ಉತ್ತರ ಮುಂಬೈ ಲೋಕಸಭಾ ಕ್ಷೇತ್ರ: ಸಚಿವ ಪಿಯೂಷ್ ಗೋಯಲ್‌ಗೆ ಕಾಂಗ್ರೆಸ್‌ನ ಭೂಷಣ್ ಸವಾಲು..!
ಈ ಬಾರಿ ಉತ್ತರ ಮುಂಬೈ ಕ್ಷೇತ್ರವನ್ನು ಉತ್ತಮ ಮುಂಬೈ ಮಾಡುವ ಧ್ಯೇಯದೊಂದಿಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸ್ಪರ್ಧಿಸುತ್ತಿದ್ದಾರೆ. ಇದು ಅವರ ಮೊದಲ ಲೋಕಸಭಾ ಕದನ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ಗೋಯಲ್‌ರ ಮೊದಲ ಪ್ರಯತ್ನ ವಿಫಲಗೊಳಿಸಲು ಮುಂಬೈ ನಗರ ಉಪಾಧ್ಯಕ್ಷ ಭೂಷಣ್ ಪಾಟೀಲ್‌ರನ್ನು ಕಣಕ್ಕಿಳಿಸಿದೆ.
ಮುಂಬೈ(ಮೇ.15): ಉತ್ತರ ಮುಂಬೈ ಮಹಾರಾಷ್ಟ್ರದ ಪ್ರಮುಖ ಕ್ಷೇತ್ರಗಳ ಪೈಕಿ ಒಂದು. ನಗರವಾಸಿಗಳೇ ಹೆಚ್ಚಿರುವ ಅದರಲ್ಲೂ, ಗುಜರಾತ್, ರಾಜಸ್ಥಾನ ಮೂಲದ, ಜೈನರು, ಮಾರವಾಡಿ ಸಮುದಾಯವೇ ಹೆಚ್ಚಿರುವ ಕ್ಷೇತ್ರ. ಸಹಜವಾಗಿಯೇ ಇದು ಬಿಜೆಪಿಯ ಭದ್ರಕೋಟೆ.
ಈ ಬಾರಿ ಉತ್ತರ ಮುಂಬೈ ಕ್ಷೇತ್ರವನ್ನು ಉತ್ತಮ ಮುಂಬೈ ಮಾಡುವ ಧ್ಯೇಯದೊಂದಿಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸ್ಪರ್ಧಿಸುತ್ತಿದ್ದಾರೆ. ಇದು ಅವರ ಮೊದಲ ಲೋಕಸಭಾ ಕದನ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ಗೋಯಲ್‌ರ ಮೊದಲ ಪ್ರಯತ್ನ ವಿಫಲಗೊಳಿಸಲು ಮುಂಬೈ ನಗರ ಉಪಾಧ್ಯಕ್ಷ ಭೂಷಣ್ ಪಾಟೀಲ್‌ರನ್ನು ಕಣಕ್ಕಿಳಿಸಿದೆ.
ಹಿಂದೂ-ಮುಸ್ಲಿಂ ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಬದುಕಿಗೆ ಯೋಗ್ಯನಲ್ಲ: ಪ್ರಧಾನಿ ಮೋದಿ
ಹೇಗಿದೆ ಪಿಯೂಷ್ ಅಲೆ?
ಉತ್ತರ ಮುಂಬೈ ಕ್ಷೇತ್ರದಲ್ಲಿ ಕಳೆದೆರಡು ಬಾರಿ ಚಲಾವಣೆಯಾದ ಮತಗಳಲ್ಲಿ ಬರೋಬ್ಬರಿ ಶೇ.70ರಷ್ಟು ಮತಗಳನ್ನು ಪಡೆದು ಭಾರೀ ಅಂತರದಿಂದ ಗೆಲುವಿನ ನಗೆ ಬೀರಿದ್ದ ಕರ್ನಾಟಕ ಮೂಲದ ಉದ್ಯಮಿ ಗೋಪಾಲ್ ಚಿನ್ನಯ್ಯ ಶೆಟ್ಟಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಲೋಕಸಭೆ ಸ್ಪರ್ಧೆಗೆ ಅನುವು ಮಾಡುವ ದೃಷ್ಟಿಯಿಂದ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ. ಆದರೆ ಅದನ್ನು ಬಹಿರಂಗವಾಗಿ ಎಲ್ಲೂ ತೋರಿಸಿಕೊಳ್ಳದ ಅವರು, ಪಿಯೂಷ್ ಜೊತೆಗೂಡಿ ಪ್ರಚಾರ ನಡೆಸುತ್ತಿದ್ದಾರೆ. ಪಿಯೂಷ್ ಅವರೂ ಸಹ ಪ್ರತ್ಯಕ್ಷ ಚುನಾವಣೆಯನ್ನು ಮೊದಲ ಬಾರಿ ಎದುರಿಸುತ್ತಿರುವುದರಿಂದ ಅವರ ಹೆಸರನ್ನು ಒಂದು ತಿಂಗಳ ಮುಂಚೆಯೇ ಪ್ರಕಟಿಸಿ ಬಿಜೆಪಿ ಅವರಿಗೆ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಅದನ್ನು ಉತ್ತಮವಾಗಿ ಬಳಸಿಕೊಂಡಿರುವ ಪಿಯೂಷ್ ಕ್ಷೇತ್ರಾದ್ಯಂತ ಸಂಚಾರ ಮಾಡಿ ಮತದಾರರ ನಾಡಿಮಿಡಿತ ಅರಿಯುವ ಯತ್ನ ಮಾಡಿದ್ದಾರೆ.
ಪ್ರಮುಖವಾಗಿ ಉತ್ತರ ಮುಂಬೈ ಕ್ಷೇತ್ರವನ್ನು ಎಲ್ಲ ಆಯಾಮಗಳಲ್ಲೂ ಅಭಿವೃದ್ಧಿ ಮಾಡಿ ಉತ್ತಮ ಮುಂಬೈ ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದಲ್ಲೇ ಬರುವ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರುವ ಪಿಯೂಷ್, ತಾವು ಸ್ಥಳೀಯರೆಂದು ಜನತೆಯ ಮುಂದೆ ಹೇಳಿಕೊಳ್ಳುತ್ತಾ ಮತಯಾಚನೆ ಮಾಡಿ ಜನರ ಮನ ಗೆಲ್ಲುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಪ್ರಬಲ ಗುಜರಾತಿ ಸಮುದಾಯದ ನಾಯಕನನ್ನು ನಿಲ್ಲಿಸಿರುವುದು ಅವರಿಗೆ ಮುಳುವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಭೂಷಣ್ ಪಾಟಿಲ್ ಗೆಲ್ಲುವರೇ?
ಕಾಂಗ್ರೆಸ್, ಪಿಯೂಷ್ ಗೋಯಲ್ ವಿರುದ್ಧ ಸಮರ್ಥ ಅಭ್ಯರ್ಥಿಯ ಹುಡುಕಾಟಕ್ಕಾಗಿ ಭಾರೀ ಸಮಯ ತೆಗೆದುಕೊಂಡು ಕಡೇ ಕ್ಷಣದಲ್ಲಿ ಮುಂಬೈ ನಗರ ಉಪಾಧ್ಯಕ್ಷ ಭೂಷಣ್ ಪಾಟೀಲ್‌ಗೆ ಮಣೆ ಹಾಕಿದೆ. ಅವರು 2009ರಲ್ಲಿ ಬೋರಿವಿಲಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದು ಸೋತಿದ್ದಾರೆ. ಇಷ್ಟೇ ಅಲ್ಲದೆ ಅವರು ಕಳೆದ 25 ವರ್ಷಗಳಿಂದ ಪಕ್ಷದಲ್ಲಿ ಸಂಘಟನೆ ಮಾಡಿದ್ದು, ಕ್ಷೇತ್ರದ ನಾಡಿಮಿಡಿತ ತಿಳಿದಿರುವ ಹಿನ್ನೆಲೆಯಲ್ಲಿ ಸುಲಭವಾಗಿ ಮತ ಸೆಳೆಯುವ ಸಾಧ್ಯತೆಯಿದೆ.
ಅಲ್ಲದೆ ಅವರು ಕ್ಷೇತ್ರದಲ್ಲಿ ಪ್ರಬಲವಾಗಿರುವ ಗುಜರಾತಿ ಸಮುದಾಯಕ್ಕೆ ಸೇರಿರುವುದು ಅವರ ಪ್ಲಸ್ ಪಾಯಿಂಟ್. ಹಾಗೆಯೇ ಈ ಬಾರಿ ಮಹಾ ವಿಕಾಸ್ ಅಘಾಡಿಯಡಿ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಎನ್‌ಸಿಪಿ ಶರದ್ ಬಣ ಹಾಗೂ ಶಿವಸೇನೆಯ ಉದ್ಧವ್ ಬಣದ ಬೆಂಬಲವೂ ಇವರಿಗೆ ಇದೆ.
ರಾಹುಲ್ ಇಲ್ಲದೇ ಅಮೇಥಿ ಸ್ಮೃತಿ ಇರಾನಿ ಪಾಲಿಗೆ ಸುಲಭದ ತುತ್ತು: ಕಾಂಗ್ರೆಸ್‌ನಿಂದ ಇಲ್ಲಿ ಕೆಎಲ್ ಶರ್ಮಾ ಕಣಕ್ಕೆ
ಸ್ಪರ್ಧೆ ಹೇಗೆ?
ಪಿಯೂಷ್ ಗೋಯಲ್ ಅವರು ಹೇಗೆಯೇ ರಣತಂತ್ರ ಹೆಣೆದರೂ ಅವರಿಗೆ ಮೊದಲ ಚುನಾವಣೆಯ ಹಿನ್ನೆಲೆಯಲ್ಲಿ ಅನುಭವ ಕೊರತೆ ಕಾಡಲಿದೆ. ಇದನ್ನು ಲಾಭವಾಗಿ ಬಳಸಿಕೊಂಡು ಟಿಕೆಟ್ ವಂಚಿತ ಹಾಲಿ ಬಿಜೆಪಿ ಸಂಸದ ಗೋಪಾಲ್ ಚಿನ್ನಯ್ಯ ಶೆಟ್ಟಿ ಒಳಏಟು ನೀಡಿದರೆ ಸಂಕಷ್ಟ ಎದುರಾಗಲಿದೆ. ಹಾಗೆಯೇ ಇವರ ಬೆಂಬಲಕ್ಕೆ ಮಹಾಯುತಿಯ ನಾಯಕರು ನಿಂತಿರುವುದು ಇವರಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಬಹುತೇಕ ಜನಪ್ರತಿನಿಧಿಗಳು ಇವರ ಪರವೇ ಇರುವುದರಿಂದ ಸಂಘಟನೆ ಮಾಡಲು ತ್ರಾಸವಾಗುವ ಸಂಭವವಿಲ್ಲ. ಇತ್ತ ಕಾಂಗ್ರೆಸ್‌ನ ಭೂಷಣ್ ಪಾಟಿಲ್ ಪಕ್ಷ ಸಂಘಟನೆ ಮಾಡಿದ್ದರೂ ಮಹಾರಾಷ್ಟ್ರದಲ್ಲಿ ಬದಲಾದ ರಾಜಕೀಯ ಸಮೀಕರಣದಲ್ಲಿ ಕಾಂಗ್ರೆಸ್ ಪಕ್ಷ ಬುಡಮಟ್ಟದಲ್ಲಿ ತನ್ನ ನೆಲೆಯನ್ನೇ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಸಮಸ್ತ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಸಾಧ್ಯವಾಗದೆ ಪಕ್ಷದ ಸೋಲಿನ ಪರಂಪರೆಯನ್ನು ಮುಂದುವರಿಸಬೇಕಾಗಿ ಬರಬಹುದು.
ಸ್ಟಾರ್ ಕ್ಷೇತ್ರ: ಉತ್ತರ ಮುಂಬೈ
ರಾಜ್ಯ: ಮಹಾರಾಷ್ಟ್ರ
ವಿಧಾನಸಭಾ ಕ್ಷೇತ್ರಗಳು: 6
ಮತದಾನದ ದಿನ: ಮೇ.20
ಪ್ರಮುಖ ಅಭ್ಯರ್ಥಿಗಳು:
ಬಿಜೆಪಿ - ಪಿಯೂಷ್ ಗೋಯಲ್
ಕಾಂಗ್ರೆಸ್ - ಭೂಷಣ್ ಪಾಟಿಲ್
ಬಿಎಸ್‌ಪಿ - ರಯೀಜ್ ಇಮ್ತಿಯಾಜ಼್ ಖಾನ್
2019ರ ಫಲಿತಾಂಶ:
ಗೆಲುವು: ಬಿಜೆಪಿ - ಗೋಪಾಲ್ ಚಿನ್ನಯ್ಯ ಶೆಟ್ಟಿ
ಸೋಲು: ಕಾಂಗ್ರೆಸ್ - ಊರ್ಮಿಳಾ ಮಾತೊಂಡ್ಕರ್