ರಾಜ್ಯದ 35 ಹಾಲಿ ಶಾಸಕರಿಗೆ ಬಿಜೆಪಿ ಕೊಕ್?: ಯಾರಿಗೆಲ್ಲಾ ಮಿಸ್ ಆಯ್ತು ಟಿಕೆಟ್!
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರು ಸೇರಿ ಒಟ್ಟು 35ಕ್ಕೂ ಅಧಿಕ ಹಾಲಿ ಶಾಸಕರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡದಿರಲು ತೀರ್ಮಾನಿಸಲಾಗಿದೆ.
ಬೆಂಗಳೂರು (ಏ.11): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರು ತಾವೇ ಸ್ವತಃ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದರು. ಆದ್ದರಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರು ಸೇರಿ ಒಟ್ಟು 35ಕ್ಕೂ ಅಧಿಕ ಹಾಲಿ ಶಾಸಕರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡದಿರಲು ತೀರ್ಮಾನಿಸಲಾಗಿದೆ.
ಇನ್ನು ರಾಜ್ಯ ವಿಧಾನಸಭಾ ಚುನಾವಣೆಗೆ ಏ.13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆದರೆ, ಈವರೆಗೂ ಬಿಜೆಪಿಯಿಂದ ಒಬ್ಬರಿಗೂ ಟಿಕೆಟ್ ಘೋಷಣೆಯನ್ನು ಮಾಡಲಾಗಿಲ್ಲ. ಜೊತೆಗೆ, ಕಳೆದ ಮೂರ್ನಾಲ್ಕು ದಿನಗಳಿಂದ ದೆಹಲಿಯಲ್ಲಿ ಸಭೆಗಳ ಮೇಲೆ ಸಭೆಗಳನ್ನು ಮಾಡಿದ ಬಿಜೆಪಿ ಹೈಕಮಾಂಡ್ ಈಗ 35 ಹಾಲಿ ಸಚಿವರಿಗೆ ಟಿಕೆಟ್ ನೀಡದಿರಲು ತೀರ್ಮಾನ ಮಾಡಲಾಗಿದೆ. ಇದರಿಂದ ಎಲ್ಲ ಹೊಸ ಮುಖಗಳಿಗೆ ಮಣೆಯನ್ನು ಹಾಕಲು ಬಿಜೆಪಿ ತೀರ್ಮಾನಿಸಿದೆ.
ಹೈಕಮಾಂಡ್ ನಿರ್ಧಾರ ಒಪ್ಪಲ್ಲ: ಟಿಕೆಟ್‌ಗಾಗಿ ಜಗದೀಶ್ ಶೆಟ್ಟರ್ ಪಟ್ಟು
ಚುನಾವಣೆಗೂ ಮುನ್ನ 4 ನಾಯಕರ ನಿವೃತ್ತಿ: ಚುನಾವಣಾ ಹೊಸ್ತಿಲಲ್ಲಿ ಕಳೆದೊಂದು ವಾರದಲ್ಲಿ 3 ಹಿರಿಯ ನಾಯಕರು ನಿವೃತ್ತಿ ಘೋಷಣೆ ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಸ್.ಎ. ರವೀಂದ್ರನಾಥ್ ಹಾಗೂ ಈಗ ಕೆ.ಎಸ್. ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ನು ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ನೀಡುತ್ತಿರುವುದಾಗಿ ಮೊದಲೇ ಘೋಷಣೆ ಮಾಡಿಕೊಂಡಿದ್ದರು. ಒಟ್ಟಾರೆ ಬಿಜೆಪಿಯಲ್ಲಿ ಹಾಲಿ ಶಾಸಕರಾಗಿದ್ದ ನಾಲ್ವರು ಹಿರಿಯ ನಾಯಕರು ರಾಜಕೀಯ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಕರಾವಳಿ ಕ್ಷೇತ್ರದಲ್ಲಿ 9 ಹೊಸ ಮುಖಕ್ಕೆ ಮಣೆ : ಪಟ್ಟಿ ಬಿಡುಗಡೆಗೆ ಬಿಜೆಪಿ ಭಾರೀ ಸಿದ್ದತೆ ನಡೆಯುತ್ತಿದ್ದು, ಅದರಲ್ಲಿ ಹಲವು ಆಶ್ಚರ್ಯಗಳು ಇರಲಿವೆ. ಹೊಸ ಮುಖಗಳಿಗೆ ಟಿಕೆಟ್ ನೀಡಲು ಹೆಚ್ಚು ಆದ್ಯತೆ ಕೊಡಲಾಗುತ್ತಿದೆ. ಹೆಚ್ಚು ಕಮ್ಮಿ 35 ಹಾಲಿ ಶಾಸಕರಿಗೆ ಟಿಕೆಟ್ ಕೊಡದಿರಲು ನಿರ್ಧರಿಸಲಾಗಿದೆ. ಕರಾವಳಿಯ 3 ಜಿಲ್ಲೆಗಳಲ್ಲಿ 8 ಅಥವಾ 9 ಹೊಸ ಮುಖಗಳಿಗೆ ಟಿಕೆಟ್ ಕೊಡುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲೂ ಹೊಸ ಮುಖಗಳನ್ನು ಪರಿಚಯಿಸಲು ಬಿಜೆಪಿ ತಂತ್ರಗಾರಿಕೆ ಹೆಣೆಯುತ್ತಿದೆ. ಅಮಿತ್ ಶಾ ಜೊತೆ ಸಭೆ ಮುಗಿದ ಕೂಡಲೇ ಪಟ್ಟಿ ಬಿಡುಗಡೆ ಸಾಧ್ಯತೆಯಿದೆ.
- ರಾಜ್ಯದಲ್ಲಿ ಯಾವ ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಸಾಧ್ಯತೆ:
- ಬಿ.ಎಸ್. ಯಡಿಯೂರಪ್ಪ- ಶಿಕಾರಿಪುರ
- ಹಾಲಾಡಿ ಶ್ರೀನಿವಾಸ ಶೆಟ್ಟಿ- ಕುಂದಾಪುರ
- ಎಸ್.ಎ. ರವೀಂದ್ರನಾಥ್ - ದಾವಣಗೆರೆ ಉತ್ತರ
- ಕೆ.ಎಸ್. ಈಶ್ವರಪ್ಪ - ಶಿವಮೊಗ್ಗ
- ಜಗದೀಶ್ ಶೆಟ್ಟರ್- ಧಾರವಾಡ
- ಎಸ್.ಎ. ರಾಮದಾಸ್- ಕೃಷ್ಣರಾಜ
- ಎಸ್. ಸುರೇಶ್ ಕುಮಾರ್- ರಾಜಾಜಿನಗರ
- ಬಿ.ಸಿ. ನಾಗೇಶ್- ತಿಪಟೂರು
- ಕೆ.ಜಿ. ಬೋಪಯ್ಯ- ಮಡಿಕೇರಿ
- ಸಿದ್ದು ಸವದಿ- ತೇರದಾಳ
- ಗೋವಿಂದ ಕಾರಜೋಳ- ಮುಧೋಳ
- ಉದಯ್ ಗರುಡಾಚಾರ್ - ಚಿಕ್ಕಪೇಟೆ
- ದೊಡ್ಡನಗೌಡ ಪಾಟೀಲ್- ಹುನಗುಂದ
- ಸಿಎಂ ನಿಂಬಣ್ಣನವರ್- ಕಲಘಟಗಿ
- ಅನಿಲ್ ಬೆನಕೆ- ಬೆಳಗಾವಿ ಉತ್ತರ
- ಸುಭಾಷ್ ಗುತ್ತೇದಾರ್- ಆಳಂದ
- ರಘುಪತಿ ಭಟ್- ಉಡುಪಿ
- ಸಂಜೀವ ಮಠಂದೂರು- ಪುತ್ತೂರು
- ರವಿ ಸುಬ್ರಹ್ಮಣ್ಯ- ಬಸವನಗುಡಿ
- ಬಸವರಾಜ ದಡೇಸಗೂರ್- ಕನಕಗಿರಿ
- ಮಾಡಾಳು ವಿರುಪಾಕ್ಷಪ್ಪ- ಚನ್ನಗಿರಿ
- ನೆಹರು ಓಲೇಕಾರ್- ಹಾವೇರಿ
- ಜಿ.ಹೆಚ್.ತಿಪ್ಪಾರೆಡ್ಡಿ- ಚಿತ್ರದುರ್ಗ
- ವೀರಣ್ಣ ಚರಂತಿಮಠ- ಬಾಗಲಕೋಟೆ
ಬಿಜೆಪಿಯ ಹಲವು ಹಿರಿಯರಿಗೆ ಖುದ್ದು ಅಮಿತ್ ಶಾ ಕರೆ: ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟನೆ ಮಾಡಿ ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹೊಸಬರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಬಿಜೆಪಿಯ ಚಾಣಕ್ಯ ಅಮಿತ್ ಶಾ ಅವರೇ ರಾಜ್ಯದ ಹಲವು ಹಿರಿಯ ನಾಯಕರಿಗೆ ಖುದ್ದಾಗಿ ಕರೆ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಸೂಚನೆ ನೀಡಿದ್ದಾರೆ. ನೀವು ಯಾವುದೇ ಕಾರಣಕ್ಕೂ ಚುನಾವಣೆ ವೇಳೆಯಲ್ಲಿ ಬಂಡಾಯದ ಯೋಚನೆ ಮಾಡಬೇಡಿ. ಮುಂದೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ: ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೂ ಟಿಕೆಟ್ ಮಿಸ್
ಸಾಮಾಜಿಕ ನ್ಯಾಯ ಕೊಡಲು ತೀರ್ಮಾನ:
ಉಡುಪಿಯಲ್ಲಿ ಹೊಸ ಮುಖಗಳಿಗೆ ಆದ್ಯತೆ ವಿಚಾರವಾಗಿ ಹಾಲಾಡಿಯವರು ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸಾಮಾಜಿಕ ನ್ಯಾಯ ನೀಡುವ ಚಟುವಟಿಕೆ ಉಡುಪಿ ಜಿಲ್ಲೆಯಲ್ಲಿ ನಡೆಯಬೇಕು. ಸಾರ್ವಜನಿಕವಾಗಿ ಅಭ್ಯರ್ಥಿಗಳ ಹೆಸರು ಚರ್ಚೆಯಾಗುತ್ತಿದೆ. ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದ ಸಾಮರ್ಥ್ಯ- ಸಾಮಾಜಿಕ ನ್ಯಾಯ ಆಧಾರದಲ್ಲಿ ಟಿಕೆಟ್ ನೀಡುತ್ತಾರೆ. ಗೆಲ್ಲುವ ಎಲ್ಲಾ ತಂತ್ರಗಾರಿಕೆಯನ್ನು ಪಕ್ಷ ಮಾಡುತ್ತದೆ.
- ಸಚಿವ ವಿ. ಸುನೀಲ್ ಕುಮಾರ್