*   ಕೋರ್‌ ಕಮಿಟಿ ಸಭೆ ನಿಗದಿ: ಅರುಣ್‌ ಸಿಂಗ್‌ ಭಾಗಿ*   ಸಿಂದಗಿ, ಹಾನಗಲ್‌ ಅಭ್ಯರ್ಥಿ ಬಗ್ಗೆ ಚರ್ಚೆ*   ಭಾನುವಾರ ನಡೆಯುವ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ  

ಬೆಂಗಳೂರು(ಅ.01):  ಸಿಂದಗಿ(Sindagi) ಮತ್ತು ಹಾನಗಲ್‌(Hanagal) ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣಕ್ಕಿಳಿಯಲು ಆಡಳಿತಾರೂಢ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ಅರುಣ್‌ ಸಿಂಗ್‌(Arun Singh) ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದು, ಕೋರ್‌ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಉಪ ಚುನಾವಣೆ(Byelection) ನಡೆಯಲಿರುವ ಸಿಂದಗಿ ಹಾಗೂ ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಹುತೇಕ ಆಖೈರುಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಹಾನಗಲ್‌ ಉಪಚುನಾವಣೆ : ಕಾಂಗ್ರೆಸ್‌ ಟಿಕೆಟ್‌ ಯಾರಿಗೆ?

ಬಿಜೆಪಿ(BJP) ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ಮುಖಂಡರು ಕೋರ್‌ ಕಮಿಟಿ ಸಭೆಯಲ್ಲಿ ಎರಡು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಲಿದ್ದಾರೆ. ಸ್ಥಳೀಯ ಜಿಲ್ಲಾಧ್ಯಕ್ಷ ಮತ್ತು ಮುಖಂಡರ ಅಭಿಪ್ರಾಯಗಳನ್ನು ಈಗಾಗಲೇ ಪಡೆದುಕೊಳ್ಳಲಾಗುತ್ತಿದ್ದು, ಭಾನುವಾರ ನಡೆಯುವ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಯಾರಿಗೆ ಟಿಕೆಟ್‌ ನೀಡಬೇಕು ಎಂಬುದರ ವಿಸ್ತೃತವಾಗಿ ಚರ್ಚಿಸಿ ಬಳಿಕ ಕೆಲವರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ.

ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಿದ ಹೆಸರಿನ ಪಟ್ಟಿಯನ್ನು ಅರುಣ್‌ ಸಿಂಗ್‌ ದೆಹಲಿಗೆ ಕೊಂಡೊಯ್ಯಲಿದ್ದಾರೆ. ಭಾನುವಾರ ರಾತ್ರಿಯೇ ಅವರು ದೆಹಲಿಗೆ ಮರಳಲಿದ್ದಾರೆ. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇತರರ ಜತೆ ಸಮಾಲೋಚನೆ ನಡೆಸಿ ಕಣಕ್ಕಿಳಿಸುವ ಅಭ್ಯರ್ಥಿಯ ಹೆಸರನ್ನು ವರಿಷ್ಠರು ಅಂತಿಮ ಮಾಡಲಿದ್ದಾರೆ. ಪಕ್ಷದ ವರಿಷ್ಠರು ಸೂಚಿಸುವ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವಲ್ಲಿ ರಾಜ್ಯದ ನಾಯಕರು ಶ್ರಮಿಸಲಿದ್ದಾರೆ. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಚುನಾವಣಾ ವೀಕ್ಷಕರ ನೇಮಕ ಮಾಡುವ ಕುರಿತು ಸಮಾಲೋಚನೆ ನಡೆಸಲಾಗಿದೆ. ಭಾನುವಾರ ಅದನ್ನೂ ಅಂತಿಮ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.