ಚಿತ್ರದುರ್ಗ ತಲುಪಿದ Bharat Jodo Yatra, ಮಳೆಯನ್ನೂ ಲೆಕ್ಕಿಸದೇ ರಾಹುಲ್ ಗಾಂಧಿ, ಡಿಕೆಶಿ ಭಾಗಿ
ಕೋಟೆನಾಡು ತಲುಪಿದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ. ಮಳೆಯನ್ನೂ ಲೆಕ್ಕಿಸದೇ ಯಾತ್ರೆಯಲ್ಲಿ ರಾಹುಲ್ ಗಾಂಧಿ, ಡಿಕೆಶಿ ಭಾಗಿ. ಹಿರಿಯೂರಿನ ಲಂಬಾಣಿ ಸಮುದಾಯದ ಜೊತೆ ರಾಹುಲ್ ಗಾಂಧಿ ಸಂವಾದ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (10): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ಕೋಟೆನಾಡು ಚಿತ್ರದುರ್ಗಕ್ಕೆ ಎಂಟ್ರಿ ಆಗಿತ್ತು. ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರಕ್ಕೆ ಇಂದು ಬೆಳಗ್ಗೆ ಎಂಟ್ರಿ ಆಗಿದ್ದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಚಿತ್ರದುರ್ಗದ ಸ್ಥಳೀಯರು ಕೈ ನಾಯಕರು ಸಾಥ್ ನೀಡಿದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಹಿರಿಯೂರು ನಗರಕ್ಕೆ ಆಗಮಿಸಿದ ರಾಹುಲ್ ಗಾಂಧಿ ಹಾಗೂ ಭಾರತ್ ಜೋಡೋ ಯಾತ್ರೆ ತಂಡ ಆಗಮಿಸಿತು. ಮೊದಲಿಗೆ ನಗರದ ಹೊರವಲಯದಲ್ಲಿ ನಾಗೇಂದ್ರನಾಯ್ಕ್ ಬಡಾವಣೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆದರು. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ರಾಹುಲ್ ಗಾಂಧಿ, ಡಿಕೆಶಿ, ಹಾಗೂ ಕೈ ನಾಯಕರು ಮಧ್ಯಾಹ್ನ ವೇಳೆಗೆ ರಾಹುಲ್ ಗಾಂಧಿ ಹಿರಿಯೂರು ತಾಲ್ಲೂಕಿನ ಬಂಜಾರ ಸಮುದಾಯದವರೊಂದಿಗೆ ಸಂವಾದ ನಡೆಸುವ ಮೂಲಕ ಅವರ ಸಂಕಷ್ಟವನ್ನು ಆಲಿಸಿದರು. ಸುಮಾರು 30 ನಿಮಿಷಗಳ ಕಾಲ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೈ ನಾಯಕರಾದ ಬಿ.ಕೆ ಹರಿಪ್ರಸಾದ್, ಸುರ್ಜೇವಾಲಾ, ಸಲೀಂ ಅಹ್ಮದ್ ಭಾಗಿ ಆಗಿದ್ದರು.
ಬಳಿಕ ಶುರುವಾದ ಯಾತ್ರೆಗೆ ಮೊದಲಿಗೆ ಲಂಬಾಣಿ ಸಮುದಾಯದ ಮಹಿಳೆಯರು ನಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ರಾಹುಲ್ ಗಾಂಧಿಗೆ ಅದ್ದೂರಿ ಸ್ವಾಗತ ಕೋರುವ ಮೂಲಕ ಸಂಜೆಯ ಯಾತ್ರೆಯನ್ನು ಶುರು ಮಾಡಲು ಕಾರಣವಾದರು. ಅಲ್ಲಿಂದ ಶುರುವಾದ ಯಾತ್ರೆ ಹಿರಿಯೂರು ನಗರದ ಮೂಲಕ ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ಕಡೆ ಹೊರಟಿತು. ಈ ವೇಳೆ ಹಿರಿಯೂರು ನಗರದಲ್ಲಿ ರಾಹುಲ್ ಗಾಂಧಿ ಯಾತ್ರೆ ಮಾಡುವ ಸಂದರ್ಭದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ತುಂತುರು ಮಳೆಯನ್ನೂ ಲೆಕ್ಕಿಸದೇ ಮಳೆಯಲ್ಲಿಯೇ ಯಾತ್ರೆಯನ್ನು ಮಾಡುವ ಮೂಲಕ ಸೇರಿದ್ದ ಜನರಲ್ಲಿ ಇನ್ನಷ್ಟು ಎನರ್ಜಿ ತಂದರು.
ಈ ವೇಳೆ ಮಳೆಯಲ್ಲಿಯೇ ರಾಹುಲ್ ಗಾಂಧಿ ಜೊತೆ ಡಿಕೆ ಶಿವಕುಮಾರ್ ಸೇರಿ ಅನೇಕ ಸ್ಥಳೀಯ ನಾಯಕರು ಹೆಜ್ಜೆ ಹಾಕಿದರು. ಬಳಿಕ ಹಿರಿಯೂರು ನಗರ ಬಿಟ್ಟ ಕೂಡಲೇ ಕೂದಲೆಳೆ ಹಂತದಲ್ಲಿಯೇ ಇದ್ದ ರೋಟಿ ಲ್ಯಾಂಡ್ ಡಾಬಾದಲ್ಲಿ ರಾಹುಲ್ ಗಾಂಧಿ ಅವರು ಸಂಜೆ ಸುಮಾರಿಗೆ ಟೀ ಬ್ರೇಕ್ ಬಿಟ್ಟ ಸಮಯದಲ್ಲಿ, ಕಾರ ಮಂಡಕ್ಕಿ, ಮಿರ್ಚಿ, ಸ್ಯಾಂಡ್ವಿಚ್ ಸೇವಿಸುವ ಮೂಲಕ ಹರ್ತಿಕೋಟೆ ಕಡೆಗೆ ಯಾತ್ರೆ ಸಾಗಿತು.
ಇನ್ನೂ ಹರ್ತಿಕೋಟೆ ಬಳಿ ಓಪನ್ ಸ್ಟೇಜ್ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ ದ್ವೇಷ ಮತ್ತು ಅಸೂಯೆಯ ವಿರುದ್ಧ ನಮ್ಮ ಹೋರಾಟ. ಭಾರತ್ ಜೋಡೋ ಯಾತ್ರೆ ಮೂಲಕ ಹೋರಾಟ ಮಾಡ್ತಿದ್ದೇವೆ. ಐಕ್ಯತೆಯ ಭಾರತವನ್ನೂ ಯಾರೂ ವಿಭಜಿಸಲು ಅಸಾಧ್ಯ. ಪ್ರೀತಿ, ವಿಶ್ವಾಸ ಒಂದುಕಡೆ ಮತ್ತೊಂದು ಕಡೆ ದ್ವೇಷ ಇದೆ ಎಂದು ಕಿಡಿಕಾರಿದರು.
ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಕಂಡಿದ್ದೇವೆ. ನಿರುದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿದೆ. ಬೆಲೆ ಏರಿಕೆಯಿಂದ ಬಡ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ತಾಯಂದಿರು ಯಾತ್ರೆಯಲ್ಲಿ ಭೇಟಿ ಆಗ್ತಾರೆ. ಗ್ಯಾಸ್ ಸಿಲಿಂಡರ್ ದುಬಾರಿ ಆಗಿದ್ದರ ಬಗ್ಗೆ ಕೇಳ್ತಾರೆ. ವ್ಯಾಪಾರಿಗಳು ಜಿಎಸ್ ಟಿ ಬಗ್ಗೆ ಕೇಳುತ್ತಾರೆ. ದೇಶದಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಂ1 ಭ್ರಷ್ಟ ಸರ್ಕಾರ. 40 ಪರ್ಸೆಂಟ್ ಕಮಿಷನ್ ಪಡೆಯುವ ಸರ್ಕಾರ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
Chitradurga: ಭಾರತ್ ಜೋಡೋ ಯಾತ್ರೆಗೆ ಸಾಹಿತಿಗಳು, ರೈತ ಮುಖಂಡರು ಸಾಥ್
ಬಿಜೆಪಿ ಶಾಸಕರೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ. 80ಲಕ್ಷಕ್ಕೆ ಪಿಎಸ್ ಐ ಹುದ್ದೆ ಮಾರಾಟ ಆಗುತ್ತಿದೆ. ಸಹಾಯಕ ಪ್ರಾಧ್ಯಾಪಕರು, ಇಂಜಿನಿಯರ್ ಹುದ್ದೆ ಮಾರಾಟಕ್ಕೆ ಇಟ್ಟಿದೆ. ಬೆಲೆ ಏರಿಕೆ, ನಿರುದ್ಯೋಗದಿಂದ ಜನ ಬೇಸತ್ತಿದ್ದಾರೆ ಎಂದರು.
ಸಾಂಸ್ಕೃತಿಕ ಕಲಾಮೇಳದೊಂದಿಗೆ ವಿಜೃಂಭಿಸಿದ ಭಾರತ್ ಜೋಡೋ
ಕಾಂಗ್ರೆಸ್ ಸರ್ಕಾರ ಇದ್ದಾಗ ಎಸ್ಟಿ ಸಮುದಾಯಕ್ಕೆ ಮೀಸಲಾತಿ. ನ್ಯಾ.ನಾಗಮೋಹನದಾಸ್ ಸಮಿತಿ ರಚನೆ ಮಾಡಿದ್ದು ನಮ್ಮ ಸರ್ಕಾರ. ಕಳೆದ ಎರಡೂವರೆ ವರ್ಷದಿಂದ ಈ ಸರ್ಕಾರ ಯಾವ ಕ್ರಮ ಕೈಗೊಂಡಿಲ್ಲ. ಇನ್ನಾದರೂ ತ್ವರಿತವಾಗಿ ಜಾರಿ ಮಾಡಲಿ. ನಿರುದ್ಯೋಗ, ಹಸಿವು, ಬೆಲೆ ಏರಿಕೆ, ರೈತರು, ಸಣ್ಣಪುಟ್ಟ ಉದ್ದಿಮೆದಾರರು, ಕಾರ್ಮಿಕರ ಹಿತದೃಷ್ಟಿಯಿಂದ ಈ ಯಾತ್ರೆ ನಡೆಸುತ್ತಿದ್ದೇವೆ. ಯಾತ್ರೆ ಉದ್ದಕ್ಕೂ ಎಲ್ಲರೂ ನಷ್ಟದಲ್ಲಿರುವ ಬಗ್ಗೆ ಹೇಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವ ಸಹಕಾರ ನೀಡುತ್ತಿಲ್ಲ ಎಂದು ಜನ ಹೇಳುತ್ತಿದ್ದಾರೆ ಎಂದರು.