ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಇದೀಗ ಹಲವು ವಿಪಕ್ಷಗಳು ಕಾಂಗ್ರೆಸ್ ಕೈಹಿಡಿಯುತ್ತಿದೆ. ಇಷ್ಟು ದಿನ ಕಾಂಗ್ರೆಸ್ ಹೊರಗಿಟ್ಟು ಒಕ್ಕೂಟ ರಚಿಸಲು ಮುಂದಾಗಿದ್ದ ವಿಪಕ್ಷಗಳು ಇದೀಗ ಕಾಂಗ್ರೆಸ್ ನಾಯಕತ್ವದಲ್ಲಿ ಮುಂದುವರಿಯಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ರಾಹುಲ್ ಗಾಂಧಿ ಹಾಗೂ ಖರ್ಗೆ ಭೇಟಿಯಾಗಿದ್ದಾರೆ.
ನವದೆಹಲಿ(ಮೇ.22): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಮೂಲಕ ಸರ್ಕಾರ ರಚಿಸಿದೆ. ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಇದೀಗ ವಿಪಕ್ಷಗಳ ಒಕ್ಕೂಟ 2024ರ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದೆ. ಇಷ್ಟು ದಿನ ಕಾಂಗ್ರೆಸ್ ಹೊರಗಿಟ್ಟು ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ಹಲವು ಪಕ್ಷಗಳು ಇದೀಗ ಕಾಂಗ್ರೆಸ್ ನೇತೃತ್ವದಲ್ಲಿ ಮುನ್ನಡೆಯುವ ಸೂಚನೆ ನೀಡಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ 10 ಮಾರ್ಗ್‌ನಲ್ಲಿರುವ ಮನೆಯಲ್ಲಿ ಈ ಮಹತ್ವದ ಮಾತುಕತೆ ನಡೆಸಿದೆ. 2014ರ ಲೋಕಸಭಾ ಚುನಾವಣೆಗೆ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಲು ಚರ್ಚೆ ನಡೆಯುತ್ತಿದೆ. ಅಧಿಕಾರ ಹಂಚಿಕೆ, ಮುಂದಾಳತ್ವ, ನಾಯಕತ್ವ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ. ದೆಹಲಿಯಲ್ಲಿ ಆಪ್ ಅಧಿಕಾರ ಮೊಟಕುಗೊಳಿಸುವ ಕೇಂದ್ರದ ಪ್ರಯತ್ನ ವಿರುದ್ಧ ಕಿಡಿ ಕಾರಿರುವ ನಿತೀಶ್ ಕುಮಾರ್, ಎಲ್ಲಾ ಸಮಸ್ಯೆಗಳಿಗೆ 2024ರ ಲೋಕಸಭಾ ಚುನಾವಣೆಯೆ ಉತ್ತರ ಎಂದಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪ್ಲಾನ್, ಕೇಜ್ರಿವಾಲ್ ಭೇಟಿಯಾದ ನಿತೀಶ್!
ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿತೀಶ್ ಕುಮಾರ್ ಬಳಿಕ ನೇರವಾಗಿ ದೆಹಲಿಗೆ ತೆರಳಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಕೇಂದ್ರ ಸರ್ಕಾರದ ಜತೆ ದಿಲ್ಲಿಯಲ್ಲಿನ ಅಧಿಕಾರ ಹಂಚಿಕೆ ಕುರಿತಂತೆ ಸಂಘರ್ಷದಲ್ಲಿ ತೊಡಗಿರುವ ಆಪ್ ನೇತಾರ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ದಿಲ್ಲಿ ಸರ್ಕಾರದಿಂದ ಅಧಿಕಾರ ಕಿತ್ತುಕೊಳ್ಳುವ ಕೇಂದ್ರದ ಸುಗ್ರೀವಾಜ್ಞೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದು, ಎಲ್ಲ ವಿಪಕ್ಷಗಳು ಒಂದಾದರೆ ಸುಗ್ರೀವಾಜ್ಞೆಯನ್ನು ರಾಜ್ಯಸಭೆಯಲ್ಲಿ ಸೋಲಿಸಬಹುದು ಎಂದಿದ್ದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಕೇಜ್ರಿವಾಲ್, ‘ಎಲ್ಲ ಪ್ರತಿಪಕ್ಷಗಳೂ ರಾಜ್ಯಸಭೆಯಲ್ಲಿ ಒಂದಾದರೆ ಅದಕ್ಕೆ ಸೋಲಾಗಲಿದೆ ಎಂದು ನಾನೂ ನಿತೀಶ್ ಅವರಿಗೆ ಹೇಳಿದೆ. ಏಕೆಂದರೆ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲ. ಸುಗ್ರೀವಾಜ್ಞೆಗೆ ರಾಜ್ಯಸಭೆಯಲ್ಲಿ ಸೋಲಾದರೆ 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುವ ಸೆಮಿಫೈನಲ್ ಪಂದ್ಯದ ಇದಾಗಲಿದೆ. ಫೈನಲ್‌ನಲ್ಲೂ (ಲೋಕಸಭೆ ಚುನಾವಣೆ) ಬಿಜೆಪಿ ಸೋಲಲಿದೆ ಎಂಬ ಸಂದೇಶ ಸಾರಲಿದೆ’ ಎಂದರು.
ಬಾಬಾ ಬಾಗೇಶ್ವರ್ ಹಿಂದೂ ರಾಷ್ಟ್ರ ಹೇಳಿಕೆಗೆ ಬಿಹಾರ ಸಿಎಂ ಗರಂ!
ಇತ್ತೀಚೆಗೆ ಸುಪ್ರೀಂ ಕೋರ್ಟು ದಿಲ್ಲಿ ಸರ್ಕಾರ ಹಾಗೂ ಕೇಂದ್ರದ ಅಧೀನದ ಉಪರಾಜ್ಯಪಾಲರ ನಡುವೆ ಅಧಿಕಾರ ಹಂಚಿ ಆದೇಶ ಹೊರಡಿಸಿತ್ತು. ಈ ಆದೇಶವು ದಿಲ್ಲಿ ಆಡಳಿತದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದ ಆಪ್‌ಗೆ ಬಲ ನೀಡಿದ್ದರೆ, ಉಪರಾಜ್ಯಪಾಲರಿಗೆ ಭಾರಿ ಹಿನ್ನಡೆಯಾಗಿತ್ತು. ಆದರೆ ಆದೇಶ ಬಂದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ, ದಿಲ್ಲಿ ಆಡಳಿತದಲ್ಲಿ ತನ್ನ ಮಾತೇ ನಡೆಯುವಂತೆ ನೋಡಿಕೊಂಡಿತ್ತು.
