ಮೂಡಿಗೆರೆ ಕ್ಷೇತ್ರದಲ್ಲಿ ಬೀದಿಗೆ ಬಂದ ಬಿಜೆಪಿ ಕಾರ್ಯಕರ್ತರು: ಕುಮಾರಸ್ವಾಮಿ ಹಠಾವೋ ಘೋಷಣೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹಾಲಿ ಶಾಸಕರ ವಿರುದ್ಧ ರೆಬಲ್ ಆಗಿ ಪ್ರತ್ಯೇಕ ಬಂಡಾಯದ ಸಭೆ ನಡೆಸಿ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

BJP Activists Came to road on Mudigere Constitution sat

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.16): ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ. 120 ಪ್ಲಸ್ ಕನಸೊತ್ತಿರೋ ಬಿಜೆಪಿ ಶತಯಾಗತಾಯ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಆದರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹಾಲಿ ಶಾಸಕರ ವಿರುದ್ಧ ರೆಬಲ್ ಆಗಿ ಪ್ರತ್ಯೇಕ ಬಂಡಾಯದ ಸಭೆ ನಡೆಸಿ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಕುಮಾರಸ್ವಾಮಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ : ಮೂಡಿಗೆರೆ ಪಟ್ಟಣದ ಪ್ರೀತಂ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸುತ್ತಿರೋ ಮುಖಂಡರು ಹಾಗೂ ಕಾರ್ಯಕರ್ತರು ಈ ಬಾರಿ ಕುಮಾರಸ್ವಾಮಿಗೆ ಟಿಕೆಟ್ ಬೇಡವೇ ಬೇಡ ಅಂತ ಬಹಿರಂಗ ಸಭೆ ನಡೆಸುತ್ತಿದ್ದಾರೆ. ಅವರು ಕಾರ್ಯಕರ್ತರನ್ನ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಬೂತ್ ಕಮಿಟಿ ಅಧ್ಯಕ್ಷರು, ಮಂಡಲ ಅಧ್ಯಕ್ಷರು ಹೋದಾಗಲು ನೀವು ಯಾರು ಎಂದು ಕೇಳುತ್ತಾರೆ. ಚುನಾವಣೆ ಸಮಯದಲ್ಲಿ ಹಣಕಾಸಿನ ನೆರವು ನೀಡಿದವರನ್ನೂ ನೀವು ಯಾರು ಎಂದು ಕೇಳುತ್ತಾರೆ. ಅವರು ಶಾಸಕರಾದರೆ ಬರೀ ಗುಂಪುಗಾರಿಕೆ ಮಾಡುತ್ತಾರೆ. 

ಮಾ.16ರಂದು ಮೂಡಿಗೆರೆಯಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ: ಕಾರ್ಯಕ್ರಮದ ಮೇಲೆ ಬಂಡಾಯದ ಕಾರ್ಮೋಡ

ಶಾಸಕ ಕುಮಾರಸ್ವಾಮಿಗೆ ಟಿಕೆಟ್ ಬೇಡ: ಕಳೆದ ಎಲೆಕ್ಷನ್‍ನಲ್ಲಿ ಇನ್ಮುಂದೆ ಹಾಗೇ ಮಾಡುವುದಿಲ್ಲ ಎಂದು ಹೇಳಿ ಗೆದ್ದು ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಈ ಬಾರಿ ಅವರಿಗೆ ಟಿಕೆಟ್ ಬೇಡವೇ ಬೇಡ ಎಂದು 1000 ಕ್ಕೂ ಅಧಿಕ ಮುಖಂಡರು, ಕಾರ್ಯಕರ್ತರು ಕುಮಾರಸ್ವಾಮಿ ಹಠಾವೋ, ಬಿಜೆಪಿ ಬಚಾವೋ ಎಂದು ಸಭೆ ನಡೆಸುತ್ತಿದ್ದಾರೆ. ಇಂದು ಮೂಡಿಗೆರೆಗೆ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಎದುರು ಸಾವಿರಾರು ಕಾರ್ಯಕರ್ತರು, ಈಗಿರುವ ಶಾಸಕ ಕುಮಾರಸ್ವಾಮಿಗೆ ಟಿಕೆಟ್ ಬೇಡ. ಅವರಿಗೆ ಕೊಟ್ಟರೆ ನಮ್ಮ ದಾರಿ ನಮಗೆ ಎಂದು ಹೇಳಿದ್ದಾರೆ. ಆದರೆ, ಬಿಜೆಪಿಯ ಆಂತರಿಕ ಬೇಗುದಿ ನಡು ರಸ್ತೆಯಲ್ಲಿ ಸ್ಫೋಟಗೊಂಡಿದ್ದು, ಇದನ್ನೆಲ್ಲಾ ಹೈಕಮಾಂಡ್‌ ಹೇಗೆ ಹತ್ತಿಕ್ಕಲಿದೆ ಎನ್ನುವುದು ಕಾದು ನೋಡಬೇಕಿದೆ.

ಕುಮಾರಸ್ವಾಮಿ ಪರವೂ ಮತ್ತೊಂದು ಗುಂಪು ಬ್ಯಾಟಿಂಗ್: ಇಷ್ಟು ದಿನ ಬೂದಿಮುಚ್ಚಿದ ಕೆಂಡದಂತಿದ್ದ ಮತ್ತು ತೆರೆಮರೆಯಲ್ಲೇ ನಡೆಯುತ್ತಿದ್ದ ಭಿನ್ನಾಭಿಪ್ರಾಯ ಇದೀಗ ಸ್ಪೋಟಗೊಳ್ಳುವ ಹಂತ ತಲುಪಿದೆ. ಕಳೆದ ಒಂದು ವಾರದಿಂದ ಕುಮಾರಸ್ವಾಮಿ ವಿರೋಧಿ ಬಣದ ಕಾರ್ಯಕರ್ತರು ಸತತ ಸಭೆಗಳನ್ನು ನಡೆಸುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು, ಹಾಗೊಂದು ವೇಳೆ ಅವರಿಗೆ ಟಿಕೆಟ್ ನೀಡಿದರೆ ನಮ್ಮ ದಾರಿ ನಮಗೆ ಎನ್ನುವ ರೀತಿಯ ತೀರ್ಮಾನಗಳಿಗೆ ಬರುತ್ತಿದ್ದಾರೆ.ಇದರ ಜೊತೆಗೆ ಕುಮಾರಸ್ವಾಮಿ ಪರವೂ ಮತ್ತೋಂದು ಗುಂಪು ಟಿಕೆಟ್ ನೀಡುವಂತೆ ಒತ್ತಾಯವನ್ನು ಕೂಡ ಮಾಡುತ್ತಿದೆ.

ಯಾತ್ರೆಯ ಮೇಲೆ ಬಂಡಾಯದ ಕಾರ್ಮೋಡ: ಮೂಡಿಗೆರೆಯಲ್ಲಿ ಹಮ್ಮಿಕೊಂಡಿರುವ ವಿಜಯಸಂಕಲ್ಪ ಯಾತ್ರೆಯ ಮೇಲೆ ಬಂಡಾಯದ ಕಾರ್ಮೋಡ ಕವಿದಿದೆ. ಕ್ಷೇತ್ರದಲ್ಲಿ ಶಾಸಕ ಕುಮಾರಸ್ವಾಮಿಯವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಕ್ಷೇತ್ರದ ದೊಡ್ಡ ಸಂಖ್ಯೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಬಂಡಾಯದ ಬಾವುಟ ಹಾರಿಸಿದ್ದಾರೆ.ಎಂ.ಪಿ.ಕೆ. ಹಠಾವೋ, ಬಿ.ಜೆ.ಪಿ. ಬಚಾವೋ ಎಂಬ ಘೋಷಣೆಯೊಂದಿಗೆ ಮೂಡಿಗೆರೆ ಕ್ಷೇತ್ರದ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಗರು, ವಿವಿಧ ಹೋಬಳಿಗಳ ಅಧ್ಯಕ್ಷರು, ಮಂಡಲ ಸಮಿತಿಯ ಪದಾಧಿಕಾರಿಗಳು, ಬೂತ್ ಮಟ್ಟದ ಪ್ರಮುಖ ಕಾರ್ಯಕರ್ತರು ಶಾಸಕ ಎಂ.ಪಿ. ಕುಮಾರಸ್ವಾಮಿಯವರ ವಿರುದ್ಧ ದೊಡ್ಡ ಮಟ್ಟದಲ್ಲಿ ತಿರುಗಿ ಬಿದ್ದಿದ್ದಾರೆ.

Latest Videos
Follow Us:
Download App:
  • android
  • ios