ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ದೆಹಲಿ ಬಾಂಬ್ ಸ್ಫೋಟದ ಹಿಂದೆ ಬಿಹಾರ ಚುನಾವಣೆ ಗೆಲ್ಲುವ ರಾಜಕೀಯ ಉದ್ದೇಶವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ (ನ.12): ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಬೇಜವಾಬ್ದಾರಿಯ ಮಾತನ್ನಾಡ್ಡಿದ್ದಾರೆ. ಬಿಹಾರ ಚುನಾವಣೆ ಗೆಲ್ಲೋದು ಕಷ್ಟ ಎನ್ನುವ ಕಾರಣಕ್ಕೆ ದೆಹಲಿ ಬಾಂಬ್ ಸ್ಫೋಟ ಘಟನೆ ನಡೆದಿದೆ ಎನ್ನುವ ಬಗ್ಗೆ ನನಗೆ ಅನುಮಾನ ಇದೆ ಎಂದು ಹೇಳಿದ್ದಾರೆ. ಕೊಪ್ಪಳದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಈ ಮಾತನ್ನಾಡಿದ್ದಾರೆ. ನನಗೆ ಒಂದು ಅನುಮಾನ ಇದೆ. ಮೊದಲ ಹಂತದ ಚುನಾವಣೆಯಲ್ಲಿ ಗೆಲುವು ಅನುಮಾನ ಎಂದು ಎರಡನೇ ಹಂತದಲ್ಲಿ ಈ ಕೃತ್ಯ ಮಾಡಿರಬಹುದು ಎಂದಿದ್ದಾರೆ.
ಬಿಜೆಪಿ ಅವರು ಅಧಿಕಾರಕ್ಕಾಗಿ ಏನು ಬೇಕಾದರೆ ಬಳಸಿಕೊಳ್ಳುತ್ತಾರೆ. ಏನು ಬೇಕಾದರೂ ಮಾಡುತ್ತಾರೆ ಬಿಜೆಪಿ ಪ್ರಧಾನಮಂತ್ರಿ ಹೇಳುವಷ್ಟು ಸ್ವಚ್ಛ ಇಲ್ಲ ಎಂದ ರಾಯರೆಡ್ಡಿ ನಾನು ಕೈವಾಡ ಇದೆ ಅಂತ ಹೇಳಲ್ಲ. ಏಕೆಂದರೆ, ನನ್ನ ಬಳಿ ಪ್ರೂಪ್ ಇಲ್ಲ ನನಗೆ ಅನುಮಾನವಷ್ಟೇ ಇರೋದು. ನೈತಿಕತೆ ಇದ್ದರೆ ಅಮಿತ್ ಶಾ ರಾಜೀನಾಮೆ ನೀಡಲಿ. ಮೋದಿ ದೇಶದ ಜನರ ಬಳಿ ಕ್ಷಮೆ ಕೇಳಲಿ. ದೆಹಲಿಯಲ್ಲಿ ನಡೆದ ಕೃತ್ಯವನ್ನ ಖಂಡಿಸುತ್ತೇನೆ. ಅದು ಒಂದು ಹೀನ ಕೃತ್ಯ. ಅವನೊಬ್ಬ ವಿದ್ಯಾವಂತ, ಅವನೊಬ್ಬ ಡಾಕ್ಟರ್ ಆಗಿ ಇಂತ ಹೀನ ಕೃತ್ಯ ಮಾಡುತ್ತಾನೆ ಅನ್ನೋದು ಅವಮಾನ. ಪಾಕಿಸ್ತಾನದ ಸಂಘಟನೆಗಳ ಜೊತೆ ಸಂಬಂದ ಇದೆ ಅಂತ ತಿಳಿದು ಬಂದಿದೆ. ಕೇಂದ್ರ ಸರ್ಕಾರ ಇಂತಹ ಘಟನೆ ನಡೆದಾಗ ಉಗ್ರರನ್ನ ಹಿಡಿದು ಹಾಕುತ್ತೇವೆ ಅಂತಾರೆ. ಇಂತಹ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಒಂದಾಗಿ ಹೋಗಬೇಕಿದೆ ಎಂದಿದಗದಾರೆ.
ನಮ್ಮ ಖರ್ಗೆ ಸರ್ ಕೂಡಾ ಹೇಳಿದ್ದಾರೆ. ದೆಹಲಿಯಲ್ಲಿ ಇಂತಹ ಚಟುವಟಿಕೆ ನಡೆಯುತ್ತದೆ ಅನ್ನೋದಾರೆ ಇಂಟಲಿಜೆನ್ಸ್ ಏನ್ ಮಾಡ್ತಿದೆ ಅಂತಾ. ಅಲ್ಲಿ ಕೇಂದ್ರ ಸರ್ಕಾರದ ಇಂಟೆಲಿಜೆನ್ಸಿ ವಿಫಲವಾಗಿದೆ. ಸ್ಪೋಟಗೊಂಡ ಕಾರನ್ನ ಬೆಳಿಗ್ಗೆಯಿಂದ ವಾಚ್ ಮಾಡುತ್ತಿದ್ದೆವು ಅಂತಾ ಹೇಳಿದ್ದಾರೆ. ಆದರೂ ಯಾಕೆ ಸ್ಪೋಟ ಆಗಿದೆ, ಹೀಗೆಲ್ಲ ಆಗಬೇಕಾದರೆ ಯಾಕೆ ಈ ಡಿಪಾರ್ಟ್ಮೆಂಟ್ ಬೇಕು, ಅದನ್ನ ತೆಗೆದು ಹಾಕಿ. ರಾಜ್ಯದಲ್ಲಿ ಬಿಜೆಪಿ ನಾಯಕರು ಸಣ್ಣ ಸಣ್ಣ ಘಟನೆಗಳಿಗೆ ರಾಜೀನಾಮೆ ಕೇಳುತ್ತಾರೆ. ಇವತ್ತು ಯಾಕೆ ಕೇಳ್ತಾ ಇಲ್ಲ. ಇದು ಬಿಜೆಪಿಯ ದ್ವಿಮುಖ ನೀತಿ ಎಂದು ಹೇಳಿದ್ದಾರೆ.
ಅಮಿತ್ ಶಾ ಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು. ಮೋದಿಯವರು ದೇಶದ ಜನರಲ್ಲಿ ಕ್ಷಮೆ ಕೇಳಬೇಕು. ಪರಿಹಾರ ಕೊಟ್ಟರೆ ಜೀವ ಬರಲ್ಲ, ಇದರಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಆಗಿದೆ. ಕೇಂದ್ರ ಸರ್ಕಾರ ಪಾಕಿಸ್ತಾನವನ್ನ ಭಯೋತ್ಪಾದಕ ದೇಶ ಎಂದು ಘೋಷಣೆ ಮಾಡಿಸಲಿ. ಈ ಶಕ್ತಿ ಮೋದಿ ಅವರಿಗೆ ಇದ್ಯಾ?ಹುಡುಕಿ ಹೊಡಿತಿವಿ ಅಂತಿರಾ, ಈ ಕೆಲಸ ಮಾಡಿ, ದೇಶದ ಜನ ನಿಮ್ಮನ್ನ ಕ್ಷಮಿಸಲ್ಲ . ಹಿಂದೂ ಮುಸ್ಲಿಂ ಅಂತ ಹೋಗ್ತಾ ಇದ್ದಾರೆ. ದೇಶದಲ್ಲಿಯೇ ಭದ್ರತೆ ಇಲ್ಲ ಎಂದಿದ್ದಾರೆ.
ಸಚಿವ ಸ್ಥಾನ ಕೇಳಿದ್ದೀನಿ ಎಂದ ರಾಯರೆಡ್ಡಿ
ಸಿ ಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿಎಂ ಅವರು ದೆಹಲಿಗೆ ಹೋಗ್ತಿದ್ದು, ನನಗೂ ಬರೋಕೆ ಹೇಳಿದ್ದಾರೆ. ಅದು ಸಚಿವ ಸಂಪುಟ ಚರ್ಚೆಗೆ ಅಲ್ಲ. ಕಪಿಲ್ ಸಿಬಲ್ ಅವರು ಬುಕ್ ಬಿಡುಗಡೆಗೆ ಹೋಗುತ್ತಿದ್ದಾರೆ. ಮಂತ್ರಿಗಳನ್ನ ಮಾಡೋದು ಸಿಎಂ ಅವರ ಪರಮಾಧಿಕಾರ. ಸಚಿವರಾಗಲು, ಸಂವಿಧಾನದಲ್ಲಿ ಹಿರಿತನ ಕೌಶಲ್ಯ ಇದಕ್ಕೆಲ್ಲ ಅವಕಾಶ ಇಲ್ಲ. 26 ವರ್ಷ ವಯಸ್ಸಾದ್ರೆ ಆದ್ರೆ ಸಾಕು ಪಿಎಂ,ಸಿಎಂ ಆಗಬಹುದು. ಸಚಿವ ಸ್ಥಾನ ನಾನು ಕೇಳಿದ್ದಿನಿ. ನೋಡಿ ಸರ್ ಅಂತ ಹೇಳಿದ್ದೆನೆ ನೋಡೋಣ ಅಂತ ಹೇಳಿದ್ದಾರೆ. ನನ್ನ ಪ್ರಕಾರ ಸಿಎಂ ಬದಲಾವಣೆ ಇಲ್ಲ. ಮಾಧ್ಯಮಗಳು ಇದನ್ನ ಹೇಳುತ್ತಿವೆಯಷ್ಟೇ ಎಂದಿದ್ದಾರೆ.
ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಇದೆ. ಪಕ್ಷದ ಸಭೆಯಲ್ಲಿ ಕರೆದು ಕೇಳ್ತಾರೆ. ನಾವೆಲ್ಲ ಒಪ್ಪಿಗೆ ಕೊಟ್ಟರೆ ಮಾತ್ರ ಮಾಡುತ್ತಾರೆ. ಒಂದು ಬಾರಿ ಸಿಎಂ ಮಾಡಿದ್ರೆ 5 ವರ್ಷ ಅವರೆ ಸಿಎಂ. ಎಲ್ಲ ಕಾಲದಲ್ಲೂ ಶಾಸಕರ ಸಂಖ್ಯಾಬಲ ಮುಖ್ಯ ಅಲ್ಲ ಎಂದ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರಾಯರೆಡ್ಡಿ, ಡಿಕೆಶಿ ಅವರು ನಮ್ಮ ಪಕ್ಷದ ಅಧ್ಯಕ್ಷರು, ಅವರು ಹೇಳಿದ್ದರಲ್ಲಿ ಯಾವುದೆ ತಪ್ಪಿಲ್ಲ. ಬೇರೆಯವರದು ಗೊತ್ತಿಲ್ಲ ನಾನಂತೂ ಮಂತ್ರಿ ಆಗ್ತಿನೊ ಬಿಡ್ತಿನೋ ಗೊತ್ತಿಲ್ಲ ಸಿದ್ದರಾಮಯ್ಯಗೆ ಮತ ಹಾಕುತ್ತೇನೆ ಎಂದಿದ್ದಾರೆ.
