Karnataka Politics: ಸಿದ್ದು ಕಣಕಣದಲ್ಲೂ ಮೋಸ: ಈಶ್ವರಪ್ಪ ಕಿಡಿ
* ಸಿದ್ದರಾಮಯ್ಯನಂತಹ ಮೋಸಗಾರ ಇನ್ನೊಬ್ಬ ಇಲ್ಲ
* ಕಾಂಗ್ರೆಸ್ಸಿನವರೇನು ಮಂಡಕ್ಕಿ ಹಂಚುತ್ತಿದ್ದಾರಾ: ಈಶ್ವರಪ್ಪ ವ್ಯಂಗ್ಯ
* ಚಿಮ್ಮನಕಟ್ಟಿ, ದೇವೇಗೌಡರಿಗೆ ಮೋಸ ಮಾಡಿದ ಸಿದ್ದರಾಮಯ್ಯ
ದಾವಣಗೆರೆ(ಡಿ.07): ಸಿದ್ದರಾಮಯ್ಯನಂತಹ (Siddaramaiah) ಮೋಸಗಾರ ಇನ್ನೊಬ್ಬ ಇಲ್ಲ. ಸಿದ್ದರಾಮಯ್ಯರ ಕಣಕಣದಲ್ಲೂ ಮೋಸ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರಿಗೆ (HD Devegowda) ಮೋಸ ಬಂದ ಸಿದ್ದರಾಮಯ್ಯ ಮತ್ತೆ ಯಾವುದೋ ಪಕ್ಷ ಕಟ್ಟಿ ಮೋಸ ಮಾಡಿ ಬಂದವರು. ವಿಪಕ್ಷ ಸ್ಥಾನ ಇಲ್ಲ ಅಂದರೆ ಕಾಂಗ್ರೆಸ್ಸಿನಲ್ಲೂ ಸಿದ್ದರಾಮಯ್ಯಗೆ ಸ್ಥಾನ ಇರಲ್ಲ ಎಂದರು.
ಕಾಂಗ್ರೆಸ್ ಪಕ್ಷವನ್ನು ಕಟ್ಟುವುದಕ್ಕೆ ಸಿದ್ದರಾಮಯ್ಯ ಬಂದಿಲ್ಲ. ಅಹಿಂದ (Ahinda) ಹೆಸರನ್ನು ಬಳಸಿ, ಮೋಸ ಮಾಡಲು ಬಂದಿದ್ದಾರೆ. ಚಿಮ್ಮನಕಟ್ಟಿಗೆ (Chimmanakatti) ಎಂಎಲ್‌ಸಿ ಮಾಡುತ್ತೇನೆಂದು ಬಾದಾಮಿ ಕ್ಷೇತ್ರವನ್ನು (Badami Constituency) ಕಸಿದುಕೊಂಡು ಮೋಸ ಮಾಡಿದ್ದು ಇದೇ ಸಿದ್ದರಾಮಯ್ಯ ಎಂದು ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿಕಣ್ಣೀರು ಹಾಕಿದ ಬಗ್ಗೆ ಈಶ್ವರಪ್ಪ ವಿಪಕ್ಷ ನಾಯಕನ ವಿರುದ್ಧ ವಾಗ್ದಾಳಿ ಮುಂದುವರಿಸಿದರು.
ಎಲ್ಲೋ ಇದ್ದಂತಹ ಸಿದ್ದರಾಮಯ್ಯಗೆ ಕಾಂಗ್ರೆಸ್ ಪಕ್ಷಕ್ಕೆ ತಂದ ಎಚ್.ಎಂ.ರೇವಣ್ಣ (HM Revanna), ಎಚ್.ವಿಶ್ವನಾಥ್ (H Vishwanath) ಗತಿ ಇಂದು ಏನಾಗಿದೆ? ಮುಂದೆ ಸಿದ್ದರಾಮಯ್ಯಗೆ ಚಾಮುಂಡಿನೂ (Chamundi) ಇಲ್ಲ, ಬಾದಾಮಿ ಕ್ಷೇತ್ರನೂ ಇರೊಲ್ಲ. ಚಾಮರಾಜಪೇಟೆಯಲ್ಲಿ ಜಮೀರ್ ಅಹಮ್ಮದ್ ಕಾಲು ಹಿಡಿಯಬೇಕಿದೆ. ಮುಸ್ಲಿಮರೇ (Muslims)ಸಿದ್ದರಾಮಯ್ಯಗೆ ಗತಿ. ಆದರೂ, ಸಿದ್ದರಾಮಯ್ಯಗೆ ಜನರು ಮಾತ್ರ ನಂಬುವುದಿಲ್ಲ ಎಂದು ಈಶ್ವರಪ್ಪ ಟಾಂಗ್ ನೀಡಿದರು.
ಕಾಂಗ್ರೆಸ್ಸಿನವರೇನು ಮಂಡಕ್ಕಿ ಹಂಚುತ್ತಿದ್ದಾರಾ: ಈಶ್ವರಪ್ಪ ವ್ಯಂಗ್ಯ
ದಾವಣಗೆರೆ: ಡಿ.ಕೆ.ಶಿವಕುಮಾರಗೆ ಬಿಜೆಪಿಗೆ ತಗೋಬೇಕಾ? ದೇವರು ಆ ಪರಿಸ್ಥಿತಿಯನ್ನು ತರಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆರೋಪಕ್ಕೆ ಟಾಂಗ್ ನೀಡಿದ್ದಾರೆ.
ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿ ಆದಾಗ ಬಂಡಲ್‌ಗಟ್ಟಲೇ ಹಣ, ನೋಟಿಸ್, ದಾಖಲೆಗಳು ಡಿ.ಕೆ. ಶಿವಕುಮಾರ ಮನೆ, ಕಚೇರಿ ಇತರೆಡೆ ಸಿಕ್ಕಿದ್ದವು. ಅದೆಲ್ಲವೂ ಅವ್ಯವಹಾರ ಮಾಡಿದ ಹಣ ಎಂದರು.
ಒಂದು ವೇಳೆ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬಂದರೆ ನಮ್ಮ ಪಕ್ಷದ ಯಾವ ನಾಯಕರೂ ಒಪ್ಪಲ್ಲ. ನಾವ್ಯಾರೂ ಅಂದು ಬಿಜೆಪಿಯಲ್ಲೂ ಇರುವುದಿಲ್ಲ ಎಂದು ‘‘ಬಿಜೆಪಿಗೆ ಸೇರದಿದ್ದುದಕ್ಕೆ ತಿಹಾರ ಜೈಲಿಗೆ ಕಳಿಸಿದರು’’ ಎಂಬ ಡಿ.ಕೆ.ಶಿವಕುಮಾರ್ ಅವರ ಆರೋಪದ ಕುರಿತು ಈಶ್ವರಪ್ಪ ಅಷ್ಟೇ ತೀಕ್ಷ$್ಣವಾಗಿ ಡಿಕೆಶಿಗೆ ತಿರುಗೇಟು ನೀಡಿದರು.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯವರು ಹಣ ಹಂಚುತ್ತಿದ್ದಾರೆಂದು ಆರೋಪಿಸುವ ಕಾಂಗ್ರೆಸ್ಸಿನವರೇನು ಮಂಡಕ್ಕಿ ಹಂಚುತ್ತಿದ್ದಾರಾ? ಬಿಜೆಪಿ ಸದಸ್ಯರು ಹುಲಿಗಳಿದ್ದಂತೆ. ಪಕ್ಷದ ತತ್ವ, ಸಿದ್ಧಾಂತಗಳನ್ನು ನಂಬಿ, ಬಿಜೆಪಿಗೆ ಮತ ನೀಡುತ್ತಾರೆ. 25 ಕ್ಷೇತ್ರಗಳ ಪೈಕಿ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಜಯ ದಾಖಲಿಸಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.