ಬಿಜೆಪಿ ಮತಗಳ್ಳತನದಿಂದ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಸಹಿ ಸಂಗ್ರಹ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ. ಚುನಾವಣಾ ಆಯೋಗಕ್ಕೆ ನಡುಕ ಶುರುವಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ (ಸೆ.22): ಬಿಜೆಪಿ ಮತಗಳ್ಳತನದಿಂದ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಸಹಿ ಸಂಗ್ರಹ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು. ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಏರ್ಪಡಿಸಿದ್ದ ಮತಗಳ್ಳತನ ನಿಲ್ಲಿಸಿ, ಸಹಿ ಸಂಗ್ರಹಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಹುಲ್ ಗಾಂಧಿ ಬ್ಲ್ಯಾಕ್ ಬೋರ್ಡ್‌ನಲ್ಲಿ ಮಾಹಿತಿ ನೀಡುತ್ತಿದ್ದಂತೆ ಚುನಾವಣಾ ಆಯೋಗಕ್ಕೆ ನಡುಕ ಶುರುವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಮಾತನಾಡುತ್ತಿಲ್ಲ, ಬಿಜೆಪಿ ಮಾತನಾಡುತ್ತಿದೆ ಎಂದು ಹೇಳಿದರು.
2008ರ ಚುನಾವಣೆಯಲ್ಲಿ ಸೋತಿದ್ದೆವು. ಜನರ ಆಶೀರ್ವಾದಕ್ಕೆ ತಲೆಬಾಗಿ ನಡೆದೆವು. ಜನರ ಧ್ವನಿಗೆ ತಲೆ ಬಾಗಿದ್ದೆವು. 2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಚುನಾವಣಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರು ತಪ್ಪು ಮಾಡಿದ್ದರು. 18 ಸಾವಿರ ಮತಗಳನ್ನು ಗದಗ ಮತಕ್ಷೇತ್ರದಲ್ಲಿ ಡಿಲಿಟ್ ಮಾಡಲಾಗಿತ್ತು. ಈ ಬಗ್ಗೆ ನಾನು ಧ್ವನಿ ಎತ್ತಿದ್ದೆ. ಇಂತಹ ಮತಗಳ್ಳತನವನ್ನು ರಾಜಕೀಯ ಇತಿಹಾಸದಲ್ಲಿ ನೋಡಿರಲಿಲ್ಲ. ಚುನಾವಣಾ ಮತಪಟ್ಟಿಯನ್ನು ನೋಡಲು ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರನ್ನು ಜಾಗೃತಿ ಮಾಡಿದ್ದು ಸಂತಸದ ವಿಷಯ ಎಂದರು.
ಜಿ.ಎಸ್. ಪಾಟೀಲ ಮಾತನಾಡಿ, ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಚುನಾವಣಾ ಸುಧಾರಣಾ ಕ್ರಮದ ಬಗ್ಗೆ 2018ರಲ್ಲಿ ವಿಧಾನಸಭೆ ಸ್ಪೀಕರ್ ಕಾಗೇರಿ ಚರ್ಚೆ ನಡೆಸಿದ್ದರು. ಚುನಾವಣೆಯಲ್ಲಿನ ದೇಣಿಗೆ, ಇವಿಎಂನಲ್ಲಿನ ಹ್ಯಾಕಿಂಗ್, ಮತಪಟ್ಟಿಗಳಲ್ಲಿ ತಪ್ಪು ಮಾಹಿತಿ ಬಗ್ಗೆ ಪ್ರಸ್ತಾಪಿಸಲಾಗಿತ್ತು. 19 ಲಕ್ಷ ಇವಿಎಂ ಮಷಿನ್ ಕಳ್ಳತನವಾಗಿದೆ ಅಂತ ಚುನಾವಣಾ ಆಯೋಗದಲ್ಲಿ ದಾಖಲಾತಿ ಇದೆ. ಇದರ ಬಗ್ಗೆ ಉತ್ತರಿಸಬೇಕಿದೆ ಎಂದರು.
ಇವಿಎಂ ಮಷಿನ್ ರದ್ದುಗೊಳಿಸಿ
ಡಿ.ಆರ್. ಪಾಟೀಲ ಮಾತನಾಡಿ, ರಾಹುಲ್ ಗಾಂಧಿ ಅವರನ್ನು ಭಯಪಡಿಸುವ ಕೆಲಸವನ್ನು ಆಯೋಗ ಮಾಡುತ್ತಿದೆ. ವಿರೋಧ ಪಕ್ಷದ ನಾಯಕ ಪ್ರಶ್ನೆ ಮಾಡಿದರೆ ಅಫಿಡವಿಟ್ ಕೇಳಲಾಗುತ್ತದೆ. ಚುನಾವಣಾ ಆಯೋಗಕ್ಕೆ ಸಿದ್ದರಾಮಯ್ಯ ಸರ್ಕಾರ ಕಪಾಳಮೋಕ್ಷ ಮಾಡಿದ್ದಾರೆ. ಹೊಸ ಮತಪಟ್ಟಿ ಮಾಡಲು ನಾವು ಸಿದ್ಧತೆ ನಡೆಸಿದ್ದೇವೆ. ಸ್ಥಳೀಯ ಚುನಾವಣೆಗೆ ಇವಿಎಂ ಮಷಿನ್ ರದ್ದುಗೊಳಿಸಿ ಬ್ಯಾಲೆಟ್ ಪೇಪರ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಆನಂದ ಗಡ್ಡದೇವರಮಠ, ಅಶೋಕ ಮಂದಾಲಿ, ಮಿಥುನ ಪಾಟೀಲ, ಟಿ. ಈಶ್ವರ, ಹುಮಾನಯೂನ ಮಾಗಡಿ, ಐ.ಎಸ್. ಪಾಟೀಲ, ಅಕ್ಷಯ ಪಾಟೀಲ ಹಾಜರಿದ್ದರು.
