Asianet Suvarna News Asianet Suvarna News

ಡಿಕೆಶಿ ಕೇಸು ವಾಪಸ್‌, ಶಾಸಕರ ವಿರುದ್ಧ ಪ್ರಕರಣ: ಬಿಜೆಪಿ ಗರಂ

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿ ಸದಸ್ಯರಾದ ಸುನಿಲ್‌ ಕುಮಾರ್‌ ಸೇರಿದಂತೆ ಇತರೆ ಸದಸ್ಯರು ಹಕ್ಕುಚ್ಯುತಿ ಪ್ರಸ್ತಾವನೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆ ಸರ್ಕಾರ ವಾಪಸ್‌ ತೆಗೆದುಕೊಂಡರೆ, ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ ಎಂದು ಕಿಡಿಕಾರಿದರು. ಕೊನೆಗೆ ಸಭಾಧ್ಯಕ್ಷರು ಹಕ್ಕುಚ್ಯುತಿ ಪ್ರಸ್ತಾವನೆ ಮಂಡಿಸಲು ಅನುಮತಿ ನೀಡಿದರು. ಇದರಿಂದ ತಾತ್ಕಾಲಿಕವಾಗಿ ಬಿಜೆಪಿ ಸದಸ್ಯರು ಧರಣಿ ಹಿಂಪಡೆದರು.
 

BJP Anger For DK Shivakumar Case Withdraw and Case against MLA grg
Author
First Published Dec 6, 2023, 6:17 AM IST

ವಿಧಾನಸಭೆ(ಡಿ.06):  ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಪಕ್ಷ ಬಿಜೆಪಿ ಸದಸ್ಯ ಹರೀಶ್‌ಪೂಂಜಾ ಮಂಡಿಸಲು ಮುಂದಾದ ಹಕ್ಕುಚ್ಯುತಿ ಪ್ರಸ್ತಾಪವು ಸದನದಲ್ಲಿ ಗದ್ದಲ, ಆಡಳಿತ-ಪ್ರತಿಪಕ್ಷದ ನಡುವೆ ಜಟಾಪಟಿ, ಬಿಜೆಪಿ ಸದಸ್ಯರು ಬಾವಿಗಿಳಿದು ನಡೆಸಿದ ಧರಣಿಗೆ ಕಾರಣವಾಯಿತು. ಅಂತಿಮವಾಗಿ ಈ ಎಲ್ಲ ಗದ್ದಲಗಳ ನಡುವೆಯೇ ಸಭಾಧ್ಯಕ್ಷ ಯು.ಟಿ.ಖಾದರ್‌ ಅಂಗೀಕರಿಸಿ, ಹಕ್ಕುಚ್ಯುತಿ ವಿಚಾರವನ್ನು ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸಿದರು.

ಮಂಗಳವಾರ ಭೋಜನ ವಿರಾಮದ ಬಳಿಕ ಶೂನ್ಯವೇಳೆಯಲ್ಲಿ ಹರೀಶ್‌ ಪೂಂಜಾ ತಮ್ಮ ವಿರುದ್ಧ ಅರಣ್ಯ ಅಧಿಕಾರಿಗಳಿಂದ ಹಕ್ಕುಚ್ಯುತಿಯಾಗಿದೆ ಪ್ರಸ್ತಾಪ ಮಂಡಿಸಲು ಮುಂದಾದರು. ಈ ವೇಳೆ ಸಭಾಧ್ಯಕ್ಷ ಯು.ಟಿ.ಖಾದರ್‌ ಹಕ್ಕುಚ್ಯುತಿ ಮಂಡನೆಗೆ ಬುಧವಾರ ಅವಕಾಶ ನೀಡುವುದಾಗಿ ಹೇಳಿದರು. ಇದನ್ನು ಒಪ್ಪದ ಬಿಜೆಪಿ ಸದಸ್ಯರು ಬಾವಿಗಳಿದು ಧರಣಿ ಆರಂಭಿಸಿದರು.

ಕಾಂಗ್ರೆಸ್ ಮುಕ್ತ ಭಾರತ ಮಾಡ್ತೇವೆ ಅಂದಿದ್ರು; ಆದರೀಗ  ಬಿಜೆಪಿಯೇ ದಕ್ಷಿಣ ಭಾರತ ಮುಕ್ತವಾಗಿದೆ: ಸಚಿವ ಚಲುವರಾಯಸ್ವಾಮಿ

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿ ಸದಸ್ಯರಾದ ಸುನಿಲ್‌ ಕುಮಾರ್‌ ಸೇರಿದಂತೆ ಇತರೆ ಸದಸ್ಯರು ಹಕ್ಕುಚ್ಯುತಿ ಪ್ರಸ್ತಾವನೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆ ಸರ್ಕಾರ ವಾಪಸ್‌ ತೆಗೆದುಕೊಂಡರೆ, ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ ಎಂದು ಕಿಡಿಕಾರಿದರು. ಕೊನೆಗೆ ಸಭಾಧ್ಯಕ್ಷರು ಹಕ್ಕುಚ್ಯುತಿ ಪ್ರಸ್ತಾವನೆ ಮಂಡಿಸಲು ಅನುಮತಿ ನೀಡಿದರು. ಇದರಿಂದ ತಾತ್ಕಾಲಿಕವಾಗಿ ಬಿಜೆಪಿ ಸದಸ್ಯರು ಧರಣಿ ಹಿಂಪಡೆದರು.

ವಿಷಯ ಪ್ರಸ್ತಾಪಿಸಿದ ಹರೀಶ್‌ ಪೂಂಜಾ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಳೆಂಜಾ ಗ್ರಾಮದಲ್ಲಿ ದೇವನಗೌಡ ಎಂಬುವವರು ತಮ್ಮ ಜಮೀನಿನಲ್ಲಿ ಹಳೆಯ ಮನೆ ಕೆಡವಿ ಹೊಸ ಮನೆ ನಿರ್ಮಿಸಿಕೊಳ್ಳಲು ಮುಂದಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ, ಕಿರುಕುಳ ನೀಡಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಬಗ್ಗೆ ಸಚಿವರ ಜತೆ ದೂರವಾಣಿ ಮೂಲಕ ಮಾತನಾಡಿದೆ. ಸಚಿವರು ಸೂಚನೆ ನೀಡಿದರು. ಸಚಿವರು ಸೂಚನೆ ನೀಡಿದರೂ ಅಧಿಕಾರಿಗಳು ಲೆಕ್ಕಿಸದೆ ಕಿರುಕುಳ ಮುಂದುವರಿಸಿದರು. ತಮ್ಮವಿರುದ್ಧ ಪ್ರಕರಣ ದಾಖಲಿಸುವುದಲ್ಲದೇ, ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಇದರಿಂದ ತಮ್ಮ ಹಕ್ಕಿಗೆ ಚ್ಯುತಿ ತಂದ ಅಧಿಕಾರಿಗಳನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಘಟನೆಯನ್ನು ವಿಸ್ತೃತವಾಗಿ ವಿವರಿಸಿದರು.

ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಜಟಾಪಟಿ:

ಈ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ, ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡುವುದು ಹೆಚ್ಚಾಗುತ್ತಿದೆ. ಹೆಚ್ಚುವರಿಯಾಗಿ ಅತಿಕ್ರಮಣ ಮಾಡಿ ಕೃಷಿ ಮಾಡಲಾಗುತ್ತಿದೆ. ಅತಿಕ್ರಮಣವಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಸಮೀಕ್ಷೆ ನಡೆಸುವವರಿಗೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಲಾಗಿದೆ. ಈ ನಡುವೆ, ಸದಸ್ಯರು ಫೋನ್‌ ಕರೆಯ ಸಂಭಾಷಣೆಯನ್ನು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದಾಗ ಬಿಜೆಪಿ ಸದಸ್ಯ ಸುನಿಲ್‌ ಕುಮಾರ್‌ ಮಧ್ಯಪ್ರವೇಶಿಸಿ, ಸಚಿವರು ಘಟನೆ ಬಗ್ಗೆ ವಿವರಣೆ ನೀಡುವುದು ಬೇಡ ಹಕ್ಕುಬಾಧ್ಯತಾ ಸಮಿತಿಗೆ ಪ್ರಕರಣವನ್ನು ವಹಿಸಿ ಎಂದು ಆಗ್ರಹಿಸಿದರು.

ಆಗ ಆಡಳಿತ-ಪ್ರತಿಪಕ್ಷ ನಡುವೆ ತೀವ್ರ ವಾಕ್ಸಮರ ನಡೆಯಿತು. ಸಚಿವರಾದ ಪ್ರಿಯಾಂಕ್‌ ಖರ್ಗೆ ಮತ್ತು ಕೃಷ್ಣಬೈರೇಗೌಡ ಸರ್ಕಾರ ಕ್ರಮವನ್ನು ಸಮರ್ಥಿಸಿಕೊಂಡರು. ಇದರಿಂದ ಕ್ರುದ್ಧರಾದ ಬಿಜೆಪಿ ಸದಸ್ಯರು ಸರ್ಕಾರ ನಡೆಯನ್ನು ವಿರೋಧಿಸಿ ಬಾವಿಗಿಳಿದು ಎರಡನೇ ಬಾರಿಗೆ ಧರಣಿ ನಡೆಸಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸದನಕ್ಕೆ ಆಗಮಿಸಿದರು. ಬಳಿಕ ಜೆಡಿಎಸ್‌ ಸದಸ್ಯರು ಸಹ ಬಿಜೆಪಿ ಧರಣಿಗೆ ಬೆಂಬಲ ಸೂಚಿಸಿ ಅವರು ಸಹ ಬಾವಿಗಿಳಿದರು. ಸಭಾಧ್ಯಕ್ಷರು ಈ ಸಂಬಂಧ ರೂಲಿಂಗ್ ಕೊಡಬೇಕು ಎಂದು ಒತ್ತಾಯಿಸಿದರು. ಆಗ ಸಚಿವ ಈಶ್ವರ್‌ ಖಂಡ್ರೆ, ಅರಣ್ಯ ಒತ್ತುವರಿಯನ್ನು ಬೆಂಬಲಿಸುವುದು ಸರಿಯಲ್ಲ. ಈಗಾಗಲೇ ವನ್ಯಜೀವಿಗಳು ನಾಡಿಗೆ ಬರುತ್ತಿವೆ. ಅರಣ್ಯ ರಕ್ಷಣೆ ಮಾಡಬೇಕಿದೆ. ಅದರ ಹೊರತಾಗಿ ಶಾಸಕರಿಗೆ ಹಕ್ಕುಚ್ಯುತಿಯಾಗಿದೆ ಎಂದು ಪರಿಭಾವಿಸುವುದಾದರೆ ಹಕ್ಕುಚ್ಯುತಿ ಭಾಧ್ಯತಾ ಸಮಿತಿಗೆ ಒಪ್ಪಿಸಲು ತಕರಾರಿಲ್ಲ ಎಂದರು.

ಕಾಂಗ್ರೆಸ್‌ ಅಭ್ಯರ್ಥಿಗಳ ಖರೀದಿಗೆ ಸಿಎಂ ಕೆಸಿಆರ್‌ ಯತ್ನ: ಡಿಕೆಶಿ ಆರೋಪ

ಸಭಾಧ್ಯಕ್ಷರು ರೂಲಿಂಗ್‌ ನೀಡುವುದಾಗಿ ಹೇಳಿದ ಬಳಿಕ ಧರಣಿಯನ್ನು ಹಿಂತೆಗೆದುಕೊಳ್ಳಲಾಯಿತು. ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್‌, ಹಕ್ಕುಚ್ಯುತಿ ವಿಚಾರವನ್ನು ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸುವುದಾಗಿ ಪ್ರಕಟಿಸಿದರು.

ಎಫ್ಐಆರ್‌ ಪರಿಶೀಲನೆ: ಈಶ್ವರ್‌ ಖಂಡ್ರೆ

ಅರಣ್ಯ ಇಲಾಖೆ ಅಧಿಕಾರಿಗಳು ಬಿಜೆಪಿ ಸದಸ್ಯ ಹರೀಶ್‌ ಪೂಂಜಾ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಅನ್ನು ಹಿಂಪಡೆಯುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.
ಪ್ರಸ್ತುತ ಘಟನೆಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಲಾಗಿದೆ. ಸದಸ್ಯರ ಮೇಲೆ ಎಫ್‌ಐಆರ್‌ ದಾಖಲಿಸಿರುವುದು ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. ಅಲ್ಲದೇ, ಎಫ್‌ಐಆರ್‌ ಹಿಂಪಡೆಯುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.

Follow Us:
Download App:
  • android
  • ios