ಕಲ್ಯಾಣ ಕರ್ನಾಟಕದ ಸೋಲಿಗೆ ಬಿಜೆಪಿ ಪರಾಮರ್ಶೆ: ರಾಧಾಮೋಹನ್ ರಾಜ್ಯಕ್ಕೆ ಹೊಸ ಉಸ್ತುವಾರಿ!
ಕಲ್ಯಾಣ ಕರ್ನಾಟಕದ ಐದು ಲೋಕಸಭಾ ಕ್ಷೇತ್ರಗಳಲ್ಲೂ ಸೋಲುಂಡಿರುವ ಬಿಜೆಪಿಯು ಶುಕ್ರವಾರ ಆ ಎಲ್ಲ ಕ್ಷೇತ್ರಗಳ ಫಲಿತಾಂಶದ ಕುರಿತು ಅವಲೋಕನ ನಡೆಸಿತು. ಮತ್ತು ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿ ಮತ್ತು ಸಹ ಉಸ್ತುವಾರಿ ನೇಮಕಗೊಂಡಿದ್ದಾರೆ.
ಬೆಂಗಳೂರು (ಜು.06): ಕಲ್ಯಾಣ ಕರ್ನಾಟಕದ ಐದು ಲೋಕಸಭಾ ಕ್ಷೇತ್ರಗಳಲ್ಲೂ ಸೋಲುಂಡಿರುವ ಬಿಜೆಪಿಯು ಶುಕ್ರವಾರ ಆ ಎಲ್ಲ ಕ್ಷೇತ್ರಗಳ ಫಲಿತಾಂಶದ ಕುರಿತು ಅವಲೋಕನ ನಡೆಸಿತು. ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಮುಖಂಡರು, ಪದಾಧಿಕಾರಿಗಳೊಂದಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನೂತನ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್‌ದಾಸ್ ಅಗರ್‌ವಾಲ್ ಅವರು ಸೋಲಿನ ಕುರಿತು ಸಮಾಲೋಚನೆ ನಡೆಸಿದರು. ಬೀದರ್ ಮತ್ತು ರಾಯಚೂರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾಯಿಸುವಂತೆ ಒತ್ತಡ ಕೇಳಿಬಂದಿತ್ತು.
ಜತೆಗೆ ಆಂತರಿಕ ಸಮೀಕ್ಷೆಯಲ್ಲೂ ಇವರ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಹಾಗೆ ಬದಲಾಯಿಸಿದ್ದಲ್ಲಿ ಆ ಎರಡೂ ಕ್ಷೇತ್ರಗಳನ್ನು ಗೆಲ್ಲಬಹುದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ. ಇನ್ನು ಕಲಬುರ್ಗಿ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಚಾರ ಕೈಗೊಳ್ಳಬೇಕಾಗಿತ್ತು. ಜತೆಗೆ ಅಭ್ಯರ್ಥಿಯೂ ಪ್ರಚಾರವನ್ನು ತುಸು ಮೊದಲೇ ಆರಂಭಿಸಬೇಕಾಗಿತ್ತು ಎಂಬ ನಿಲುವು ವ್ಯಕ್ತವಾಯಿತು. ಕೊಪ್ಪಳ ಕ್ಷೇತ್ರದಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ ಅವರು ಪಕ್ಷ ತೊರೆದಿದ್ದು ಪರಿಣಾಮ ಬೀರಿತು. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಾಗಿತ್ತು ಎಂಬ ಮಾತು ಕೇಳಿಬಂತು ಎಂದು ಮೂಲಗಳು ತಿಳಿಸಿವೆ.
ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಜನರ ವಿರೋಧ ಕಟ್ಟಿಕೊಂಡಿದ್ದರು. ಅವರು ಮತ್ತು ಅವರ ಸಹಾಯಕರು ಜನರ ಕೈಗೆ ಸಿಗುತ್ತಿರಲಿಲ್ಲ. ಮೇಲಾಗಿ ಶ್ರೀರಾಮುಲು ಅವರು ಜನರಿಂದ ದೂರವೇ ಉಳಿದಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಪ್ರವಾಸ ಕೈಗೊಂಡಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಇನ್ನುಳಿದ ಸೋತ ದಾವಣಗೆರೆ, ಚಿಕ್ಕೋಡಿ, ಚಾಮರಾಜನಗರ, ಹಾಸನ ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆ ನಡೆಯಲಿದೆ.
ಚನ್ನಪಟ್ಟಣದಲ್ಲಿ ನನ್ನ ಸ್ಫರ್ಧೆಗೆ ಎಚ್.ಡಿ.ಕುಮಾರಸ್ವಾಮಿ ಗ್ರೀನ್‌ಸಿಗ್ನಲ್: ಸಿ.ಪಿ.ಯೋಗೇಶ್ವರ್
ರಾಧಾಮೋಹನ್ ರಾಜ್ಯ ಬಿಜೆಪಿಗೆ ಉಸ್ತುವಾರಿ: ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿ ಮತ್ತು ಸಹ ಉಸ್ತುವಾರಿ ನೇಮಕಗೊಂಡಿದ್ದಾರೆ. ಇತ್ತೀಚಿನ ಲೋಕಸಭಾ ಚುನಾವಣೆಯ ಉಸ್ತುವಾರಿ ಜವಾಬ್ದಾರಿ ನಿಭಾಯಿಸಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ರಾಧಾ ಮೋಹನ್‌ದಾಸ್ ಅಗರ್ವಾಲ್ ಅವರನ್ನು ರಾಜ್ಯ ಘಟಕದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಚುನಾವಣಾ ಉಸ್ತುವಾರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದ ಅಗರ್ವಾಲ್ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಇದುವರೆಗೆ ಮತ್ತೊಬ್ಬ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ರಾಜ್ಯ ಉಸ್ತುವಾರಿಯಾಗಿದ್ದರು. ಆದರೆ, ಚುನಾವಣೆಗೂ ಮೊದಲೇ ಅವರು ಉಸ್ತುವಾರಿ ಜವಾಬ್ದಾರಿಯಿಂದ ದೂರ ಉಳಿದಿದ್ದರು. ಇನ್ನು ಪಕ್ಷದ ರಾಜ್ಯ ಸಹ ಉಸ್ತುವಾರಿಯನ್ನಾಗಿ ಆಂಧ್ರಪ್ರದೇಶದ ವಿಧಾನಪರಿಷತ್ ಸದಸ್ಯ ಪಿ.ಸುಧಾಕರ್ ರೆಡ್ಡಿ ಅವರನ್ನು ನೇಮಿಸಲಾಗಿದೆ.