ರಾಜಕೀಯ ಸಂದೇಶಕ್ಕಾಗೇ ಸಿದ್ದರಾಮೋತ್ಸವ: Siddaramaiah ಸ್ಪಷ್ಟನೆ
ಪಕ್ಷದ ವೇದಿಕೆಯಲ್ಲಿ ಅಲ್ಲದಿದ್ದರೂ ಪಕ್ಷದ ನಾಯಕರಿಂದಲೇ ಈ ಕಾರ್ಯಕ್ರಮ, ಮುಂಬರುವ ವಿಧಾನಸಭಾ ಚುನಾವಣೆ ನನ್ನ ಕೊನೇ ಚುನಾವಣೆ. ಆಮೇಲೆ ರಾಜಕೀಯ ಮಾಡೋಕಾಗಲ್ಲ ಎಂದ ಸಿದ್ದರಾಮಯ್ಯ.
ಬೆಂಗಳೂರು (ಜು.9): ಸಿದ್ದರಾಮೋತ್ಸವ ಕಾರ್ಯಕ್ರಮದ ಹಿಂದೆ ರಾಜಕೀಯ ಸಂದೇಶ ನೀಡುವ ಉದ್ದೇಶವಿದೆ. ನಾವ್ಯಾರೂ ಸನ್ಯಾಸಿಗಳಲ್ಲ. ಜೀವನದಲ್ಲಿ 75 ವರ್ಷ ಎಂಬುದು ದೊಡ್ಡ ಮೈಲಿಗಲ್ಲು. ಹೀಗಾಗಿ ಈ ಕಾರ್ಯಕ್ರಮವನ್ನು ಕಾಂಗ್ರೆಸ್ಸಿಗರು ಆಯೋಜಿಸಿದ್ದಾರೆ. ಪಕ್ಷದ ವೇದಿಕೆಯಲ್ಲಿ ಅಲ್ಲದಿದ್ದರೂ, ಪಕ್ಷದ ನಾಯಕರಿಂದಲೇ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಾಗಲಿ, ರಾಹುಲ್ ಗಾಂಧಿ ಆಗಲಿ, ಡಿ.ಕೆ. ಶಿವಕುಮಾರ್ ಆಗಲಿ ರಾಜಕೀಯ ಸನ್ಯಾಸತ್ವ ಪಡೆದಿಲ್ಲ. ಹೀಗಾಗಿ ಕಾರ್ಯಕ್ರಮದಲ್ಲಿ ರಾಜಕೀಯ ಸಂದೇಶ ಇದ್ದೇ ಇರುತ್ತದೆ. ನಮ್ಮ ಸರ್ಕಾರ 5 ವರ್ಷಗಳ ಕಾಲ ಯಾವೆಲ್ಲಾ ಕಾರ್ಯಕ್ರಮ, ಯೋಜನೆಗಳನ್ನು ನೀಡಿದೆ ಎಂಬುದನ್ನು ಹೇಳುವುದು ಸಹ ರಾಜಕೀಯವೇ ಆಗಲಿದೆ. 75 ವರ್ಷ ಎಂಬುದು ದೊಡ್ಡ ಮೈಲಿಗಲ್ಲು. ನಾನು ನಡೆದು ಬಂದ ಹಾದಿ, ರಾಜಕೀಯ ಜೀವನ, ನಾನು ನೀಡಿದ ಕಾರ್ಯಕ್ರಮಗಳು ಎಲ್ಲವನ್ನೂ ನೆನಸಿಕೊಳ್ಳುವುದು ಸಹ ರಾಜಕೀಯವೇ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಿದ್ದು ಬಗ್ಗೆ 27 ಲೇಖಕರು ವಿಮರ್ಶೆ ಮಾಡಿರುವ ಬೃಹತ್ ಕೃತಿ ಜು.23ಕ್ಕೆ ರಿಲೀಸ್
ಶುಕ್ರವಾರ ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜಂಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಆ.3 ರಂದು ಹಮ್ಮಿಕೊಂಡಿರುವ ನನ್ನ ಜನ್ಮ ದಿನಾಚರಣೆಯನ್ನು ಪಕ್ಷದ ವೇದಿಕೆಯಲ್ಲಿ ಮಾಡುತ್ತಿಲ್ಲ. ಆದರೆ ಪಕ್ಷದವರೇ ಸೇರಿ ಮಾಡುತ್ತಿದ್ದಾರೆ. ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರ ಗೌರವಾಧ್ಯಕ್ಷತೆಯಲ್ಲಿ ಸಮಿತಿ ಮಾಡಿಕೊಂಡಿದ್ದು, ಪಕ್ಷದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ಅಧ್ಯಕ್ಷರಾಗಿದ್ದಾರೆ. ಇದಲ್ಲದೆ ಶಾಮನೂರು ಶಿವಶಂಕರಪ್ಪ, ಎಚ್.ಸಿ. ಮಹದೇವಪ್ಪ, ಬಸವರಾಜ ರಾಯರೆಡ್ಡಿ ಸೇರಿದಂತೆ ಎಲ್ಲರೂ ಪಕ್ಷದವರೇ ಸೇರಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಕಾರ್ಯಕ್ರಮಕ್ಕೆ ರಾಹುಲ್‌ಗಾಂಧಿ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ಎಂ.ಬಿ. ಪಾಟೀಲ್ ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ಕಾಂಗ್ರೆಸ್ ನಾಯಕರನ್ನು ಆಹ್ವಾನ ಮಾಡಿದ್ದೇನೆ. ಹೀಗಾಗಿ ಪಕ್ಷದವರೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದರು.
ಸಿದ್ಧರಾಮಯ್ಯ ಮನೆಯಲ್ಲಿ ಡಿಕೆಶಿ ಟಿಫನ್ ಮೀಟಿಂಗ್ ಗುಟ್ಟು ರಟ್ಟು,
ಯಾರಿಂದಲೂ ಆಕ್ಷೇಪವೂ ಇಲ್ಲ: ನನ್ನ ಜನ್ಮ ದಿನ ಆಚರಿಸುವ ಬಗ್ಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಎಲ್ಲವೂ ಕೆಲ ಮಾಧ್ಯಮಗಳ ಸೃಷ್ಟಿ. ಯಾರಾದರೂ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ನಿಮ್ಮ ಬಳಿ ಹೇಳಿದ್ದಾರಾ? ಇನ್ನು ಸಿದ್ದರಾಮೋತ್ಸವ ಎಂಬ ಹೆಸರು ನಾವು ಹೇಳಿದ್ದಾ? ಎಂದು ಪ್ರಶ್ನಿಸಿದರು.
ಆದರೂ ಸಿದ್ದರಾಮೋತ್ಸವ ಎಂಬ ಹೆಸರು ತುಂಬಾ ಸೂಕ್ತವಾಗಿದೆ ಎಂಬ ಸುದ್ದಿಗಾರರ ಮಾತಿಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮೋತ್ಸವನೂ ಇಲ್ಲ, ಸಿದ್ದರಾಮೇಶ್ವರ ಉತ್ಸವನೂ ಇಲ್ಲ. 75 ವರ್ಷ ಎಂಬುದು ಮೈಲುಗಲ್ಲು ಎಂಬ ಕಾರಣಕ್ಕೆ ಜನ್ಮದಿನಾಚರಣೆ ಆಚರಿಸುತ್ತಿದ್ದಾರೆ. ದೊಡ್ಡಮಟ್ಟಕ್ಕೆ ಮಾಡುತ್ತಿರುವುದರಿಂದ ರಾಹುಲ್‌ಗಾಂಧಿಯವರನ್ನೂ ಆಹ್ವಾನಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
10 ಲಕ್ಷ ಜನ ಆಗಮಿಸುವ ನಿರೀಕ್ಷೆ: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನೋತ್ಸವದ ಅಂಗವಾಗಿ ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದನ್ನು ಸಿದ್ದರಾಮಯ್ಯ ಅವರು ಆಚರಣೆ ಮಾಡಿಕೊಳ್ಳುತ್ತಿಲ್ಲ, ಅವರ ಅಭಿಮಾನಿಗಳು ಆಚರಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಇಬ್ಭಾಗ ಆಗುತ್ತದೆ ಎನ್ನುವ ಕೆ.ಎಸ್. ಈಶ್ವರಪ್ಪ ಅವರು ಈಗ ಏನಾಗಿದ್ದಾರೆ? ಅವರನ್ನು ಸಚಿವ ಸ್ಥಾನದಿಂದ ತೆಗೆದಿದ್ದು ಪ್ರತಿಪಕ್ಷದವರು ಅಲ್ಲ. ತಾವೇ ಪರ್ಸೆಂಟೇಸ್ ವ್ಯವಹಾರದಲ್ಲಿ ಸಿಲುಕಿ ಈ ಸ್ಥಿತಿಗೆ ಬಂದಿದ್ದಾರೆ. ಈ ಕುರಿತು ಅವರೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ವ್ಯಕ್ತಿಪೂಜೆ, ಪಕ್ಷ ಪೂಜೆಯ ಕುರಿತು ನನಗೆ ಗೊತ್ತಿಲ್ಲ. ಕಾರ್ಯಕ್ರಮಕ್ಕೆ ರಾಹುಲ್‌ಗಾಂಧಿ ಸೇರಿದಂತೆ ಹಲವು ನಾಯಕರು ಆಗಮಿಸುತ್ತಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದಲೂ ಸುಮಾರು 10 ಸಾವಿರ ಜನರು ಭಾಗವಹಿಸುವರು ಎಂದರು.
ಸಿಎಂ ಮಾಡುವ ಕುರಿತು ಈಗ ಚರ್ಚೆಯಿಲ್ಲ. ಹೈಕಮಾಂಡ್ ಮತ್ತು ಶಾಸಕರು ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಮಾಡಿದ ಜನಪರ ಯೋಜನೆಗಳಿಂದ ಅನೇಕರು ಅಭಿಮಾನಿಗಳಾಗಿದ್ದಾರೆ. ಹೀಗಾಗಿ ಅವರೆಲ್ಲರೂ ಆಗಮಿಸುತ್ತಾರೆ ಎಂದರು.