ನಿರೀಕ್ಷೆಗೂ ಮೀರಿದ ಸಾಧನೆ: ಮೊದಲ ಬಾರಿ ಜೆಡಿಯುವನ್ನು ಹಿಂದಿಕ್ಕಿದ ಬಿಜೆಪಿ!
ಮೊದಲ ಬಾರಿ ಜೆಡಿಯುವನ್ನು ಹಿಂದಿಕ್ಕಿದ ಬಿಜೆಪಿ| ಮಿತ್ರಪಕ್ಷಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ ಭಾಜಪ| ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ ಬಿಜೆಪಿ
ಪಟನಾ(ನ.11): 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮಿತ್ರ ಪಕ್ಷ ಜೆಡಿಯುವನ್ನು ಹಿಂದಿಕ್ಕಿರುವ ಬಿಜೆಪಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಬಿಹಾರದಲ್ಲಿ ಒಂದೂವರೆ ದಶಕದಿಂದ ಜೆಡಿಯು ಹೊಂದಿದ್ದ ಪ್ರಾಬಲ್ಯವನ್ನು ಬಿಜೆಪಿ ಮುರಿದಂತಾಗಿದೆ.
ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಯು ಎನ್‌ಡಿಎ ಮೈತ್ರಿಕೂಟ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ, ಬಿಹಾರದಲ್ಲಿ ಜೆಡಿಯು ನೇತೃತ್ವದಲ್ಲೇ ಎನ್‌ಡಿಎ ಚುನಾವಣೆ ಎದುರಿಸುತ್ತಾ ಬಂದಿತ್ತು. ನಿತೀಶ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿಕೊಂಡು ಬಂದಿತ್ತು.
ಆದರೆ ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ 2010ರಿಂದಲೇ ಹಂತಹಂತವಾಗಿ ಏರುತ್ತಲೇ ಬಂದಿತ್ತು. ಇದಕ್ಕೆ ಉದಾಹರಣೆ ಎಂದರೆ 2010ರಲ್ಲಿ ಬಿಜೆಪಿ 102 ಸ್ಥಾನದಲ್ಲಿ ಸ್ಪರ್ಧಿಸಿ 91 ಸ್ಥಾನ ಗೆದ್ದುಕೊಂಡಿತ್ತು. ಆದರೆ 2015ರ ಚುನಾವಣೆ ವೇಳೆ ಬಿಜೆಪಿ ಮತ್ತು ಜೆಡಿಯು ವಿರುದ್ಧ ಬಣದಲ್ಲಿದ್ದವು. ಹೀಗಾಗಿ ಬಿಜೆಪಿ 153 ಸ್ಥಾನಗಳಲ್ಲಿ ಸ್ಪರ್ಧಿಸಿ 53 ಸ್ಥಾನ ಗೆದ್ದುಕೊಂಡಿತ್ತು. ಆದರೆ ಪ್ರಸಕ್ತ ಚುನಾವಣೆಯಲ್ಲಿ ರಾಜ್ಯದಲ್ಲಿನ 243 ಸ್ಥಾನಗಳ ಪೈಕಿ ಬಿಜೆಪಿ 121ರಲ್ಲಿ ಮತ್ತು ಜೆಡಿಯು 122ರಲ್ಲಿ ಸ್ಪರ್ಧಿಸಿದ್ದವು. ಇದೀಗ ಜೆಡಿಯುಗಿಂತ ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸಿದ್ದರೂ, ಜೆಡಿಯುಗಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.
ವರ್ಷ- ಜೆಡಿಯು- ಬಿಜೆಪಿ
2010- 115- 91
2015- 71- 53
2020- 43-74
ಮಹಾರಾಷ್ಟ್ರದಲ್ಲೂ ಇದೇ ಸ್ಥಿತಿ:
ಮಹಾರಾಷ್ಟ್ರದಲ್ಲೂ ದಶಕಗಳಿಂದ ಶಿವಸೇನೆ ಜೊತೆಗೂಡಿ ಕಣಕ್ಕೆ ಇಳಿಯುತ್ತಿದ್ದ ಬಿಜೆಪಿ, ಪ್ರತಿ ಚುನಾವಣೆಯಲ್ಲೂ ತನ್ನ ಬಲವನ್ನು ಏರಿಸಿಕೊಳ್ಳುತ್ತಾ ಬರುತ್ತಿದ್ದು, ಕಳೆದ 2 ವಿಧಾನಸಭಾ ಚುನಾವಣೆಗಳಲ್ಲೂ ಶಿವಸೇನೆಗಿಂತ ಹೆಚ್ಚು ಸ್ಥಾನ ಗೆದ್ದುಕೊಂಡಿತ್ತು. ಆದರೆ ಸಿಎಂ ಸ್ಥಾನ ಹಂಚಿಕೆ ಮತ್ತಿತರೆ ವಿವಾದಗಳಿಂದಾಗಿ ಶಿವಸೇನೆ ಪಕ್ಷವು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೂಡಿ ಕಳೆದ ವರ್ಷ ಸರ್ಕಾರ ರಚಿಸಿದೆ.