ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಎಚ್‌.ಡಿ.ದೇವೇಗೌಡ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ಗೆ ಪ್ರತಿಯಾಗಿ ಜನವರಿ 24 ರಂದು ಹಾಸನದಲ್ಲಿ ಬೃಹತ್ ಸಮಾವೇಶ ನಡೆಸಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಹಾಸನ: ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿರುವ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿವೆ. ಮೈತ್ರಿ ಇಲ್ಲ ಎಂದು ಪುನರುಚ್ಚರಿಸಿದ್ದಾರೆ.

ಅವರು ಮಾತನಾಡಿ, ಕರ್ನಾಟಕದಲ್ಲಿ ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಆಗಿದೆ ಎಂದರು. ತಮ್ಮ ರಾಜಕೀಯ ಜೀವನ ಹಾಗೂ ಮುಂದಿನ ಹೋರಾಟದ ಕುರಿತು ಭಾವನಾತ್ಮಕವಾಗಿ ಮಾತನಾಡಿ, ಜೆಡಿಎಸ್ ಇಂದು ಕೂಡ ಸದೃಢವಾಗಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಗುರುತಿಸುವಂತೆ ಉಳಿಸಿ ಬೆಳೆಸಿರುವುದಕ್ಕೆ ಕಾರ್ಯಕರ್ತರೇ ಕಾರಣ ಎಂದು ಶ್ಲಾಘಿಸಿದರು.

ಶ್ರೇಯೋಭಿವೃದ್ಧಿಗಾಗಿ ಅನುಮತಿ ನೀಡಿದೆ

ನಾವು ಮೋದಿಯವರ ಜೊತೆ ಗುರುತಿಸಿಕೊಂಡಾಗ ಕೇರಳದ ನಮ್ಮ ಸಚಿವರು ಹಾಗೂ ನಾಯಕರು ನಮ್ಮ ಬಳಿ ಬಂದು ನಾವು ಎಡಪಂಥೀಯ ಪಕ್ಷದ ಜೊತೆ ಗುರುತಿಸಿಕೊಳ್ಳಬೇಕು. ಅನುಮತಿ ನೀಡಿ ಎಂದು ಕೇಳಿದರು. ಅವರ ಶ್ರೇಯೋಭಿವೃದ್ಧಿಗಾಗಿ ನಾನು ಅನುಮತಿ ನೀಡಿದೆ. ಸ್ಥಳೀಯ ಸಂಸ್ಥೆಗಳಲ್ಲೂ ಸಹಕಾರ ನೀಡಿದ್ದೇವೆ. ಮಹಾರಾಷ್ಟ್ರದಲ್ಲಿ ಯಾವುದೇ ಹಣದ ಸಹಕಾರವಿಲ್ಲದೇ ಐವರು ಜಿ.ಪಂ.ಚುನಾವಣೆಯಲ್ಲಿ ಗೆದ್ದಿದ್ದಾರೆ. ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾದರೂ, ಮುರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ನನಗೆ ರಾಷ್ಟ್ರಮಟ್ಟದ ಹೊಣೆಗಾರಿಕೆ ನೀಡಲಾಗಿತ್ತು ಎಂದು ನೆನಪಿಸಿದರು.

ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಜ.24ಕ್ಕೆ ಹಾಸನದಲ್ಲಿ ಬೃಹತ್‌ ಸಮಾವೇಶ

ಜನವರಿ 24ರಂದು ಹಾಸನದಲ್ಲಿ ಜೆಡಿಎಸ್ನ ಬೃಹತ್ ಸಮಾವೇಶ ನಡೆಯಲಿದ್ದು, ಕನಿಷ್ಠ 2 ಲಕ್ಷ ಜನ ಸೇರಬೇಕು. ಕಾಂಗ್ರೆಸ್ ಮಾಡಿದ ಸಮಾವೇಶಕ್ಕಿಂತ ದೊಡ್ಡ ಸಮಾವೇಶ ಮಾಡಿ ನಿಮ್ಮ ಶಕ್ತಿ ಪ್ರದರ್ಶಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ವರ್ಚಸ್ಸು ಕುಂದಿಸಲು ಕಾಂಗ್ರೆಸ್‌ನಿಂದ ಪ್ರಯತ್ನ

ಕಳೆದ ಎರಡೂವರೆ ವರ್ಷದಲ್ಲಿ ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರ ವರ್ಚಸ್ಸು ಕುಂದಿಸುವ ದುರುದ್ದೇಶದಿಂದ ಕಾಂಗ್ರೆಸ್‌ ಎರಡು ಬಾರಿ ಬೃಹತ್ ಸಮಾವೇಶ ನಡೆಸಿದೆ. ಬೇರೆ ಜಿಲ್ಲೆಗಳಿರಲಿಲ್ಲವೇ?. ಇದು ಹಾಸನ ಜೆಡಿಎಸ್ ಭದ್ರಕೋಟೆ ಎಂಬುದನ್ನು ಅರಿತು, ಅದನ್ನು ಮುರಿಯಲು ಅವರ ಪ್ರಯತ್ನ. ಇದಕ್ಕೆ ಪ್ರತಿಯಾಗಿ ನಾವೂ ಕೂಡ ಬೃಹತ್‌ ಸಮಾವೇಶ ನಡೆಸುತ್ತೇವೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಡಿಸಿಎಂ ಏನಾದ್ರು ಹೇಳಲಿ ಎಂದು ಸ್ಫೋಟಕ ಭವಿಷ್ಯವಾಣಿ ನುಡಿದ ಶಾಸಕ ಇಕ್ಬಾಲ್ ಹುಸೇನ್

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌: ಜ.3ಕ್ಕೆ ತೀರ್ಪು ಮುಂದೂಡಿಕೆ