ಬಿಹಾರದಲ್ಲಿ ವೋಟರ್ ಮಾಂಗೆ ಮೋರ್: ನಿತೀಶ್ ಕುಮಾರ್ ಎದುರು ದೊಡ್ಡ ಸವಾಲ್
15 ವರ್ಷ ಬಿಹಾರವನ್ನು ಆಳಿ ಜಂಗಲ್ ರಾಜ್ ಇಮೇಜ್ ಹೋಗಲಾಡಿಸಿದ, 5 ವರ್ಷದ ಹಿಂದೆಯಷ್ಟೇ ಮೋದಿಗೆ ಪರ್ಯಾಯ ಅನ್ನಿಸಿಕೊಂಡಿದ್ದ ನಿತೀಶ್ ಕುಮಾರ್ ಈಗ ಅಕ್ಷರಶಃ ಅದೇ ಮೋದಿ ಗೆಲ್ಲಿಸಿದರೆ ಮಾತ್ರ ಗೆದ್ದೇನು ಎಂಬ ಸ್ಥಿತಿಗೆ ತಲುಪಿದ್ದಾರೆ.
ಬೆಂಗಳೂರು (ಅ. 30): ಪರಿಸ್ಥಿತಿಯ ವಿಪರ್ಯಾಸ ನೋಡಿ. 15 ವರ್ಷ ಬಿಹಾರವನ್ನು ಆಳಿ ಜಂಗಲ್ ರಾಜ್ ಇಮೇಜ್ ಹೋಗಲಾಡಿಸಿದ, 5 ವರ್ಷದ ಹಿಂದೆಯಷ್ಟೇ ಮೋದಿಗೆ ಪರ್ಯಾಯ ಅನ್ನಿಸಿಕೊಂಡಿದ್ದ ನಿತೀಶ್ ಕುಮಾರ್ ಈಗ ಅಕ್ಷರಶಃ ಅದೇ ನರೇಂದ್ರ ಮೋದಿ ಗೆಲ್ಲಿಸಿದರೆ ಮಾತ್ರ ಗೆದ್ದೇನು ಎಂಬ ಸ್ಥಿತಿಗೆ ಬಂದು ತಲುಪಿದ್ದಾರೆ.
ಕಳೆದ 3 ಚುನಾವಣೆಯಲ್ಲಿ 15 ವರ್ಷ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ನಿತೀಶ್ ಈಗ ಅದೇ ಬಿಹಾರಿಗಳಿಗೆ ಬೇಡವಾದಂತೆ ಕಾಣುತ್ತಿದ್ದಾರೆ. ಒಂದೂವರೆ ದಶಕ ಸ್ಪರ್ಧಿಸಿದ 100ರಲ್ಲಿ 70ರಿಂದ 80 ಸ್ಥಾನಗಳನ್ನು ಗೆಲ್ಲುತ್ತಿದ್ದ ನಿತೀಶ್ ಈ ಬಾರಿ 50 ದಾಟುವುದಕ್ಕೆ ಏಗುತ್ತಿದ್ದಾರೆ.
ಬಿಹಾರದಲ್ಲಿ ಮೊದಲ ಬಾರಿ ನಿತೀಶ್‌ಗಿಂತ ಮೋದಿ ಜನಪ್ರಿಯತೆ ಹೆಚ್ಚಿರುವಂತೆ ಕಾಣುತ್ತಿದೆ. ಆ ಕಾರಣದಿಂದ ಬಿಜೆಪಿ 80ರ ಆಸುಪಾಸು ಬಂದರೆ ನಿತೀಶ್ ಬಚಾವು. ಇಲ್ಲದಿದ್ದರೆ ಕಷ್ಟಎಂಬ ಸ್ಥಿತಿಯಂತೂ ಕಾಣುತ್ತಿದೆ. ಮತದಾರನ ಮನಸ್ಥಿತಿಯೇ ಪ್ರಜಾಪ್ರಭುತ್ವದ ಜೀವಾಳ. ಒಮ್ಮೆ ತಲೆ ಮೇಲೆ ಹೊತ್ತೊಯ್ಯುವರು, ಇನ್ನೊಮ್ಮೆ ಬೀಳಿಸಿ ಮನೆಗಟ್ಟುವರು. ಬಿಹಾರಿಗಳನ್ನು ನಿತೀಶ್ ಟೇಕನ್ ಫಾರ್ ಗ್ರಾಂಟೆಡ್ ಮಾಡಿಕೊಂಡಿದ್ದು ತಪ್ಪಿಗೆ ಕಾರಣ ಅನಿಸುತ್ತದೆ.
ಈಗಿನ ಯುವಜನತೆ 'ಕೇಸರಿ'ಯತ್ತ ವಾಲುತ್ತಿರುವುದೇಕೆ?
ಈಗ ವೋಟರ್ ಮಾಂಗೆ ಮೋರ್
ಚುನಾವಣೆಯಿಂದ ಚುನಾವಣೆಗೆ ಮತದಾರ ಬೇರೆಯೇ ಬಯಸುತ್ತಾನೆ. ಒಂದೇ ವಿಷಯದ ಮೇಲೆ ಪ್ರತಿ ಬಾರಿ ವೋಟ್ ಕೊಡೋದಿಲ್ಲ. ಜಂಗಲ್ ರಾಜ್ ಇದ್ದ ಬಿಹಾರದಲ್ಲಿ ರಸ್ತೆ, ವಿದ್ಯುಚ್ಛಕ್ತಿ ಮತ್ತು ಕಾನೂನು ಸುವ್ಯವಸ್ಥೆ ಕ್ಷೇತ್ರದಲ್ಲಿ ನಿತೀಶ್ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗಾಗಿ ಒಂದು ಮಹತ್ವಾಕಾಂಕ್ಷಿ ಸಮೂಹ ಸೃಷ್ಟಿಯಾಗಿದೆ. ಆ ಸಮೂಹಕ್ಕೀಗ ಕೈಯಲ್ಲಿ ದುಡ್ಡು ಬೇಕು. ಅದಕ್ಕಾಗಿ ಉದ್ಯೋಗ ಬೇಕು. ಮುಂಬೈ, ದಿಲ್ಲಿ, ಬೆಂಗಳೂರು ಉದ್ದಿಮೆಗಳು ಬಿಹಾರಕ್ಕೆ ಬರಬೇಕು. ಆದರೆ ಕಳೆದ 5 ವರ್ಷಗಳಲ್ಲಿ ನಿತೀಶ್‌ಗೆ ಇದನ್ನು ಮಾಡಲು ಸಾಧ್ಯವಾಗುತ್ತಿಲ್ಲ.
15 ವರ್ಷ ಲಾಲು ಪ್ರಸಾದ್‌ರ ಅತ್ಯಂತ ಕೆಟ್ಟಆಡಳಿತ ನೋಡಿರದ ಯುವ ಮತದಾರ 10 ಲಕ್ಷ$ಉದ್ಯೋಗ ಕೊಡುತ್ತೇನೆ ಎಂದ ತಕ್ಷಣ ತೇಜಸ್ವಿ ಯಾದವ್‌ರ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಹೊಸದನ್ನು ಬಯಸುವ ಮತದಾರನ ಮನಸ್ಥಿತಿ ಅರಿತೇ ಮೋದಿ ಒಮ್ಮೆ ಹಿಂದುತ್ವ, ಇನ್ನೊಮ್ಮೆ ವಿಕಾಸ, ಮಗದೊಮ್ಮೆ ಪಾಕಿಸ್ತಾನ ಎನ್ನುತ್ತಾ ಚುನಾವಣೆಗೆ ಧುಮುಕುತ್ತಾರೆ. ತೋರಿಸಿದ ರಸ್ತೆಗಳನ್ನೇ ಪುನಃ ಪುನಃ ತೋರಿಸಿ ವೋಟು ಕೇಳುತ್ತಿರುವ 69 ವರ್ಷದ ನಿತೀಶ್‌ರನ್ನು ಯುವ ಮತದಾರ ಇಷ್ಟಪಡುತ್ತಿಲ್ಲ ಎನ್ನುವುದು ವಾಸ್ತವ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
'ಇಂಡಿಯಾ ಗೇಟ್' ದೆಹಲಿಯಿಂದ ಕಂಡ ರಾಜಕಾರಣ