ನಮ್ಮ ಮುಖ್ಯಮಂತ್ರಿ ಅವರು ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಪ್ರಯತ್ನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೇಗಾದರೂ ಮಾಡಿ ಅಕ್ಕಿ ಖರೀದಿಸಿ ತಂದು ಬಡ ಜನರಿಗೆ ತಲಾ 10 ಕೆ.ಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಜೂ.21): ಬಸವರಾಜ ಬೊಮ್ಮಾಯಿ ಅವರ ಧಮ್ಮು ತಾಕತ್ತಿಗೆ ರಾಜ್ಯದ ಜನ ಚುನಾವಣೆಯಲ್ಲೇ ಉತ್ತರ ಕೊಟ್ಟಿದ್ದಾರೆ. ನಾವು ಜನರಿಗೆ ಕೊಟ್ಟಿರುವ ಮಾತಿನಂತೆ ಹೇಗಾದರೂ ಅಕ್ಕಿ ಖರೀದಿಸಿ ತಂದು ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ 5 ಕೆಜಿ ಖರೀದಿಗೆ ಆಹಾರ ನಿಗಮ ಆರಂಭದಲ್ಲಿ ಒಪ್ಪಿಗೆ ನೀಡಿತ್ತು. ಆದರೆ ಈಗ ಅಕ್ಕಿ ನೀಡದ ಮೂಲಕ ರಾಜಕೀಯ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ವಿಫಲಗೊಳಿಸಲು ಬಿಜೆಪಿ ಹೊರಟಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಿದ್ದರೆ ಕರ್ನಾಟಕಕ್ಕೆ ಕೇಂದ್ರದ ಬೆಂಬಲ ಇರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚುನಾವಣೆ ಸಮಯದಲ್ಲಿ ಹೇಳಿದ್ದರು. ಈಗ ಹಾಗೇ ಮಾಡುತ್ತಿದ್ದಾರೆ. ಆದರೆ, ಅವರು ಏನು ಮಾಡಿದರೂ ನಮ್ಮ ಯೋಜನೆ ವಿಫಲಗೊಳಿಸಲಾಗುವುದಿಲ್ಲ. ನಾವು ನುಡಿದಂತೆ ನಡೆಯುತ್ತೇವೆ ಅಂತ ತಿಳಿಸಿದ್ದಾರೆ. 

ಡಿಕೆಶಿ ಮೇಕೆದಾಟು ಹೇಳಿಕೆ: ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಎಐಎಡಿಎಂಕೆ

ನಮ್ಮ ಮುಖ್ಯಮಂತ್ರಿ ಅವರು ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಪ್ರಯತ್ನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೇಗಾದರೂ ಮಾಡಿ ಅಕ್ಕಿ ಖರೀದಿಸಿ ತಂದು ಬಡ ಜನರಿಗೆ ತಲಾ 10 ಕೆ.ಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದರು.