ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನವು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನವನ್ನು ಅನಿರೀಕ್ಷಿತವಾಗಿ ಬಲಪಡಿಸಿದೆ. ಅಹಿಂದ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿಯಿಂದ ಹೈಕಮಾಂಡ್, ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.

ಬೆಂಗಳೂರು (ನ.14): ಡಾ. ರಾಜ್‌ಕುಮಾರ್‌ ಧ್ವನಿಯಲ್ಲಿ 'ನೋವಲ್ಲೂ ನೂರು ಸುಖವುಂಟು ಇಲ್ಲಿ..' ಅನ್ನೋ ಹಾಡು ಸಿಎಂ ಸಿದ್ದರಾಮಯ್ಯ ಲೂಪ್‌ಅಲ್ಲಿ ಕೇಳ್ತಾ ಇರಬಹುದು. ಅದಕ್ಕೆ ಕಾರಣವೂ ಇದೆ. ಬಿಹಾರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅವಮಾನಕರ ಸೋಲು ಕಂಡಿದ್ದು ಒಂದೆಡೆಯಾಗಿದ್ದರೆ, ಈ ಸೋಲಿನಲ್ಲೂ ಖುಷಿಯಾಗಿರೋದು ಕರ್ನಾಟಕದ ಸಿಎಂ ಸಿದ್ದರಾಮಯ್ಯ. ಅದಕ್ಕೆ ಕಾರಣ, ನವೆಂಬರ್‌ನಲ್ಲಿ ಸಿಎಂ ಕುರ್ಚಿ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಡಿಕೆ ಶಿವಕುಮಾರ್‌ಗೆ ಬಿಹಾರದಲ್ಲಿ ಪಕ್ಷ ಕಂಡಿರುವ ಸೋಲು ದೊಡ್ಡ ನಿರಾಸೆ ಮೂಡಿಸಿದ್ದರೆ, ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಸೋಲಿನಿಂದ ತಮ್ಮ ಕುರ್ಚಿ ಬಲಪಡಿಸಿಕೊಂಡಿದ್ದಾರೆ.

ಹಾಗೇನಾದರೂ ಕಾಂಗ್ರೆಸ್‌ ನೇತೃತ್ವದ ಮಹಾಘಟಬಂದನ್‌ ಬಿಹಾರದಲ್ಲಿ ಅಧಿಕಾರಕ್ಕೆ ಏರಿದ್ದರೆ ಅಥವಾ ಉತ್ತಮ ಪ್ರದರ್ಶನ ತೋರಿದ್ದರೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಮಾಡುವ ನಿಟ್ಟಿನಲ್ಲಿ ಒಲವು ತೋರುತ್ತಿತ್ತು. ಆದರೆ, ಬಿಹಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದುಳಿದ ವರ್ಗಗಳ ಮತಗಳು ಕಾಂಗ್ರೆಸ್‌ಗೆ ಕೈಕೊಟ್ಟಿವೆ. ಆದ್ದರಿಂದಾಗಿ ಕರ್ನಾಟಕದ ಅಹಿಂದ ನಾಯಕ ಸಿದ್ದರಾಮಯ್ಯ ಅವರ ಕುರ್ಚಿ ತಂಟೆಗೆ ಹೋಗದಿರಲು ಕಾಂಗ್ರೆಸ್‌ ನಿರ್ಧಾರ ಮಾಡಲಿದೆ. ಹಾಗೇನಾದರೂ ಸಿದ್ದರಾಮಯ್ಯ ಅವರನ್ನು ಇಳಿಸಿ ಡಿಕೆ ಶಿವಕುಮಾರ್‌ಗೆ ಪಟ್ಟ ಕಟ್ಟಿದರೆ ಅಹಿಂದ ಮತಗಳು ತಪ್ಪಿಹೋಗಬಹುದು ಎನ್ನುವ ಆತಂಕ ಕಾಂಗ್ರೆಸ್‌ಗೆ ಈಗಲೇ ಶುರುವಾಗಿದೆ.

ಇದೇ ವಿಚಾರ ಇಟ್ಟುಕೊಂಡು ರಾಜ್ಯದ ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ಶುಭಾಶಯ ಕೂಡ ಹೇಳಿದ್ದಾರೆ. ಬಿಹಾರ ಚುನಾವಣೆ ಕರ್ನಾಟಕದ ಮೇಲೆ ಪ್ರಭಾವದ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್‌.ಅಶೋಕ್‌. 'ಮೂರು ದಿನಕ್ಕೆ ಹಾಲು ತುಪ್ಪ. ದೆಹಲಿಯ ಕಾಂಗ್ರೆಸ್ ನಾಯಕರಿಗೆ ಹಾಲು, ಸಿದ್ದರಾಮಯ್ಯಗೆ ತುಪ್ಪ. ಬಿಹಾರ ಚುನಾವಣೆ ಗೆದ್ದರೆ ಡಿಕೆಶಿ ನಮಗೆ ವರ ಅಂತ ಹೇಳಿದ್ದರು. ಕಾಂಗ್ರೆಸ್ ಪಕ್ಷದ ನಾಯಕ ವೀಕ್ ಆದ್ರೆ, ಇಲ್ಲಿ ಸಿದ್ದರಾಮಯ್ಯ ಸ್ಟ್ರಾಂಗ್ ಆಗುತ್ತಾರೆ. ಸಿದ್ದರಾಮಯ್ಯ ದೇಶದ ಎಲ್ಲಾ ಪಕ್ಷದಲ್ಲಿ ಇದ್ದವರು. ಜೆಡಿಯು, ಜೆಡಿಎಸ್, ಕಾಂಗ್ರೆಸ್, ಎಡಪಕ್ಷ ಎಲ್ಲದರಲ್ಲೂ ಇದ್ದರು. ರಾಹುಲ್ ಗಾಂಧಿಗೆ ಪುಂಗಿ ಊದಿ ಸಿದ್ದರಾಮಯ್ಯ ಆಡಿಸುತ್ತಾರೆ' ಎಂದಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಭ್ರಮ, ಲೇವಡಿ ಮಾಡಿದ ನಿಖಿಲ್‌ ಕುಮಾರಸ್ವಾಮಿ

ಇನ್ನು ಕರ್ನಾಟಕ ಕಾಂಗ್ರೆಸ್‌ಅನ್ನು ಲೇವಡಿ ಮಾಡಿರುವ ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ, 'ಅಚ್ಚರಿಯ ವಿಚಾರ ಏನೆಂದರೆ, ಬಿಹಾರದಲ್ಲಿ ಎನ್‌ಡಿಎಯ ಅದ್ಭುತ ಗೆಲುವಿನ ದೊಡ್ಡ ಸಂಭ್ರಮ ಪಾಟ್ನಾದಲ್ಲಿ ನಡೆದಿಲ್ಲ. ಕರ್ನಾಟಕ ಕಾಂಗ್ರೆಸ್‌ನ ಒಳಗೊಳಗೆ ಇದರ ಭರ್ಜರಿ ಸಂಭ್ರಮ ನಡೆದಿದೆ.

ಕೆಲವರು ನವೆಂಬರ್‌ನಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ಸಜ್ಜಾಗಿದ್ದರು... ಹೊಸ ಉಡುಗೆ ಹೊಲಿಸಲಾಗಿತ್ತು, ಫೋಟೋಗ್ರಾಫರ್‌ಗೆ ಅಲರ್ಟ್‌ ಕೂಡ ನೀಡಲಾಗಿತ್ತು. ಪ್ರಮಾಣವಚನದ ಮಾತುಗಳನ್ನು ಪದೇ ಪದೇ ಪ್ರ್ಯಾಕ್ಟೀಸ್‌ ಮಾಡಲಾಹುತ್ತಿತ್ತು. ಆದರೆ ನಾನು ತಿಂಗಳ ಹಿಂದೆ ಹೇಳಿದಂತೆ ಇದು ಡಿಸಿಎಂಗೆ ನೋ ಚೇರ್‌ ನವೆಂಬರ್‌.

ಈಗ ಪ್ರಮಾಣವಚನ ಸ್ವೀಕಾರದ ಬಟ್ಟೆಗಳು ಮತ್ತೆ ಕಪಾಟು ಸೇರಿಕೊಳ್ಳಲಿದೆ, ಸರ್ಕಾರ ನಾಟಕದ ಬದಲು ಕರ್ನಾಟಕ ಅಭಿವೃದ್ಧಿಯನ್ನು ನೀಡಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.