ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ಗಾಗಿ ರೈತರ ಭೂಸ್ವಾಧೀನವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿ, ಅವರಿಗಾಗಿ ಖಾಲಿ ಕುರ್ಚಿ ಇಟ್ಟು ಕಾದರು. ರೈತರ ಭೂಮಿ ಉಳಿಸುವ ಹೋರಾಟವನ್ನು ಮುಂದುವರೆಸುವುದಾಗಿ ಅವರು ಭರವಸೆ.

ರಾಮನಗರ: ಬಿಡದಿ ಟೌನ್‌ಶಿಪ್‌ಗಾಗಿ ರೈತರ ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ(HD Kumaraswamy) ಅವರು, ಈ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರೈತರ ಸಮ್ಮುಖದಲ್ಲೇ ಬಹಿರಂಗ ಚರ್ಚೆಗೆ ಬರಲು ಸವಾಲು ಹಾಕಿದ್ದಾರೆ. ಈ ಹಿನ್ನೆಲೆ ಇಂದು ಭೈರಮಂಗಲದಲ್ಲಿ ಸಿಎಂ ಆಗಮನಕ್ಕಾಗಿ ಪಕ್ಕದಲ್ಲೇ ಒಂದು ಕುರ್ಚಿ ಮೀಸಲಿಟ್ಟು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾಯುತ್ತಾ ಸ್ಥಳೀಯ ರೈತರು ಹಾಗೂ ವಿವಿಧ ವರ್ಗದ ಜನರ ಅಹವಾಲು ಆಲಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೇಳೆ ಭಾಷಣ ಮಾಡಿದ ಕುಮಾರಸ್ವಾಮಿಯವರು, ನಾನು ಹುಟ್ಟಿದ್ದು ಹಾಸನದಲ್ಲಿ. ಆದರೆ ಇಲ್ಲಿನ ತಾಯಂದಿರು, ಸಹೋದರಿಯರು ರಾಜಕೀಯ ಜನ್ಮ ಕೊಟ್ಟಿದ್ದೀರಾ.. 2004ರ ಚುನಾವಣೆಯಲ್ಲೇ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಘೋಷಣೆ ಕೂಗುತ್ತಿದ್ದರು. ಆದರೆ ನಾನು ಅಧಿಕಾರಕ್ಕಾಗಿ ಸ್ಪರ್ಧಿಸಿಲ್ಲ ಎಂದು ಹೇಳಿದ್ದೆ. ಈ ಭಾಗದ ಜನ ಕಣ್ಣೀರು ಹಾಕದೇ ನೆಮ್ಮದಿಯಿಂದ ಬದುಕಬೇಕು ಎಂಬುದೇ ನನ್ನ ಗುರಿಯಾಗಿತ್ತು. ಮುಂದೆ ಕಾಂಗ್ರೆಸ್ ಜೆಡಿಎಸ್ ಸರ್ಕಾರ ರಚನೆ ಆಯ್ತು. ಅಲ್ಲಿನ ಕೆಲವು ಘಟನಾವಳಿಗಳಿಂದ ಮತ್ತೆ ಬಿಜೆಪಿ ಜೆಡಿಎಸ್ ಸರ್ಕಾರ ರಚನೆ ಆಯ್ತು. ಬಿಜೆಪಿ ನಾಯಕರ ಒತ್ತಡ ಹಾಗೂ ನಮ್ಮ ಶಾಸಕರ ಒತ್ತಡದಿಂದ ನಾನು ಮುಖ್ಯಮಂತ್ರಿ ಆಗಬೇಕಾಯ್ತು. ಈಗ ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ಮಂತ್ರಿ ಆಗಿದ್ದೇನೆ ಎಂದರು.

ಬಿಡದಿ ಟೌನ್‌ಶಿಪ್‌ ಯೋಜನೆ ಕುರಿತು ಕಿಡಿಕಾರಿದ ಅವರು,ನಾನು ಬೆಂಗಳೂರಿಗೆ ಬಂದಾಗ ಪ್ರತಿದಿನ ನೂರಾರು ಜನ ನಮ್ಮ ಮನೆ ಬಳಿ ಬರುತ್ತಾರೆ. ಅನೇಕ ಜನರು ಕೆಲಸ ಕೇಳಿಕೊಂಡು ಬಂದಿರುತ್ತಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಯಾರಿಗೂ ಪರ್ಮನೆಂಟ್ ಕೆಲಸ ಕೊಡುತ್ತಿಲ್ಲ. ಒಂದೆರಡು ವರ್ಷ ಔಟ್ ಸೋರ್ಸಿಂಗ್ ಅಂತ ದುಡಿಸಿಕೊಂಡು ನಂತರ ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ. ಅಂತಹ ಕಾರ್ಖಾನೆಗಳಿಗೆ ನಾವು ಭೂಮಿ ಕೊಡಬೇಕಾ? ಎಂದು ಪ್ರಶ್ನಿಸಿದರು,

ಬಿಡದಿ ಟೌನ್‌ಶಿಪ್ ನನ್ನ ಕನಸಿನ ಕೂಸು ಎಂದು ಹೇಳುವವರು ಒಂದು ಸತ್ಯ ತಿಳಿದುಕೊಳ್ಳಲಿ. ನಾನು ಬಯಸಿದ್ದರೆ ಆಗಲೇ ನೂರಾರು ಎಕರೆ ಭೂಮಿ ಪಡೆದು ರಿಯಲ್‌ ಎಸ್ಟೇಟ್ ಮಾಡಬಹುದಿತ್ತು. ಆದರೆ ರೈತರ ಬದುಕಿಗೆ ಧಕ್ಕೆ ತರುವ ಕೆಲಸ ನಾನು ಮಾಡಿಲ್ಲ ಎಂದು ಹೇಳಿದರು.

'ರೆಡ್‌ ಝೋನ್' ವಿವಾದ ಪ್ರಸ್ತಾಪಿಸಿದ ಕುಮಾರಸ್ವಾಮಿ, ರೆಡ್‌, ಗ್ರೀನ್‌, ಬ್ಲೂ, ಯೆಲ್ಲೋ ಝೋನ್‌ಗಳ ಬಗ್ಗೆ ನನಗಿಂತ ಈ ರಾಜ್ಯದ ಮುಖ್ಯಮಂತ್ರಿಗೆ ಹೆಚ್ಚು ಗೊತ್ತಿರಬೇಕು. ನನ್ನ ವಿರುದ್ಧ ಧಿಕ್ಕಾರ ಕೂಗಿಸುವ ಪ್ರಯತ್ನ ನಡೆಯುತ್ತಿದೆ. ನೈಸ್‌ ರಸ್ತೆ ವಿಚಾರದಲ್ಲಿ ಏನಾಯಿತು ಎಂಬುದು ಜನರಿಗೆ ಗೊತ್ತಿದೆ. ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಅಗತ್ಯವೇನು? ಎಂದು ಪ್ರಶ್ನಿಸಿದರು. ಇದೇ ವೇಳೆ ಬೆಂಗಳೂರು ಅಭಿವೃದ್ಧಿ ಕುರಿತು ಸರ್ಕಾರವನ್ನು ಟೀಕಿಸಿದ ಅವರು, ಬೆಂಗಳೂರು ವಿಶ್ವಮಟ್ಟಕ್ಕೆ ಬೆಳೆದಿದೆ ಎನ್ನುತ್ತಾರೆ. ಆದರೆ ಒಂದೇ ಒಂದು ರಸ್ತೆ ಗುಂಡಿಯನ್ನೂ ಮುಚ್ಚಿಲ್ಲ. ಗುಂಡಿ ಮುಚ್ಚುವ ಹೆಸರಿನಲ್ಲಿ 1200 ಕೋಟಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಭಾಷಣದ ಮಧ್ಯೆ ಮಳೆ ಸುರಿಯಲು ಆರಂಭವಾದರೂ ಜನರು ಸ್ಥಳ ಬಿಟ್ಟು ಕದಲಲಿಲ್ಲ. ಇದನ್ನು ಉಲ್ಲೇಖಿಸಿದ ಅವರು, 'ಮಳೆ ಬಂದರೆ ಏನೂ ಆಗಲ್ಲ, ಬೇಕಾದರೆ ನಾನು ಅಲ್ಲಿಗೂ ಬಂದು ಭಾಷಣ ಮಾಡುತ್ತೇನೆ. ಇದು ನಿಮ್ಮ ಹೋರಾಟಕ್ಕೆ ಶುಭ ಸೂಚನೆ. ವರುಣದೇವನೇ ನಿಮ್ಮ ಪರ ನಿಂತಿದ್ದಾನೆ' ಎಂದು ಹೇಳಿದರು. ಮಳೆಯಲ್ಲೇ ನಿಂತು ಭಾಷಣ ಆಲಿಸಿದ ರೈತರನ್ನು ಅಭಿನಂದಿಸಿದ ಅವರು, ರೈತರ ಭೂಮಿ ಉಳಿಸುವ ಹೋರಾಟ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.