ದೇಶಕ್ಕೆ ಸರ್ವಾಧಿಕಾರ ತರುವುದು ಬಿಜೆಪಿ ಗುರಿ: ಪೃಥ್ವಿರಾಜ್ ಚವ್ಹಾಣ್
ತನಿಖಾ ಸಂಸ್ಥೆಗಳ ದಾಳಿ ಮೂಲಕ ಬಿಜೆಪಿ ಇತರೆ ಪಕ್ಷಗಳ ರಾಜಕೀಯ ಮುಖಂಡರನ್ನು ಬಿಜೆಪಿ ಸೇರುವಂತೆ ಬ್ಲಾಕ್‌ಮೇಲ್ ಮಾಡುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚುನಾವಣೆ ಮೂಲಕ ವಿರೋಧ ಪಕ್ಷಗಳನ್ನು ಎದುರಿಸಲು ಸಾಧ್ಯವಾಗದ ಬಿಜೆಪಿ ಅಧಿಕಾರಕ್ಕಾಗಿ ಮತ್ತು ಸರ್ವಾಧಿಕಾರಿ ಸರ್ಕಾರ ತರಲು ಅಕ್ರಮದ ಹಾದಿಯಲ್ಲಿ ಸಾಗುತ್ತಿದೆ ಎಂದು ದೂರಿದ ಪೃಥ್ವಿರಾಜ್ ಚವ್ಹಾಣ್
ಬೆಳಗಾವಿ(ಮೇ.03): ಇಡಿ, ಐಟಿ ಸೇರಿದಂತೆ ಇನ್ನಿತರ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುವ ಮೂಲಕ ದೇಶಕ್ಕೆ ಸರ್ವಾಧಿಕಾರವನ್ನು ತರುವ ಗುರಿ ಹೊಂದಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚೌವ್ಹಾಣ್ ಆರೋಪಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖಾ ಸಂಸ್ಥೆಗಳ ದಾಳಿ ಮೂಲಕ ಬಿಜೆಪಿ ಇತರೆ ಪಕ್ಷಗಳ ರಾಜಕೀಯ ಮುಖಂಡರನ್ನು ಬಿಜೆಪಿ ಸೇರುವಂತೆ ಬ್ಲಾಕ್‌ಮೇಲ್ ಮಾಡುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚುನಾವಣೆ ಮೂಲಕ ವಿರೋಧ ಪಕ್ಷಗಳನ್ನು ಎದುರಿಸಲು ಸಾಧ್ಯವಾಗದ ಬಿಜೆಪಿ ಅಧಿಕಾರಕ್ಕಾಗಿ ಮತ್ತು ಸರ್ವಾಧಿಕಾರಿ ಸರ್ಕಾರ ತರಲು ಅಕ್ರಮದ ಹಾದಿಯಲ್ಲಿ ಸಾಗುತ್ತಿದೆ ಎಂದು ದೂರಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಅಲ್ಲದೆ, ಜನರನ್ನು ಲೂಟಿ ಮಾಡುವಲ್ಲಿ ತೊಡಗಿದೆ. ಒಂದು ಹೆಜ್ಜೆ ಮುಂದೆ ಹೋದರೆ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ನಿರ್ಮಿಸಿದ ಸರ್ಕಾರಿ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳನ್ನು ಈ ಸರ್ಕಾರ ಮಾರಾಟ ಮಾಡಿದೆ. ಅಧಿಕಾರದಲ್ಲಿ ಮುಂದುವರಿದರೆ ಕಡಿಮೆ ಅವಧಿಯಲ್ಲಿ ಉಳಿದಿರುವ ಸರ್ಕಾರಿ ಆಸ್ತಿಗಳನ್ನೆಲ್ಲ ಮಾರಾಟ ಮಾಡಲಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರದು ಬರೀ ಭರವಸೆಗಳ ಬಂಡಲ್ ಪಕ್ಷ: ಸತೀಶ ಜಾರಕಿಹೊಳಿ
ಪ್ರಸ್ತುತ ಅಗತ್ಯವನ್ನು ಮನಗಂಡ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪದವೀಧರರಿಗೆ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ, 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಮಹಿಳೆಯರಿಗೆ .2,000, ಅಗತ್ಯತೆಗಳನ್ನು ಪೂರೈಸಲು ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿದೆ. ಮಹಿಳೆಯರಿಗೆ ಉಚಿತ ಬಸ್‌ಸೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳನ್ನು ರಾಜ್ಯದ ಜನತೆ ಮೆಚ್ಚಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ ತಾನು ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಶೇ.40ರಷ್ಟುಕಮಿಷನ್ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕುವ ಸಮಯ ಬಂದಿದೆ. ಮುಂದಿನ ದಿನಗಳಲ್ಲಿ ಛತ್ತೀಸ್‌ಗಢ, ರಾಜಸ್ಥಾನ ವಿಧಾನಸಭೆ ಚುನಾವಣೆಯ ಮೇಲೂ ಕರ್ನಾಟಕದ ಫಲಿತಾಂಶ ಪರಿಣಾಮ ಬೀರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಎನ್‌ಸಿಪಿ ನೇರವಾಗಿ ಬಿಜೆಪಿಗೆ ಲಾಭದಾಯಕವಾಗಿದೆ. ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಕೇಳಿದಾಗ, ನಾವು ಬಿಜೆಪಿ ವಿರುದ್ಧ ಕೇಂದ್ರದಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿ 40 ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ನನಗೂ ನಿರಾಶೆಯಾಗಿದೆ. ಎನ್‌ಸಿಪಿ ಪಕ್ಷವು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿದೆ ಮತ್ತು ಅದನ್ನು ಮತ್ತೆ ಪಡೆಯಲು, ಅದು ಕರ್ನಾಟಕ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎನ್ನಲಾಗುತ್ತಿದೆ. ಇದು ನೇರವಾಗಿ ಬಿಜೆಪಿಗೆ ಲಾಭವಾಗಲಿದೆ. ಎನ್‌ಸಿಪಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮುನ್ನ ಕಾಂಗ್ರೆಸ್ ಜೊತೆ ಚರ್ಚಿಸಬಹುದಿತ್ತು ಎಂದರು.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾರಾಷ್ಟ್ರ ನಾಯಕರನ್ನು ಚುನಾವಣೆಯಲ್ಲಿ ಪ್ರಚಾರ ಮಾಡುವಂತೆ ಕೇಳಿಕೊಂಡಾಗ, ಇದು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಚುನಾವಣೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಎರಡೂ ರಾಜ್ಯಗಳ ಸರ್ಕಾರಗಳು ನ್ಯಾಯಾಲಯದಲ್ಲಿ ತಮ್ಮ ಪರ ವಾದ ಮಂಡಿಸುತ್ತಿವೆ. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಅಂತ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ತಿಳಿಸಿದ್ದಾರೆ.