ಬೆಂಗಳೂರು (ನ.10):  ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಆರ್‌.ಆರ್‌.ನಗರದ ವಿದ್ಯಾನಿಕೇತನ್‌ ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ಸೋಮವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಕೊಠಡಿಗಳಲ್ಲಿ 28 ಟೇಬಲ್‌ಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಯ ಪ್ರತಿ ಟೇಬಲ್‌ಗೆ ಸೂಕ್ಷ್ಮ ವೀಕ್ಷಕ, ಮತ ಎಣಿಕೆ ಮೇಲ್ವಿಚಾರಕ ಮತ್ತು ಮತ ಎಣಿಕೆ ಸಹಾಯ ಎಂದು ಮೂರು ವಿಧದ ಮತ ಎಣಿಕೆ ಸಿಬ್ಬಂದಿ ನಿಯೋಜಿಸಲಾಗಿದೆ. ಅಂತೆಯೇ ಹೆಚ್ಚುವರಿಯಾಗಿ ಮೂರು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

RR ನಗರ : ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡರಾ ಡಿಕೆಶಿ?

ಬೆಳಗ್ಗೆ 7 ಗಂಟೆಗೆ ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್‌ಗಳನ್ನು ಮತ ಎಣಿಕೆ ಕೇಂದ್ರಕ್ಕೆ ಬರಲಿದ್ದಾರೆ. ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬರುವವರೆಗೂ ಯಾವ ಟೇಬಲ್‌ನಲ್ಲಿ ಕೂರಲಿದ್ದೇವೆ ಎಂಬ ಮಾಹಿತಿ ಇರುವುದಿಲ್ಲ ಎಂದು ಹೇಳಿದರು.

25 ಸುತ್ತಿನ ಮತ ಎಣಿಕೆ:  ಬೆಳಗ್ಗೆ 7.45ಕ್ಕೆ ಸ್ಟ್ರಾಂಗ್‌ ರೂಂ ತೆರೆಯಲಿದ್ದು, 8 ಗಂಟೆಗೆ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ. 8.30ಕ್ಕೆ ಇವಿಎಂ ಮತಗಳ ಎಣಿಕೆ ಪ್ರಾರಂಭವಾಗಲಿದೆ. ಒಟ್ಟು 25 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಇವಿಎಂ ಮತ ಎಣಿಕೆ ಮುಗಿದ ಬಳಿಕ ಚುನಾವಣಾ ವೀಕ್ಷಕರು ಒಂದು ಮತಗಟ್ಟೆಯ ವಿವಿ ಪ್ಯಾಟ್‌ ಹಾಗೂ ಚುನಾವಣಾ ಅಭ್ಯರ್ಥಿಗಳು ಆಯ್ಕೆ ಮಾಡುವ ನಾಲ್ಕು ಮತಗಟ್ಟೆಗಳ ವಿವಿ ಪ್ಯಾಟ್‌ ಸೇರಿದಂತೆ ಒಟ್ಟು ಐದು ವಿವಿ ಪ್ಯಾಟ್‌ಗಳಲ್ಲಿರುವ ಸ್ಲಿಪ್‌ ಎಣಿಕೆ ಮಾಡಲಾಗುತ್ತದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ ಎಂದರು.

ಮೊಬೈಲ್‌, ಬ್ಯಾಗ್‌ ನಿಷೇಧ:  ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಪರ ಏಜೆಂಟ್‌ಗಳು ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್‌, ಬ್ಯಾಗ್‌ ತರುವಂತಿಲ್ಲ. ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದ ವ್ಯವಸ್ಥೆ ಮಾಡಿದ್ದು, ಈ ಕೇಂದ್ರದಲ್ಲಿ ಮೊಬೈಲ್‌ ಬಳಸಲು ಅವಕಾಶ ನೀಡಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಯೊಬ್ಬರು ಮಾಸ್ಕ್‌ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮತ ಎಣಿಕೆ ಕೇಂದ್ರದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಮಡಲಾಗಿದೆ. ಅಭ್ಯರ್ಥಿಗಳ ಏಜೆಂಟ್‌ಗಳು ಅಶಿಸ್ತು ತೋರಿದರೆ ಮೂಲಾಜಿಲ್ಲದೆ ಹೊರಗಡೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.

ಬಿಗಿ ಪೊಲೀಸ್‌ ಬಂದೋಬಸ್ತ್

ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾತನಾಡಿ, ಮತ ಎಣಿಕೆ ಕೇಂದ್ರದಲ್ಲಿ ಮೂರು ಹಂತದ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಎರಡೂ ಕಡೆ 100 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್‌ ಬಂದೋ ಬಸ್‌್ತ ಮಾಡಲಾಗಿದೆ. ಮೂವರು ಡಿಸಿಪಿ, 8 ಮಂದಿ ಎಸಿಪಿ, 41 ಮಂದಿ ಎನ್ಸ್‌ಪೆಕ್ಟರ್‌, 105 ಮಂದಿ ಪಿಎಸ್‌ಐ, 179 ಮಂದಿ ಎಎಸ್‌ಐ, 1,068 ಹೆಡೆ ಕಾನ್ಸ್‌ಟೆಬಲ್‌ ಹಾಗೂ ಕಾನ್ಸ್‌ಟೆಬಲ್‌, 83 ಮಂದಿ ಮಫ್ತಿ ಪೊಲೀಸ್‌, 183 ಮಂದಿ ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಒಟ್ಟು 1,670 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.

ಇದರೊಂದಿಗೆ ತಲಾ 18 ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ಅಂತೆಯೆ 104 ಚೀತಾ ಹಾಗೂ 60 ಹೋಯ್ಸಳ ವಾಹನಗಳು, ಕೇಂದ್ರ ಶಸಸ್ತ್ರ ಪೊಲೀಸ್‌ ಪಡೆಯ 1 ತುಕಡಿ ಇರಲಿದೆ. ಹೆಚ್ಚುವರಿಯಾಗಿ ತಲಾ ಒಂದು ಅಗ್ನಿಶಾಮಕ ತಂಡ, ಆ್ಯಂಬುಲೆನ್ಸ್‌, ಹಾಗೂ ವಾಟರ್‌ ಜೆಟ್‌ ನಿಯೋಜಿಸಲಾಗಿದೆ ಮಾಹಿತಿ ನೀಡಿದರು.

ಪಟಾಕಿ, ಮೆರವಣಿಗೆ ನಿಷೇಧ

ಮತ ಎಣಿಕೆ ಕೇಂದ್ರ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆ ವರೆಗೆ ಕ್ಷೇತ್ರದದಲ್ಲಿ ಹೆಚ್ಚು ಜನ ಗುಂಪು ಗೂಡುವುದು, ಕಾರ್ಯಕ್ರಮ ಮಾಡುವ ಹಾಗಿಲ್ಲ. ಅಂತೆಯೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆ ವರೆಗೆ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಹೆಚ್ಚು ಜನ ಸೇರುವಂತಿಲ್ಲ. ಸಂಭ್ರಮಾಚರಣೆ, ಪಟಾಕಿ ಸಿಡಿಸುವಂತಿಲ್ಲ. ಯಾರಾದರೂ ಈ ನಿಯಮ ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಕಮಲ್‌ ಪಂತ್‌ ಎಚ್ಚರಿಸಿದರು.

ಮತ ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ಮಂಗಳವಾರ ಮತ ಎಣಿಕೆ ಕೇಂದ್ರದ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಇರುವುದಿಲ್ಲ. ವಾಹನ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

- ಚುನಾವಣೆಯಲ್ಲಿ ಸ್ಪರ್ಧಿಸಿರುವ ಒಟ್ಟು ಅಭ್ಯರ್ಥಿಗಳು 16

- ಆರ್‌.​ಆರ್‌.ನಗರ ವಿಧಾ​ನ​ಸಭಾ ಕ್ಷೇತ್ರ​ದ ಒಟ್ಟು ಮತದಾರರು 4,62,236

- ಚುನಾವಣೆಯಲ್ಲಿ ಚಲಾಯಿಸಲಾದ ಒಟ್ಟು ಮತಗಳು 2,09,828