ್ರತಿ ಸಲ ವಿಧಾನಸಭೆಯಲ್ಲಿ ಮಂಡನೆಯಾದ ವಿಧೇಯಕಗಳು ಪರಿಷತ್‌ನಲ್ಲಿ ಬಿದ್ದು ಹೋಗುತ್ತಿದ್ದವು. ಗುರುವಾರ ಅವಿಶ್ವಾಸ ನಿರ್ಣಯ ಮಂಡಿಸಲು ದಿನ ನಿಗದಿ ಮಾಡಬೇಕಿತ್ತು. ಆದರೆ, ಸಭಾಪತಿ ದಿಢೀರಾಗಿ ಕಲಾಪವನ್ನು ಮುಂದೂಡಿದ್ದಾರೆ. ಇದೊಂದು ಕೆಟ್ಟಸಂಪ್ರದಾಯ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ಹೇಳಿದರು.
ಸಭಾಪತಿಗೆ ಪತ್ರ ಬರೆದು ಮತ್ತೆ ಮಂಗಳವಾರದವರೆಗೆ ಕಲಾಪ ನಡೆಸಲು ವಿನಂತಿ ಮಾಡಲಾಗುವುದು. ನಮ್ಮ ಗಮನಕ್ಕೆ ಬಾರದೆ ಸಭಾಪತಿ ನಿರ್ಧಾರ ಕೈಗೊಂಡಿದ್ದಾರೆ. ಸದನ ಏಕಾಏಕಿ ಅನಿರ್ದಿಷ್ಟವಧಿಗೆ ಮುಂದೂಡುವ ಅಧಿಕಾರ ಇಲ್ಲ. ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ತಕ್ಷಣ ಚರ್ಚೆಗೆ ಅವಕಾಶ ನೀಡಬೇಕು. ರಾಜ್ಯಪಾಲರಿಗೂ ಮನವಿ ಮಾಡಲಾಗಿದೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ, ಗೌರವ ಕಳೆದುಬಾರದು ಎಂದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 11, 2020, 12:10 PM IST