Asianet Suvarna News Asianet Suvarna News

ತನಿಖೆ ನಡೆಯುತ್ತಿದೆ, ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಸಿದ್ದು ಆರೋಪಕ್ಕೆ ಬೊಮ್ಮಾಯಿ ಪ್ರತಿಕ್ರಿಯೆ!

* ಸಿಐಡಿ ತನಿಖೆ ನಡೆಯುತ್ತಿದೆ, ಬಳಿಕ ಇಡಿ/ಸಿಬಿಐಗೆ: ಸಿಎಂ, ಆರಗ

* ತನಿಖೆ ನಡೆಯುತ್ತಿದೆ, ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಬೊಮ್ಮಾಯಿ

Bitcoin scam Karnataka CM Bommai says case with ED CBI HM says CID pod
Author
Bangalore, First Published Oct 29, 2021, 6:29 AM IST
  • Facebook
  • Twitter
  • Whatsapp

ಹುಬ್ಬಳ್ಳಿ(ಅ.29): ಬಿಟ್‌ ಕಾಯಿನ್‌ (Bitcoin) ಹಾಗೂ ಡ್ರಗ್ಸ್‌ (Drugs) ದಂಧೆಯ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ತನಿಖೆ ಬಳಿಕ ಸರ್ಕಾರವೇ ಜಾರಿ ನಿರ್ದೇಶನಾಲಯ (ಇ.ಡಿ.) ಅಥವಾ ಸಿಬಿಐ ತನಿಖೆಗೆ ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ.

ಬಿಟ್‌ ಕಾಯಿನ್‌ ಹಾಗೂ ಡ್ರಗ್ಸ್‌ ದಂಧೆಯಲ್ಲಿ ರಾಜಕಾರಣಿಗಳು ಭಾಗಿಯಾಗಿರುವ ಸಾಧ್ಯತೆ ಇದ್ದು, ತಪ್ಪಿತಸ್ಥರನ್ನು ರಕ್ಷಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸವರಾಜ ಬೊಮ್ಮಾಯಿ, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ರಾಜ್ಯ ಸರ್ಕಾರವು ಬಿಟ್‌ ಕಾಯಿನ್‌ ಮತ್ತು ಡ್ರಗ್ಸ್‌ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದೆ. ತನಿಖೆ ಬಳಿಕ ನಾವೇ ಇ.ಡಿ. ಅಥವಾ ಸಿಬಿಐಗೆ (CBI) ಪ್ರಕರಣವನ್ನು ವಹಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

'ರಾಜ್ಯದ ಪ್ರಭಾವಿಗಳಿಂದ ಡ್ರಗ್ಸ್‌, ಬಿಟ್‌ಕಾಯಿನ್‌ ದಂಧೆ'

ಇದೇ ವಿಚಾರವಾಗಿ ಬೆಂಗಳೂರಿನ ವಿಕಾಸಸೌಧದಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ರಾಜ್ಯದಲ್ಲಿ ಬಿಟ್‌ ಕಾಯಿನ್‌ ಹಾಗೂ ಡ್ರಗ್ಸ್‌ ದಂಧೆ ನಡೆದಿದೆ ಎಂಬುದು ತುಂಬಾ ಗಂಭೀರವಾದ ಪ್ರಕರಣ. ಈಗಾಗಲೇ ಈ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದ್ದು, ನನಗೆ ಕೆಲವೊಂದು ಮಾಹಿತಿ ದೊರೆತಿದೆ. ತನಿಖೆಗೆ ತೊಡಕಾಗಬಹುದಾದ ಹಿನ್ನೆಲೆಯಲ್ಲಿ ಏನೂ ಹೇಳುವುದಿಲ್ಲ. ಇದು ಗಂಭೀರವಾದ ಪ್ರಕರಣವಾದ್ದರಿಂದ ಪಕ್ಷ ಮೀರಿ ಯೋಚಿಸಬೇಕು ಎಂದು ಹೇಳಿದರು.

ಬಿಟ್‌ ಕಾಯಿನ್‌ ಹಾಗೂ ಡ್ರಗ್ಸ್‌ ದಂಧೆ ಕುರಿತು ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇದೊಂದು ಮಹತ್ವದ ಪ್ರಕರಣವಾಗಿದ್ದರಿಂದ ಇಲಾಖೆಯು ಗಂಭೀರವಾಗಿ ತೆಗೆದುಕೊಂಡಿದೆ. ಪೊಲೀಸರ ಮೇಲೆಯೂ ಆರೋಪವಿದ್ದು, ಸಿಐಡಿ ವಿಶೇಷ ತಂಡ ತನಿಖೆ ನಡೆಸುತ್ತಿರುವುದರಿಂದ ಯಾರೇ ತಪ್ಪಿತಸ್ಥರಾದರೂ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕಾರಣಿಗಳ ಪಾತ್ರ ಇದೆ ಎಂದು ಟ್ವೀಟ್‌ ಮಾಡಿದ್ದಾರೆ. ನಾನು ರಾಜಕಾರಣಿಗಳ ಬಗ್ಗೆ ಏನೂ ಮಾತನಾಡುವುದಿಲ್ಲ. ಆರೋಪಿಗಳು ಯಾರೇ ಇರಲಿ. ಕಾನೂನು ಸೂತ್ರದಡಿ ಶಿಕ್ಷೆಯಾಗಲಿದೆ. ಆದರೆ, ವಿಪಕ್ಷ ನಾಯಕರು ಯಾರದ್ದೋ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದು. ಇದನ್ನು ಪಕ್ಷ ಮೀರಿ ಯೋಚಿಸಬೇಕು ಎಂದು ವಿಪಕ್ಷ ನಾಯಕರಲ್ಲಿ ವಿನಂತಿ ಮಾಡುತ್ತೇನೆ ಎಂದರು.

ಬಿಟ್‌ ಕಾಯಿನ್‌ ಬಳಕೆಯಾಗಿದ್ದರೆ ಎಲ್ಲವೂ ತನಿಖೆಯಿಂದ ಹೊರಗೆ ಬರಲಿದೆ. ಊಹಾಪೋಹಗಳನ್ನು ಹರಡುವ ಕೆಲಸ ಮಾಡಬಾರದು. ಇದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಹೇಳಿದ್ದೇನು?

ಬಿಟ್‌ಕಾಯಿನ್, ಡ್ರಗ್ಸ್ ದಂದೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು, ಬಿಟ್‌ ಕಾಯಿನ್‌ ದಂಧೆಯಲ್ಲಿ ದೊಡ್ಡ ದೊಡ್ಡವರು ಇರುವ ಕಾರಣಕ್ಕೆ ಈ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಟ್‌ಕಾಯಿನ್‌ ಪ್ರಕರಣವನ್ನು ಜಾರಿ ನಿರ್ದೇಶನಾಲಯದ ತನಿಖೆಗೆ ಶಿಫಾರಸು ಮಾಡಿದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಹೇಳುತ್ತಿದ್ದಾರೆ. ಹಾಗಿದ್ದರೆ ಪ್ರಕರಣವನ್ನು ಇಷ್ಟುದಿನ ಯಾಕೆ ಮುಚ್ಚಿಟ್ಟಿದ್ದರು? ಇಷ್ಟುದೊಡ್ಡ ಪ್ರಕರಣವನ್ನು ಮುಚ್ಚಿಟ್ಟಂತೆ ಆಯ್ತಲ್ಲ ಎಂದು ಪ್ರಶ್ನಿಸಿದರು.

ಡ್ರಗ್ಸ್‌ ಹಾಗೂ ಬಿಟ್‌ ಕಾಯಿನ್‌ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ತನಿಖಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ವರದಿ ಕಳವಳಕಾರಿಯಾದುದು. ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಕೇಂದ್ರ ಬಿಜೆಪಿ ಸರ್ಕಾರ ಪ್ರಭಾವ ಬೀರಿ ತನಿಖೆಯ ಹಾದಿ ತಪ್ಪಿಸದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios