* ಕರ್ನಾಟಕ ವಿಧಾನಪರಿಷತ್ ಚುನಾವಣೆ* ಕೊನೆಗೂ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ* ಅಚ್ಚರಿ ಅಭ್ಯರ್ಥಿಗಳ ಆಯ್ಕೆ ಮಾಡಿದ ಬಿಜೆಪಿ ಹೈಕಮಾಂಡ್* ಕೊನೆ ಕ್ಷಣದಲ್ಲಿ ಬಿ ವೈ ವಿಜಯೇಂದ್ರಗೆ ಟಿಕೆಟ್ ಮಿಸ್

ಬೆಂಗಳೂರು, (ಮೇ.24): ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ಬಿಜೆಪಿ ಕೊನೆಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡುವುದೊಂದೇ ಬಾಕಿ ಇದೆ.

ಹಗ್ಗಾಜಗ್ಗಾಟದ ಮಧ್ಯೆ ಅಳೆದುತೂಗಿ ಬಿಜೆಪಿ ಹೈಕಮಾಂಡ್‌ ಇಂದು(ಮಂಗಳವಾರ) ನಾಮಪತ್ರ ಸಲ್ಲಿಕೆ ಕೊನೆ ದಿನದಂದು ತನ್ನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. ಬೇರೆ-ಬೆರೆ ವರ್ಗಗಳ ಆಧಾರದ ಮೇಲೆ ಅಚ್ಚರಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. 

 ರಾಜ್ಯ ಬಿಜೆಪಿ ಘಟಕದ ಕಾರ್ಯದರ್ಶಿ ಕೇಶವ ಪ್ರಸಾದ್, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಚಲುವಾದಿ ನಾರಾಯಣಸ್ವಾಮಿ ಹಾಗೂ ಮಹಿಳಾ ಕೋಟಾದಡಿಯಲ್ಲಿ ಮಂಜುಳಾಗೆ ಮಣೆ ಹಾಕಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.. ಪ್ರಮುಖವಾಗಿ ಕೊನೆ ಕ್ಷಣಲ್ಲಿ ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್‌ ಮಿಸ್ ಆಗಿದೆ.

ವಿಜಯೇಂದ್ರಗೆ ಪರಿಷತ್ ಟಿಕೆಟ್ ನೀಡದಿರಲು ಹೈಕಮಾಂಡ್ ನಿರ್ಧಾರ

ಟಿಕೆಟ್ ಆಕಾಂಕ್ಷಿಗಳಲ್ಲಿ ವಿಜಯೇಂದ್ರ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ, ಹೈಕಮಾಂಡ್ ಕೊನೆ ಕ್ಷಣದಲ್ಲಿ ವಿಜಯೇಂದ್ರ ಹೆಸರು ಕೈಬಿಟ್ಟು ಲಿಂಗಾಯತ ಕೋಟಾದಡಿ ಲಿಂಗರಾಜ ಪಾಟೀಲ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಟಿಕೆಟ್ ನಿರೀಕ್ಷೆಯಲ್ಲಿ ವಿಜಯೇಂದ್ರ ಹಾಗೂ ಅವರ ಅಭಿಮಾನಿಗಳಿಗೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ.

ವಿಜಯೇಂದ್ರ ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಹೈಕಮಾಂಡ್ ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಹುದ್ದೆಯ ಭರವಸೆ ನೀಡಿದ್ದಾರೆ, ಎಂದು ತಿಳಿದುಬಂದಿದೆ. ಅಲ್ಲದೇ ಅವರಿಗೆ ವಿಧಾನಸಭೆ ಚುನಾವಣೆ ಎದುರಿಸುವ ತಾಕತ್ತು ಇದೆ. ಈ ಹಿನ್ನೆಲೆಯಲ್ಲಿ ಪರಿಷತ್‌ಗೆ ವಿಜಯೇಂದ್ರ ಅವರನ್ನ ಗಣನೆಗೆ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

1 ಸ್ಥಾನಕ್ಕೆ ಜೆಡಿಎಸ್‌ನಲ್ಲೂ ಬಿಗ್ ಫೈಟ್
ಇನ್ನು ಒಂದು ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ. ವಿಧಾನ ಪರಿಷತ್ ಮಾಜಿ ಸದಸ್ಯ ಶರವಣ ಹಾಗೂ ಕೆ.ಸಿ. ವಿರೇಂದ್ರ ಅವರ ನಡುವೆ ಪ್ರಬಲ ಪೈಪೋಟಿ ನಡೆದಿದೆ. ಈಗಾಗಲೇ ಶರವಣ ಅವರು ಒಮದು ಬಾರಿ ಎಂಲ್‌ಸಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ವಿರೇಂದ್ರ ಅವರಿಗೆ ಜೆಡಿಎಸ್ ಟಿಕೆಟ್ ಫೈನಲ್‌ ಆಗುವ ಸಾಧ್ಯತೆಗಳು ಹೆಚ್ಚಿವೆ.

ಕಾಂಗ್ರೆಸ್‌ ಪಟ್ಟಿ ರಿಲೀಸ್
ವಿಧಾನಪರಿಷತ್ ಚುನಾವಣೆ ಕಣ ರಂಗೇರಿದೆ. ಇದರ ನಡುವೆ ಕಾಂಗ್ರೆಸ್ ಎರಡು ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಎಂ ನಾಗರಾಜು ಯಾದವ್ ಹಾಗೂ ಕೆ ಅಬ್ದುಲ್ ಜಬ್ಬಾರ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿ ಪ್ರಕಟಿಸಿದೆ.

ಭಾರಿ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಗೊಂದಲಗಳಿಗೂ ಕಾರಣವಾಗಿತ್ತು. ಸಿದ್ದರಾಮಯ್ಯ ಬಣ ಹಾಗೂ ಡಿಕೆ ಶಿವಕುಮಾರ್ ಬಣದ ನಡುವೆ ಅಭ್ಯರ್ಥಿಗಳ ಆಯ್ಕೆಗೆ ಜಿದ್ದಾಜಿದ್ದಿ ನಡೆದಿತ್ತು ಅನ್ನೋ ವರದಿಗಳು ಹರಿದಾಡಿತ್ತು. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಸುದೀರ್ಘ ಚರ್ಚೆ ನಡೆಸಿತ್ತು.