ಬೀದರ್ ಜಿಲ್ಲೆಗೆ 2 ಸಚಿವ ಸ್ಥಾನಗಳ ಸಾಧ್ಯತೆ: ಈಶ್ವರ ಖಂಡ್ರೆ, ರಹೀಮ್ಖಾನ್ಗೆ ಮಂತ್ರಿಗಿರಿ?
ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದಲ್ಲಿ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನದ ಸಾಧ್ಯತೆಗಳು ದಟ್ಟವಾಗಿದ್ದು, ಪ್ರಬಲ ಲಿಂಗಾಯತ ಸಮುದಾಯದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ರಹೀಮ್ಖಾನ್ ಇಬ್ಬರೂ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ಸೇರುವ ಸಾಧ್ಯತೆಗಳು ದಟ್ಟವಾಗಿವೆ.
ಬೀದರ್ (ಮೇ.20): ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದಲ್ಲಿ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನದ ಸಾಧ್ಯತೆಗಳು ದಟ್ಟವಾಗಿದ್ದು, ಪ್ರಬಲ ಲಿಂಗಾಯತ ಸಮುದಾಯದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ರಹೀಮ್ಖಾನ್ ಇಬ್ಬರೂ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ಸೇರುವ ಸಾಧ್ಯತೆಗಳು ದಟ್ಟವಾಗಿವೆ. ಕಳೆದ 2016ರಿಂದ 2018ರ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪೌರಾಡಳಿತ ಸಚಿವರಾಗಿದ್ದ ಈಶ್ವರ ಖಂಡ್ರೆ ಹಾಗೂ 2018ರಿಂದ 2019ರ ವರೆಗೆ ರಾಜ್ಯದ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಚಿವರಾಗಿದ್ದ ರಹೀಮ್ ಖಾನ್ ಇದೀಗ ಮತ್ತೊಂದು ಅವಧಿಯ ಸಚಿವ ಸ್ಥಾನ ಸಿಕ್ಕಲ್ಲಿ ಅಚ್ಚರಿಯಿಲ್ಲ.
ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆದಿದೆ. ಅಲ್ಲದೆ ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯ ಶಾಸಕರಿಗೇನೂ ಕಮ್ಮಿ ಇಲ್ಲ. ಅದಾಗ್ಯೂ ಭಾಲ್ಕಿ ಕ್ಷೇತ್ರಕ್ಕೆ 4 ಬಾರಿ ಶಾಸಕರಾಗಿ, ಸಿದ್ದರಾಮಯ್ಯ ಆಡಳಿತದಲ್ಲಿ ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಈಶ್ವರ ಖಂಡ್ರೆ ಈಗ ಕೆಪಿಸಿಸಿ ಕಾರ್ಯಾಧ್ಯರೂ ಅಲ್ಲದೆ, ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯವನ್ನೂ ಪ್ರತಿನಿಧಿಸುತ್ತಿರುವ ರಾಜಕಾರಣಿ. ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಶಾಸಕರನ್ನಾಗಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ ಎಂಬುವುದು ಸಿದ್ದು ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಸಮೀಪ ಕೊಂಡೊಯ್ಯಲಿದೆ.
ಕಾಂಗ್ರೆಸ್ ಗ್ಯಾರಂಟಿಯೇ ಕಮಲದ ಸೋಲಿಗೆ ಕಾರಣ: ಶಾಸಕ ಸುರೇಶ್ ಗೌಡ
ಇನ್ನು ರಹೀಮ್ಖಾನ್ ಕೂಡ ನಾಲ್ಕನೇ ಬಾರಿ ಶಾಸಕರಾದವರು. ಜಿಲ್ಲಾ ಕೇಂದ್ರ ಬೀದರ್ನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಛಾಪನ್ನು ಮೂಡಿಸುವದಲ್ಲದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 7 ಜಿಲ್ಲೆಗಳಲ್ಲಿ ಸತತ ನಾಲ್ಕು ಬಾರಿ ಗೆದ್ದಿರುವ ಹಾಲಿ ಕಾಂಗ್ರೆಸ್ ಶಾಸಕ ಹಾಗೂ 2018ರಿಂದ 2019ರವರೆಗೆ ರಾಜ್ಯದ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಚಿವರಾಗಿದ್ದು ಈ ಬಾರಿಯೂ ಸಚಿವ ಸ್ಥಾನದ ಸಮೀಪದಲ್ಲಿರುವುದಕ್ಕೆ ಕಾರಣ.
ಕೆಲಸ ಕಾರ್ಯಕ್ಕೆ ಶಾಸಕರ ಕಚೇರಿಗೆ ಅಲೆಯಬೇಕಿಲ್ಲ: ಶಾಸಕ ಟಿ.ಎಸ್. ಶ್ರೀವತ್ಸ
ಇನ್ನು ಶಾಸಕ ಈಶ್ವರ ಖಂಡ್ರೆ ಹಾಗೂ ರಹೀಮ್ ಖಾನ್ ಅವರನ್ನು ಸಚಿವರನ್ನಾಗಿಸುವಂತೆ ಜಿಲ್ಲೆಯ ವಿವಿಧ ಸಮುದಾಯಗಳ ಪ್ರಮುಖರು, ಸಮಾಜದ ಧಾರ್ಮಿಕ ಮುಖಂಡರುಗಳು ಆಗ್ರಹಿಸಿದ್ದಿದೆ ಅದಾಗ್ಯೂ ಕಲಬುರಗಿ ಜಿಲ್ಲೆಯಲ್ಲಿ ಕನಿಷ್ಠ ಮೂವರನ್ನು ಸಚಿವರನ್ನಾಗಿ ಮಾಡುವ ಅನಿವಾರ್ಯತೆಗೆ ನೂಕಲ್ಪಟ್ಟಿರುವ ಕಾಂಗ್ರೆಸ್ ಬೀದರ್‌ಗೆ ಸಮಾಧಾನಪಡಿಸುವ ತಂತ್ರಗಾರಿಕೆ ಅನುಸರಿಸಲೂಬಹುದು. ಆದರೆ, ಬೀದರ್ ಜಿಲ್ಲೆಯನ್ನು ಕಡೆಗೆಣಿಸಿದ್ದೆಯಾದಲ್ಲಿ ಬೀದರ್ ಅಭಿವೃದ್ಧಿ ಹಾಗೂ ಆಡಳಿತದ ಮೇಲಿನ ಹಿಡಿತ ತಪ್ಪೋದ್ರಲ್ಲಿ ಸಂದೇಹವಿಲ್ಲ. ಹೀಗಾಗಿ ಬೀದರ್ ಜಿಲ್ಲೆಗೆ ಸಧ್ಯದ ಮಟ್ಟಿಗೆ ಒಬ್ಬರನ್ನಾದರೂ ಸಚಿವರನ್ನಾಗಿ ಮಾಡುವುದು ಜರೂರಿಯಿದೆ.