ಬಿಹಾರ ಚುನಾವಣೆ 2020: ಜಾತಿ ಕಾರಣಗಳು ಏನೇನು?
ಬಿಹಾರದಲ್ಲಿ ಕಳೆದ ಬಾರಿಯ ತಿಕ್ಕಾಟದಿಂದ ಮೇಲ್ಜಾತಿಗಳು ದೂರವಾದರು. ಕೋರಿ, ಕುಶವಾಹ್‌ಗಳಿಗೆ ಈಗ ಸ್ಥಳೀಯವಾಗಿ ಕುರ್ಮಿಗಳ ಕಾಟ ಜಾಸ್ತಿಯಾಗಿದೆ. ಮುಸ್ಲಿಮರು ಪೂರ್ತಿ ದೂರ ಹೋಗಿದ್ದಾರೆ. ಪಾಸ್ವಾನರು ನಿತೀಶ್‌ರನ್ನು ಮೊದಲಿನಿಂದ ಇಷ್ಟಪಡೋದಿಲ್ಲ.
ಪಾಟ್ನಾ (ಅ. 30): ಬಿಹಾರದಲ್ಲಿ ಎರಡು ಬಾರಿ ಬಿಜೆಪಿ ಜೊತೆ, ಒಂದು ಬಾರಿ ಲಾಲುರನ್ನು ಹಿಂದೆ ಇಟ್ಟುಕೊಂಡು ಬಿಹಾರ ಗೆದ್ದ ನಿತೀಶ್ ಅವರ ಕುರ್ಮಿ ಜನಾಂಗದ ಮತಗಳು ಇರುವುದು ಕೇವಲ 4 ಪ್ರತಿಶತ. ಬಿಜೆಪಿ ಮತ್ತು ಲಾಲು ಮೇಲಿನ ಸಿಟ್ಟಿನ ಕಾರಣದಿಂದ 16 ಪ್ರತಿಶತ ಮೇಲ್ಜಾತಿಗಳು ಯಾದವರ ದಾದಾಗಿರಿಯಿಂದ ಬೇಸತ್ತ ಇತರ ಹಿಂದುಳಿದ ಕೋರಿ, ಕುಶವಾಹ್‌ಗಳು, ಜೊತೆಗೆ ಮಹಾದಲಿತರು, ಸ್ವಲ್ಪ ಮುಸ್ಲಿಮರು ನಿತೀಶ್ ಗೆಲುವಿಗೆ ಕಾರಣರಾಗಿದ್ದರು.
ಆದರೆ ಮೋದಿ ಜೊತೆಗಿನ ಕಳೆದ ಬಾರಿಯ ತಿಕ್ಕಾಟದಿಂದ ಮೇಲ್ಜಾತಿಗಳು ದೂರವಾದರು. ಕೋರಿ, ಕುಶವಾಹ್‌ಗಳಿಗೆ ಈಗ ಸ್ಥಳೀಯವಾಗಿ ಕುರ್ಮಿಗಳ ಕಾಟ ಜಾಸ್ತಿಯಾಗಿದೆ. ಮುಸ್ಲಿಮರು ಪೂರ್ತಿ ದೂರ ಹೋಗಿದ್ದಾರೆ. ಪಾಸ್ವಾನರು ನಿತೀಶ್‌ರನ್ನು ಮೊದಲಿನಿಂದ ಇಷ್ಟಪಡೋದಿಲ್ಲ. ಮಹಾದಲಿತರು ಸ್ವಲ್ಪ ಜೊತೆಗೆ ಇದ್ದಾರಾದರೂ ಅಷ್ಟುಮಾತ್ರ ವೋಟಿನಿಂದ ಸೀಟು ಗೆಲ್ಲೋದು ಕಠಿಣ ಆಗುತ್ತಿದೆ.
ಬಿಹಾರದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಆಗುತ್ತಿರುವ ಹಿನ್ನಡೆಯೇನು?
ಒಂದು ಕಾಲದಲ್ಲಿ ಮಂಡಲ ಲಾಭಾರ್ಥಿ ಲಾಲು ವಿರುದ್ಧ ಬಿಜೆಪಿ ಮಂಡಲ ಪಾಲಿಟಿಕ್ಸ್‌ನ ಅಭಿವೃದ್ಧಿಯ ಮುಖವಾದ ನಿತೀಶ್‌ರನ್ನು ಬಳಸುತ್ತಿತ್ತು. ಆದರೆ ಈಗ ನಿತೀಶ್ ಕುರ್ಚಿ ಉಳಿಸಿಕೊಳ್ಳಲು ಬಿಜೆಪಿಯನ್ನು ಉಪಯೋಗಿಸುವ ಪರಿಸ್ಥಿತಿ ಬಂದಿದೆ. ನಿತೀಶ್‌ರ ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಪಕ್ಷ ಮತ್ತು ಚುನಾವಣೆ ನಡೆಸಬಲ್ಲ ಸಂಘಟನೆ ಇಲ್ಲ. ಒಂದು ವೇಳೆ ಮೇಲ್ಜಾತಿಗಳು ನಿತೀಶ್‌ಗೆ ಮತ ವರ್ಗಾಯಿಸಲಿಲ್ಲ ಎಂದರೆ ಬಿಹಾರ ಒಂದು ಮಗ್ಗಲು ಹೊರಳಿಸಲಿದೆ.
ಎಂವೈ ಅಲೆಯ ಮೇಲೆ ತೇಜಸ್ವಿ ದೋಣಿ
ಬಿಹಾರದ ಜನಸಾಮಾನ್ಯರಿಗೆ ಇರುವ ಸಾಮಾನ್ಯಜ್ಞಾನ ಅಪ್ರತಿಮ. ಬಿಹಾರದಲ್ಲಿ ಯಾರನ್ನೇ ಕೇಳಿ, ಒಂದು ರಾಜಕೀಯ ವಿಶ್ಲೇಷಣೆ ಮಾಡಿ ಕಳಿಸುತ್ತಾನೆ. ಜಾತಿ, ಪಾಲಿಟಿಕ್ಸ್ ಮತ್ತು ಸಿವಿಲ್ ಸವೀರ್‍ಸ್‌ನ ಬಗ್ಗೆ ಬಿಹಾರಿ ಯುವಕರು ಗಂಟೆಗಟ್ಟಲೆ ಮಾತನಾಡಬಲ್ಲರು.
ಇಂತಿಪ್ಪ ಬಿಹಾರದಲ್ಲಿ ಗುಜರಾತ್‌ನ ಕೆಎಚ್‌ಎಎಂ ರೀತಿ ಮುಸ್ಲಿಂ-ಯಾದವರ ‘ಎಂವೈ’ ಸಮೀಕರಣ ರಚಿಸಿ 15 ವರ್ಷ ಆಳಿದ ಲಾಲುರ ಕೆಟ್ಟಆಡಳಿತದ ವಿರುದ್ಧ ಮೇಲ್ಜಾತಿಗಳು, ಇತರ ಹಿಂದುಳಿದವರು, ಎಲ್ಲ ದಲಿತರು ಒಟ್ಟಾಗಿ ಬಂದಿದ್ದರಿಂದ ಯಾದವರ ಅಧಿಕಾರ ಹೋಗಿತ್ತು. ಈಗ ಲಾಲು ಪುತ್ರನ ಹಿಂದೆ ಪುನರಪಿ ಎಂವೈ ಗಟ್ಟಿಯಾಗಿ ಬರತೊಡಗಿದ್ದು, ಇತರ ಹಿಂದುಳಿದವರು ಕುತೂಹಲದಿಂದ ತೇಜಸ್ವಿ ಯಾದವ್ ಕಡೆಗೆ ನೋಡುತ್ತಿದ್ದಾರೆ. ಸಭೆಗೆ ಬಂದವರು ವೋಟು ಹಾಕಲೂ ಬಂದರೆ ಎಂವೈ ಮತ್ತೊಮ್ಮೆ ಮಜಬೂತ್ ಆಗಲಿದೆ. ಇವರ ಜೊತೆ ಹೋಗದಂತೆ ಇತರ ಹಿಂದುಳಿದವರನ್ನು ಮೋದಿ ತಡೆದರೆ ಮಾತ್ರ ಎನ್‌ಡಿಎ ವಾಪಸ್ ಬರಬಹುದು. ಅರ್ಥಾತ್ ಮೋದಿಯ ಪಕ್ಕಾ ಮತದಾರರು ನಿತೀಶ್‌ರ ಕೈ ಹಿಡಿಯಬೇಕು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ