ಸತತ ಎರಡು ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್‌ ಸೋದರ ಸಂಬಂಧಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ರವಿ ಮೂರನೇ ಬಾರಿಯೂ ಆಯ್ಕೆಯಾಗುವ ಆತ್ಮ ವಿಶ್ವಾಸ

ವರದಿ : ಪ್ರಭುಸ್ವಾಮಿ ನಟೇಕರ್‌

 ಬೆಂಗಳೂರು(ಡಿ.05): ಸತತ ಎರಡು ಬಾರಿ ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರದಿಂದ ಜಯಗಳಿಸಿ ಮೇಲ್ಮನೆಗೆ ಆಯ್ಕೆಯಾಗಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಸೋದರ ಸಂಬಂಧಿ ಹಾಗೂ ಕಾಂಗ್ರೆಸ್‌ (Congress) ಅಭ್ಯರ್ಥಿ ಎಸ್‌.ರವಿ (S Ravi) ಮೂರನೇ ಬಾರಿಯೂ ಆಯ್ಕೆಯಾಗುವ ಆತ್ಮ ವಿಶ್ವಾಸದಲ್ಲಿದ್ದು, ಹ್ಯಾಟ್ರಿಕ್‌ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ (BJP), ಜೆಡಿಎಸ್‌(JDS) ಪೈಪೋಟಿ ನೀಡಿದರೂ ಕಾಂಗ್ರೆಸ್‌ (Congress) ಕಡೆಗೆ ಹೆಚ್ಚಿನ ಒಲವು ಇರುವುದು ಕಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ ಸುಲಭವಾಗಿ ಕಾಂಗ್ರೆಸ್‌ (Congress) ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ಮತ್ತು ಜೆಡಿಎಸ್‌ (JDS) ಸಹ ಸಜ್ಜಾಗಿದ್ದು, ಬಿರುಸಿನ ಪ್ರಚಾರ ಕೈಗೊಂಡಿವೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಸ್‌.ರವಿ ಅವರು ಮೂರನೇ ಬಾರಿ ಕಣಕ್ಕಿಳಿದ್ದಾರೆ. ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯಾಗಿ ಬಿ.ಸಿ.ನಾರಾಯಣಸ್ವಾಮಿ (BC Narayanswamy) ಅಖಾಡದಲ್ಲಿದ್ದಾರೆ. ಇನ್ನು, ಜೆಡಿಎಸ್‌ ಅಭ್ಯರ್ಥಿಯಾಗಿ ಹಾಲಿ ವಿಧಾನಪರಿಷತ್‌ ಸದಸ್ಯ ಎಚ್‌.ಎಂ.ರಮೇಶ್‌ಗೌಡ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಎಚ್‌ಡಿಕೆ-ಸಿಪಿವೈ ಗುದ್ದಾಟ ಕಾಂಗ್ರೆಸ್‌ಗೆ ವರ?:

ಕ್ಷೇತ್ರವನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್‌ (Congress) ಪಾಲಿಗೆ ಸವಾಲಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ (JDS) ಕೈಜೋಡಿಸಿ ಚುನಾವಣೆ ಎದುರಿಸುತ್ತಿವೆ ಎಂಬ ಮಾತುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಚುನಾವಣೆಯನ್ನು ಮೈ ಮರೆಯುವಂತಿಲ್ಲ. ಬಿಜೆಪಿಯ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ನಡುವೆ ರಾಜಕೀಯ ದ್ವೇಷ ಇರುವ ಕಾರಣ ಕೆಲವೆಡೆ ಬಿಜೆಪಿ (BJP) ಮತ್ತು ಜೆಡಿಎಸ್‌ (JDS) ನಡುವೆ ಪೈಪೋಟಿ ಇದೆ. ಇದು ಕಾಂಗ್ರೆಸ್‌ಗೆ (Congress) ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ. ಆದರೂ, ಜೆಡಿಎಸ್‌ ತನ್ನ ಕೋಟೆಯನ್ನು ವಾಪಸ್‌ ಪಡೆಯಲು ತೀವ್ರ ಕಸರತ್ತು ನಡೆಸುತ್ತಿದೆ. ಬಿಜೆಪಿ ದೊಡ್ಡ ಬಳ್ಳಾಪುರ ಭಾಗದ ನಾಯಕನನ್ನು ಕಣಕ್ಕಿಳಿಸಿರುವುದರಿಂದ ಇತರೆ ಭಾಗದಲ್ಲಿ ಅಭ್ಯರ್ಥಿಯ ವರ್ಚಸ್ಸು ಕೊಂಚ ಕಡಿಮೆಯೇ ಇದೆ. ಆದರೆ, ಪಕ್ಷದ ಸಂಘಟನೆಯಿಂದ ಮತಗಳನ್ನು ಪಡೆವ ಸಾಧ್ಯತೆ ಇದೆ. ಈ ಮೂಲಕ ಕೇಸರಿ ಪತಾಕೆ ಹಾರಿಸುವ ಉತ್ಸಾಹದೊಂದಿಗೆ ಚುನಾವಣೆ ಎದುರಿಸಲು ಸಜ್ಜಾಗಿದೆ.

ಗೌಡರ ಆಪ್ತ ರಮೇಶ್‌: ವಿಧಾನ ಪರಿಷತ್‌ನ ಹಾಲಿ ಸದಸ್ಯ ರಮೇಶ್‌ ಗೌಡ ಅವಧಿ ಮುಂದಿನ ವರ್ಷ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಯಿಂದ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇ ಗೌಡ ಕುಟುಂಬಕ್ಕೆ ಆಪ್ತವಾಗಿರುವ ಕಾರಣ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಹೇಳಲಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ಕೆಲವೆಡೆ ಮಾತ್ರ ಪ್ರಾಬಲ್ಯ ಹೊಂದಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD kumaraswamy ) ಆಡಳಿತವಧಿಯಲ್ಲಿ ಕೈಗೊಂಡಿರುವ ಪ್ರಮುಖ ಕಾರ್ಯಗಳೇ ಜೆಡಿಎಸ್‌ ಅಭ್ಯರ್ಥಿಗೆ ವರದಾನ. ಆದರೆ, ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಮೂರು ಅಭ್ಯರ್ಥಿಗಳಿಗೂ ಇದು ಪ್ರತಿಷ್ಠೆಯ ಕಣ.

ಮತದಾರರ ವಿವರ

ಒಟ್ಟು - 1866

ಪುರುಷ - 907

ಮಹಿಳೆ - 959

2015ರ ಚುನಾವಣಾ (Election) ಫಲಿತಾಂಶ

ಎಸ್‌.ರವಿ (ಕಾಂಗ್ರೆಸ್‌) - 2267

ಎ.ಕೃಷ್ಣಪ್ಪ (ಜೆಡಿಎಸ್‌) - 1889

ಹನುಮಂತೇಗೌಡ (ಬಿಜೆಪಿ) - 170

  •  ಡಿಕೆಶಿ ಸಂಬಂಧಿಗೆ - JDS ಅಭ್ಯರ್ಥಿ ನಡುವೆ ಪೈಪೋಟಿ : ಕೈಗೆ ಗೆಲುವಿನ ಸಿಹಿ ಸಾಧ್ಯತೆ
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೋದರ ಸಂಬಂಧಿ ಕಣಕ್ಕೆ
  • ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ರವಿ ಮೂರನೇ ಬಾರಿಯೂ ಆಯ್ಕೆಯಾಗುವ ಆತ್ಮ ವಿಶ್ವಾಸದಲ್ಲಿ
  • ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್‌ ಪೈಪೋಟಿ ನೀಡಿದರೂ ಕಾಂಗ್ರೆಸ್‌ ಕಡೆಗೆ ಹೆಚ್ಚಿನ ಒಲವು