ಎದೆಗೆ ಗುಂಡಿಕ್ಕಿದರೂ ಅನ್ಯಾಯ ಪ್ರಶ್ನಿಸದೆ ಬಿಡಲ್ಲ: ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್
ಒಂದು ಉಪಚುನಾವಣೆ, ನಂತರ ಎರಡು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ನಾನು ಬೆಂ.ಗ್ರಾ. ಕ್ಷೇತ್ರದ ಸಂಸದನಾಗಿದ್ದೇನೆ. ಈ ಬಾರಿ ಕಳೆದ ಮೂರು ಬಾರಿಗಿಂತ ಹೆಚ್ಚಿನ ಸ್ಪಂದನೆ, ಉತ್ಸಾಹ ಕ್ಷೇತ್ರದ ಮತದಾರರಿಂದ ನನ್ನ ಪರವಾಗಿ ಸಿಗುತ್ತಿದೆ. ಇದು ನನಗೆ ಮತ್ತೆ ಗೆಲುವಿನ ಸಂಪೂರ್ಣ ಆತ್ಮವಿಶ್ವಾಸ ಮೂಡಿಸಿದೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್
ಲಿಂಗರಾಜು ಕೋರಾ
ಬೆಂಗಳೂರು(ಏ.18): ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಡಿ.ಕೆ.ಶಿವಕುಮಾರ್ ಮತ್ತು ದೇವೇಗೌಡರ ಕುಟುಂಬದ ನಡುವಿನ ಜಿದ್ದಾಜಿದ್ದಿ ಎನ್ನಲಾಗುತ್ತಿದೆ. ಒಂದು ಉಪಚುನಾವಣೆಯೂ ಸೇರಿದಂತೆ ಮೂರು ಬಾರಿ ಈ ಕ್ಷೇತ್ರದಿಂದ ನಿರಂತರವಾಗಿ ಗೆಲುವು ಸಾಧಿಸಿರುವ ಹಾಲಿ ಸಂಸದ ಡಿ.ಕೆ.ಸುರೇಶ್ ಕ್ಷೇತ್ರವನ್ನು ಕಾಂಗ್ರೆಸ್ಸಿನ ಭದ್ರಕೋಟೆಯನ್ನಾಗಿ ರೂಪಿಸಿದ್ದಾರೆ. ಆದರೆ, ಆ ಭದ್ರಕೋಟೆಯನ್ನು ಛಿದ್ರಗೊಳಿಸಲು ಬಿಜೆಪಿ-ಜೆಡಿಎಸ್ ಪಕ್ಷಗಳು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸಿವೆ. ಸಹೋದರ ಸುರೇಶ್ ಗೆಲುವನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಬಿರುಸಿನ ಪ್ರಚಾರದ ನಡುವೆಯೂ ಸುರೇಶ್ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...
ಕಳೆದ ಮೂರು ಚುನಾವಣೆಗಿಂತ ಈ ಬಾರಿ ಕ್ಷೇತ್ರದ ಜನರ ಪ್ರತಿಕ್ರಿಯೆ ಹೇಗಿದೆ?
-ಒಂದು ಉಪಚುನಾವಣೆ, ನಂತರ ಎರಡು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ನಾನು ಬೆಂ.ಗ್ರಾ. ಕ್ಷೇತ್ರದ ಸಂಸದನಾಗಿದ್ದೇನೆ. ಈ ಬಾರಿ ಕಳೆದ ಮೂರು ಬಾರಿಗಿಂತ ಹೆಚ್ಚಿನ ಸ್ಪಂದನೆ, ಉತ್ಸಾಹ ಕ್ಷೇತ್ರದ ಮತದಾರರಿಂದ ನನ್ನ ಪರವಾಗಿ ಸಿಗುತ್ತಿದೆ. ಇದು ನನಗೆ ಮತ್ತೆ ಗೆಲುವಿನ ಸಂಪೂರ್ಣ ಆತ್ಮವಿಶ್ವಾಸ ಮೂಡಿಸಿದೆ.
ಬಿಜೆಪಿಗೆ ಸೋಲಿನ ಭೀತಿಯಿಂದ ಐಟಿ, ಇಡಿ ಅಸ್ತ್ರ ಪ್ರಯೋಗ: ಡಿ.ಕೆ.ಸುರೇಶ್
ಕಳೆದ ಹತ್ತು ವರ್ಷಗಳಲ್ಲಿ ನೀವು ಮಾಡಿದ ಪ್ರಮುಖ ಕೆಲಸಗಳ ಬಗ್ಗೆ ಹೇಳುವುದಾದರೆ?
-ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿದ್ದು ನನ್ನ ಕ್ಷೇತ್ರದಲ್ಲಿ. ಇದು ನನಗೆ ಹೆಗ್ಗಳಿಕೆ ಕೂಡ. ಅಂತರ್ಜಲ ವೃದ್ಧಿಗಾಗಿ ಕ್ಷೇತ್ರದ ಎಲ್ಲೆಡೆ ಚೆಕ್ ಡ್ಯಾಮ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ರಾಮನಗರ, ಚನ್ನಪಟ್ಟಣ, ಕುಣಿಗಲ್, ಮಾಗಡಿ, ಕನಕಪುರ, ಆನೇಕಲ್ ಸೇರಿದಂತೆ ಬಹುತೇಕ ಕಡೆ ಕೆರೆಗಳಿಗೆ ನೀರು ತುಂಬಿಸಲು ಕಾರ್ಯಕ್ಕೆ ಹೆಚ್ಚು ಆದ್ಯತೆ ನೀಡಿ ಮಂಜೂರಾತಿ ಮಾಡಿಸಲಾಗಿದೆ. ಇದರಲ್ಲಿ ಕೆಲವು ಮುಗಿದಿವೆ. ಇನ್ನು ಕೆಲವು ಪ್ರಗತಿಯಲ್ಲಿವೆ. ನರೇಗಾ ಅನುದಾನವನ್ನು ದೊಡ್ಡ ಮಟ್ಟದಲ್ಲಿ ಕ್ಷೇತ್ರಕ್ಕೆ ತಂದು ಸಮರ್ಪಕವಾಗಿ ಬಳಸಿದ ತೃಪ್ತಿ ಇದೆ. ಇದರಿಂದ ಪ್ರತಿಯೊಬ್ಬ ರೈತ, ಕೂಲಿ ಕಾರ್ಮಿಕರ ಕುಟುಂಬಕ್ಕೆ ಅನುಕೂಲವಾಗಿದೆ. ನಮ್ಮ ಮಾದರಿಯ ಬಗ್ಗೆ ಕೇಂದ್ರ ತಂಡ ಕೂಡ ಅಧ್ಯಯನ ಮಾಡಿ ಬೇರೆ ಕಡೆ ಅನುಷ್ಠಾನ ಮಾಡಿದ ಉದಾಹರಣೆಗಳಿವೆ.
ಈ ಬಾರಿ ಯಾವ್ಯಾವ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೀರಿ?
-ಕಳೆದ ಹತ್ತು ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಯೋಜನೆಗಳು, ಜನಪರ ಕಾರ್ಯಕ್ರಮಗಳು. ಪ್ರತಿ ಹಂತದಲ್ಲೂ ಸಾರ್ವಜನಿಕರ ಜೊತೆಗಿದ್ದು ಗ್ರಾಮ ಪಂಚಾಯಿತಿ ಸದಸ್ಯನ ರೀತಿಯಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಕೆಲಸ ಮಾಡಿದ್ದೇನೆ. ಯಾವುದೇ ಜಾತಿ, ಧರ್ಮ, ವರ್ಗದ ತಾರತಮ್ಯ ಮಾಡದೆ ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರ ತತ್ವದ ಆಧಾರದ ಮೇಲೆ ಎಲ್ಲ ಜನರಿಗೂ ಅನುಕೂಲಕ್ಕೆ ಶ್ರಮಿಸಿದ್ದೇನೆ. ಇದೇ ನನಗೆ ಶ್ರೀರಕ್ಷೆ. ಜೊತೆಗೆ ನಮ್ಮ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು, ಭವಿಷ್ಯದ ನನ್ನ ಗುರಿಯನ್ನು ಮನವರಿಕೆ ಮಾಡಿಕೊಟ್ಟು ಮತ್ತೆ ನನಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ.
ಈ ಚುನಾವಣೆ ಡಿ.ಕೆ.ಶಿವಕುಮಾರ್ ಮತ್ತು ದೇವೇಗೌಡರ ಕುಟುಂಬದ ನಡುವಿನ ಜಿದ್ದಾಜಿದ್ದಿಯ ಕಣವಾಗಿದೆಯೇ?
-ಇಲ್ಲ, ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೋರಾಟ. ನಾವು ಎದುರಿಸುತ್ತಿರುವುದು ಮೋದಿ ಅವರನ್ನು, ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು. ದೇವೇಗೌಡರು ಈಗಾಗಲೇ ಅವರ ಕೈಯಲ್ಲಿ ಆಗುವುದಿಲ್ಲ ಎಂದು ತಮ್ಮ ಅಳಿಯನ್ನು ಮೋದಿ ಅವರ ಪಕ್ಷಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹಾಗಾಗಿ ಇದು ದೇವೇಗೌಡರ ಕುಟುಂಬದ ವಿರುದ್ಧದ ಹೋರಾಟ ಅಲ್ಲ.
ನಿಮ್ಮ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಿವೆ?
-ಮೈತ್ರಿ ಅಭ್ಯರ್ಥಿ ಎದುರಿಸೋದು ನನಗೆ ಹೊಸದೇನಲ್ಲ. ಹಿಂದೆ ಕೂಡ ಅನಿತಾ ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗಲು ಎದುರಿಸಿದ್ದೇನೆ. ಇವತ್ತು ನಮ್ಮ ಪಕ್ಷ ಸದೃಢವಾಗಿದೆ. ನಾನು ಮಾಡಿದ ಕೆಲಸಕಾರ್ಯಗಳನ್ನು ಜನ ಗುರುತಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ರೈತರ ಜೊತೆ ಇದ್ದು ಪರಿಹಾರ ಒದಗಿಸಿದ್ದೇನೆ. ಇವೆಲ್ಲವೂ ನನ್ನ ಬೆನ್ನಿಗಿದೆ. ಹಾಗಾಗಿ ಕೆಲಸ ಮಾಡುವ ಅಭ್ಯರ್ಥಿ ಬೆಂಬಲಿಸಬೇಕೆಂದು ಬಿಜೆಪಿ, ಜೆಡಿಎಸ್‌ನಿಂದ ಕೂಡ ಅನೇಕ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ.
ಆದರೆ, ಕಾಂಗ್ರೆಸ್‌ನವರನ್ನೇ ಕರೆತಂದು ಜೆಡಿಎಸ್, ಬಿಜೆಪಿಯವರು ಅಂತಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ
-ಅವರು ಹೇಳೋದಕ್ಕೆಲ್ಲಾ ಉತ್ತರ ಕೊಡಲಾಗಲ್ಲ. ಅವರ ಕಾರ್ಯಕರ್ತರು ತಾವಾಗೇ ಬಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಅನುಮಾನವಿದ್ದರೆ ಹಳ್ಳಿಗಳಿಗೆ ಹೋಗಿ ಕಾಂಗ್ರೆಸ್‌ಗೆ ಬಂದಿರುವವರಲ್ಲಿ ಯಾರ್‍ಯಾರು ಯಾವ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು ಅಂತ ತಿಳಿದುಕೊಳ್ಳಲಿ.
ಒಕ್ಕಲಿಗರಿಗೆ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಕೊಡುಗೆ ಏನು ಎನ್ನುವುದು ಕುಮಾರಸ್ವಾಮಿ ಪ್ರಶ್ನೆ?
-ನೋಡಿ, ಈ ಪ್ರಶ್ನೆಯೇ ಅಪ್ರಸ್ತುತ. ಯಾವುದೇ ಜಾತಿ ಆಧಾರದಲ್ಲಿ ಕೆಲಸ ಮಾಡುವ ಮನಸ್ಥಿತಿಯಲ್ಲಿ ನಾವಿಲ್ಲ. ಎಲ್ಲ ಜನಾಂಗದ ಅಭಿವೃದ್ಧಿ ದೃಷ್ಟಿಯಿಂದ ನಾವು ಕೆಲಸ ಮಾಡುತ್ತಿದ್ದೇವೆ. ಮೇಲಾಗಿ ಇದು ರಾಷ್ಟ್ರೀಯ ಚುನಾವಣೆ, ಇಡೀ ರಾಜ್ಯಕ್ಕಾಗಿ ನಮ್ಮ ಪಕ್ಷದ, ನಮ್ಮ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ನಾಮ್ಮ ಕೊಡುಗೆ ಏನು ಎಂಬುದನ್ನು ಜನರ ಮುಂದೆ ಹೇಳಬೇಕೇ ಹೊರತು ಜಾತಿಗೆ ನನ್ನ ಕೊಡುಗೆ ಏನು ಅಂತಲ್ಲ. ಹಾಗಾಗಿ ಈಗ ಒಕ್ಕಲಿಗರಿಗೆ ನಮ್ಮ ಕೊಡುಗೆ ಏನು ಅಂತ ಹೇಳಲೂ ಹೋಗುವುದಿಲ್ಲ. ಒಕ್ಕಲಿಗರಿಗೆ ಕುಮಾರಸ್ವಾಮಿ ಅವರ ಕೊಡುಗೆ ಏನು ಅಂತ ಕೇಳಲೂ ಹೋಗುವುದಿಲ್ಲ.
ಗ್ಯಾರಂಟಿಗಳಿಂದ ಜನರಿಗೆ ಒಳ್ಳೆಯದಾಗಿದೆ ಅಂತೀರಿ. ಕುಮಾರಸ್ವಾಮಿ ಗ್ಯಾರಂಟಿಗಳಿಂದ ಹಳ್ಳಿ ತಾಯಂದಿರು ದಾರಿ ತಪ್ಪಿದ್ದಾರೆ ಅಂದಿದ್ದಾರೆ?
-ಇದು ಮಹಿಳೆಯರ ಬಗ್ಗೆ ಅವರ ಮನಸ್ಸಿನಲ್ಲಿರುವ ಆಲೋಚನೆಯನ್ನು ತೋರಿಸುತ್ತದೆ. ಇಂತಹ ಹೇಳಿಕೆ ನೀಡಿ ಇಡೀ ಮಹಿಳಾ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಅವರಿಂದ ಇಂತಹ ಹೇಳಿಕೆಗಳು ಇದೇ ಮೊದಲಲ್ಲ. ಹಿಂದೆಯೂ ಮೂರ್ನಾಲ್ಕು ಬಾರಿ ಇಂತಹ ಮನಸ್ಥಿತಿ ವ್ಯಕ್ತಪಡಿಸಿದ್ದಾರೆ. ಇದರಿಂದ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಸಹೋದರಿಯರು, ತಾಯಂದಿರು ಸುಮ್ಮನಿರುವುದಿಲ್ಲ, ಚುನಾವಣೆಯಲ್ಲಿ ತಕ್ಕ ಪಾಠವನ್ನೇ ಕಲಿಸುತ್ತಾರೆ ಎಂದು ಭಾವಿಸಿದ್ದೇನೆ.
ನಿಮ್ಮ ಸ್ನೇಹಿತ ಮುನಿರತ್ನ ಏಕೆ ನಿಮಗೆ ಉಲ್ಟಾ ಆದ್ರು? ರಾಕ್ಷಸ ಅಂತೆಲ್ಲಾ ಟೀಕಿಸಿದ್ರು?
-ನೋಡಿ, ಅವರು ಮೊದಲು ನಮ್ಮ ಪಕ್ಷದಲ್ಲಿದ್ದರು. ನಮ್ಮ ಜೊತೆ ಇದ್ದಾಗ ಅವರಿಗೆ ಸಂಪೂರ್ಣ ಸಹಕಾರ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಅವರಿಗೆ ಬೇರೆ ಸಮಸ್ಯೆಗಳು ಎದುರಾದಾಗಲೂ ಅವರ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದೆ. ಆದರೆ, ಆಪರೇಷನ್ ಕಲಮಕ್ಕೆ ಒಳಗಾಗಿ ನಮ್ಮ ಪಕ್ಷ ಬಿಟ್ಟು ಹೋದರು, ಆಮೇಲೆ ಅವರು ಬೇರೆ ದಾರಿ ನೋಡುತ್ತಿದ್ದರು ಹಾಗಾಗಿ ನಮ್ಮ ನಡುವೆ ವ್ಯತ್ಯಾಸಗಳಾದವು. ವೈಯಕ್ತಿಕವಾಗಿ ಅವರೊಂದಿಗೆ ಈಗಲೂ ಯಾವುದೇ ಧ್ವೇಷ ಇಲ್ಲ. ಆದರೆ, ರಾಜಕೀಯವಾಗಿ ಅವರದ್ದು ಬೇರೆ ಪಕ್ಷ, ನಮ್ಮದು ಬೇರೆ ಪಕ್ಷ. ಚುನಾವಣೆ ಸಮಯದಲ್ಲಿ ಬೇರೆ ಬೇರೆ ರೀತಿ ಮಾತನಾಡುತ್ತಾರೆ, ಅದಕ್ಕೆ ಬೇರೆ ಅರ್ಥ ಕಲ್ಪಿಸುವಂತಹದ್ದಿಲ್ಲ.
ರಾಜ್ಯಕ್ಕೆ ಆರ್ಥಿಕ ಅನ್ಯಾಯ ಪ್ರಶ್ನಿಸುವಾಗ ನೀವಾಡಿದ ದೇಶ ವಿಭಜನೆ ಹೋರಾಟದ ಮಾತು ಬಿಜೆಪಿಗೆ ಅಸ್ತ್ರವಾಗಿದೆ?
-ನನ್ನ ಹೇಳಿಕೆ ತಿರುಚಿ ಅವರು ಯಾವ ಅಸ್ತ್ರವನ್ನಾದರೂ ಮಾಡಿಕೊಳ್ಳಲಿ. ಆದರೆ, ಬಿಜೆಪಿಯವರು ಮೊದಲು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಉತ್ತರ ಕೊಡಲಿ. ಪ್ರತೀ ವರ್ಷ 4.30 ಲಕ್ಷ ಕೋಟಿ ರು.ಗೂ ಹೆಚ್ಚಿನ ತೆರಿಗೆ ನೀಡುವ ರಾಜ್ಯಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಏನು? ಬರೀ 50 ಸಾವಿರ ಕೋಟಿ ರು. ವಾಪಸ್ ಕೊಟ್ಟರೆ ಸಾಕಾ? ಉಳಿದ ತೆರಿಗೆ ಹಣ ಏನು ಮಾಡ್ತಿದ್ದಾರೆ. ಕಳೆದ 10 ವರ್ಷದಲ್ಲಿ ರಾಜ್ಯದಿಂದ 24 ಲಕ್ಷ ಕೋಟಿ ರು. ತೆರಿಗೆ ಕೇಂದ್ರಕ್ಕೆ ಹೋಗಿದೆ. ವಾಪಸ್ ಕೊಟ್ಟಿರೋದೆಷ್ಟು? ರಾಜ್ಯದ ನೀರಾವರಿ, ಮೂಲಸೌಕರ್ಯ ಅಭಿವೃದ್ಧಿ ಸೇರಿ ಯಾವ್ಯಾವ ಯೋಜನೆಗಳಿಗೆ ಎಷ್ಟು ಹಣ ನೀಡಿದ್ದಾರೆ. ದೇಶದ ಎಲ್ಲ ಭಾಗದ ಜನ ವಾಸಿಸುವ ಬೆಂಗಳೂರಿಗೆ ನೀರಿನ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅವರ ಕೊಡುಗೆ ಏನು? ಇದು ನನ್ನ ಮೂಲ ಪ್ರಶ್ನೆ. ನ್ಯಾಯ ಕೇಳಿದ್ದಕ್ಕೆ ದೇಶದ್ರೋಹದ ಪಟ್ಟ ಕಟ್ಟುವ ಪ್ರಯತ್ನ ಮಾಡಿದ್ದಾರೆ. ನಾನು ಈಗ ಕೇಳಿರುವ ಪ್ರಶ್ನೆಯನ್ನು ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಕೇಳಿದ್ದರು. ಹಾಗಾದರೆ ಅವರದ್ದೇನು ದೇಶದ್ರೋಹನಾ? ರಾಷ್ಟ್ರಪ್ರೇಮನಾ? ಇದೆಲ್ಲದಕ್ಕೂ ಬಿಜೆಪಿಯವರು ಉತ್ತರ ಕೊಟ್ಟು ಆ ಮೇಲೆ ಬೇಕಿದ್ದರೆ ನನ್ನನ್ನು ಗುಂಡಿಕ್ಕಿ ಕೊಲ್ತಾರಾ ಕೊಲ್ಲಲಿ. ಗುಂಡಿಕ್ಕಿದರೂ
ರಾಜ್ಯಕ್ಕೆ ಅನ್ಯಾಯವಾದಾಗ ಪ್ರಶ್ನಿಸದೆ ಬಿಡಲ್ಲ. ಕಾಂಗ್ರೆಸ್ ಜೊತೆಗಿದ್ದ ಜೆಡಿಎಸ್ ಬಿಜೆಪಿ ಸಖ್ಯ ಬೆಳೆಸಿದೆ. ಎದುರಾಳಿ ಒಂದೆಡೆ ಮೈತ್ರಿ ಅಭ್ಯರ್ಥಿ, ದೇವೇಗೌಡರ ಅಳಿಯ ಸಮಾಜದಲ್ಲೂ ಹೆಸರುವಾಸಿ? ಎದುರಿಸೋದು ಸವಾಲೆನಿಸಿದೆಯಾ?
-ಯಾವುದೇ ಚುನಾವಣೆಯನ್ನು ನಾನು ಸುಲಭ, ಸವಾಲು ಅಂದುಕೊಳ್ಳಲ್ಲ. ನಾನು ಚುನಾವಣೆ ಬಂದಾಗ ಸಿದ್ಧತೆ ಮಾಡಿಕೊಳ್ಳುವವನಲ್ಲ. ನನ್ನ ಚುನಾವಣೆ ನನ್ನ ಸಿದ್ಧತೆಗಳು ಫಲಿತಾಂಶ ಬಂದ ದಿನದಿಂದಲೇ ಪ್ರಾರಂಭವಾಗಿರುತ್ತವೆ. ನನ್ನದು ಐದು ವರ್ಷಗಳ ಚುನಾವಣೆ. ಐದು, ಹತ್ತು ದಿನಗಳ ಚುನಾವಣೆ ಅಲ್ಲ. ಹಾಗಾಗಿ ನನಗೆ ಸುಲಭ, ಸವಾಲು ಎನ್ನುವ ಪ್ರಶ್ನೆ ಇಲ್ಲ. ಕಳೆದ ಚುನಾವಣೆಯಲ್ಲಿದ್ದ ವಾತಾವರಣವೇ ಬೇರೆ. ಆಗಲೇ ಗೆಲುವು ಸಾಧಿಸಿದ್ದೇನೆ. ಈ ಬಾರಿ ಕೇಂದ್ರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ, ಬಿಜೆಪಿಯವರು ಸುಳ್ಳು ಹೇಳುವವರು ಎಂಬುದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ಪರ, ಗ್ಯಾರಂಟಿ ಪರ ಅಲೆ ಇದೆ. ಜೊತೆಗೆ ನನ್ನ ಕೆಲಸಗಳು ನನ್ನ ಕೈಹಿಡಿಯಲಿವೆ.
ರಾಮನಗರವೇ ಕಣ್ಣಂದವರು ಜಿಲ್ಲೆಯೇ ಬಿಟ್ಟು ಹೋದರಲ್ಲ: ಎಚ್‌ಡಿಕೆ ವಿರುದ್ಧ ಡಿ.ಕೆ.ಸುರೇಶ್ ಪರೋಕ್ಷ ವಾಗ್ದಾಳಿ
ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಕದ್ದಾಲಿಕೆ ಪ್ರಕರಣ ಕಾಂಗ್ರೆಸ್ ಕಡೆ ತಿರುಗಿಸಿದ್ದಾರೆ?
-ಈ ವಿಚಾರ ಕಾಂಗ್ರೆಸ್ ಕಡೆ ತಿರುಗಿಸುವ ಪ್ರಶ್ನೆ ಬರಲ್ಲ. ನಿರ್ಮಲಾನಂದ ಶ್ರೀಗಳ ಫೋನ್ ಕದ್ದಾಲಿಕೆ ಪ್ರಕರಣ ನಡೆದಾಗ ಇದ್ದದ್ದು ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ. ಮುಖ್ಯಮಂತ್ರಿಯಾಗಿದ್ದ ಅವರು ಆ ಸಮಯದಲ್ಲಿ ಏನು ಮಾಡಿದ್ದಾರೆ ಅಂತ ಗೊತ್ತಿದೆ. ಅದು ನಿರ್ಮಲಾನಂದ ಸ್ವಾಮೀಜಿ ಅವರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಮಾಡಿದ ಅಗೌರವ. ಸತ್ಯವನ್ನು ತಿರುಚಿ ಬೇರೆ ರೀತಿ ಹೇಳಿಕೆ ಕೊಡುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಆದರೆ, ದಾಖಲೆಗಳಲ್ಲಿ ಸತ್ಯ ಅನ್ನುವುದು ಇದೆಯಲ್ಲಾ ಯಾರು ಬೇಕಾದರೂ ಅದನ್ನು ಪರಿಶೀಲಿಸಬಹುದಲ್ಲ. ಅದಕ್ಕೆ ನಾವ್ಯಾಕೆ ಉತ್ತರ ಕೊಡೋಣ.
ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದೇ ಸ್ಥಾನ ಅದು ನೀವು? ಈ ಬಾರಿ ಎಷ್ಟು ಸ್ಥಾನ ಗೆಲ್ಲಬಹುದು?
-ಈ ಬಾರಿಯ ವಾತಾವರಣ ಈ ಬಾರಿ ರಾಜ್ಯದಲ್ಲೂ ಇಲ್ಲ. ದೇಶದಲ್ಲೂ ಇಲ್ಲ. ಹಾಗಾಗಿ ರಾಜ್ಯದಲ್ಲಿ ಕನಿಷ್ಠ 15 ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ.